ಹೊಸದಿಲ್ಲಿ : ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ಚೀನ ತನ್ನ ನಿಲುವನ್ನು ಇನ್ನಷ್ಟು ಕಠಿನಗೊಳಿಸಿದೆ. ಹ್ಯಾಂಬರ್ಗ್‌ನಲ್ಲಿ ನಡೆಯುವ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಸೇರಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಳಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಕ್ಕೆ ಇದು ಸೂಕ್ತವಾದ ವಾತಾವರಣ ಅಲ್ಲ’ ಎಂದು ಬೀಜಿಂಗ್ ಹೇಳಿದೆ.
ಸಿಕ್ಕಿಂ ಸಮೀಪದ ಗಡಿಯಲ್ಲಿ ಭಾರತ ಮತ್ತು ಚೀನ ಸೇನೆಯ ಸುದೀರ್ಘ ಮುಖಾಮುಖೀಯಿಂದಾಗಿ ಉಭಯ ದೇಶಗಳ ನಡುವೆ ಗಡಿ ಬಿಕ್ಕಟ್ಟು ಮತ್ತು ಉದ್ವಿಗ್ನತೆ ತಲೆದೋರಿದೆ. ಈ ನಡುವೆ ಹ್ಯಾಂಬರ್ಗ್‌ನಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ಉಭಯ ದೇಶಗಳ ನಾಯಕರು ಪಾಲ್ಗೊಳ್ಳುವರಾದರೂ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯದೆಂದು ಚೀನ ಖಡಕ್ ಆಗಿ ಹೇಳಿರುವುದು ಗಡಿ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಜಿ-20 ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಇಂದು ಗುರುವಾರ ರಾತ್ರಿ ಹ್ಯಾಂಬರ್ಗ್ ತಲುಪಲಿದ್ದಾರೆ. ಈ ಶೃಂಗದಲ್ಲಿ ಮೋದಿ ಮತ್ತು ಕ್ಸಿ ಅವರು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನೇರ ಮಾತುಕತೆ ಈ ಸಂದರ್ಭದಲ್ಲಿ ನಡೆಯಲಿದೆಯೇ ಇಲ್ಲವೇ ಎಂಬುದು ತಮಗೂ ಸ್ಪಷ್ಟವಿಲ್ಲ ಎಂಬುದಾಗಿ ಭಾರತ ಸರಕಾರದಲ್ಲಿನ ಮೂಲಗಳು ಹೇಳಿವೆ.
ಗಡಿ ಬಿಕ್ಕಟ್ಟು ನಿವಾರಣೆ ಸಂಬಂಧ ಯಾವುದೇ ಅರ್ಥಪೂರ್ಣ ಮಾತುಕತೆ ನಡೆಸುವುದಕ್ಕೆ ಮುನ್ನ ಭಾರತ ತನ್ನ ಸೇನೆಯನ್ನು ಹಿಂದೆಗೆದುಕೊಂಡು ಸಿಕ್ಕಿಂ ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಚೀನ ಈ ವಾರ ಭಾರತಕ್ಕೆ ಗಂಭೀರ ಎಚ್ಚರಿಕೆ ನೀಡಿದೆ.