ನವದೆಹಲಿ: ವಾತಾವರಣವನ್ನು ಅಧ್ಯಯನ ಮಾಡಲು ಜಾಗತಿಕ ಹವಾಮಾನ ತಜ್ಞರು, ಬಲೂನ್ ಅನ್ನು ಹಾರಿಬಿಟ್ಟಿದ್ದಾರೆ.
ಚೀನ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನೇಪಾಳ-ಚೀನ ಗಡಿಭಾಗದಲ್ಲಿರುವ ಎವರೆಸ್ಟ್ ಶಿಖರದಲ್ಲಿ ಹವಾವಾನ ನೌಕೆಯನ್ನೇ ಹಾರಿಬಿಟ್ಟಿದೆ!
ಇದರ ಮೂಲಕ ಆ ಭಾಗದ ಪರಿಸರ ಸಂಯೋಜನೆ, ಕಪ್ಪು ಇಂಗಾಲದ ಪ್ರಮಾಣ, ಇಂಗಾಲದ ಡೈಆಕ್ಸೈಡ್ ಪ್ರಮಾಣ, ಮೀಥೇನ್ ಯಾವ ಪ್ರಮಾಣದಲ್ಲಿದೆ ಎಂದು ಅಂಕಿಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತದೆ. ಹಾಗೆಯೇ ಭೂಮಿಯಿಂದ ನೀರು ಆವಿಯಾಗಿ ಆಗಸ ಸೇರುವ ಪ್ರಕ್ರಿಯೆಯನ್ನೂ ಅಧ್ಯಯನ ನಡೆಸಲಿದೆ.
ಎವರೆಸ್ಟ್ ಮೇಲೆ ಹಾರುತ್ತಿರುವ ಹವಾಮಾನ ನೌಕೆ ಸಮುದ್ರಮಟ್ಟದಿಂದ 9,032 ಮೀಟರ್ ಎತ್ತರದಲ್ಲಿದೆ. ಅಂದರೆ ಎವರೆಸ್ಟ್‌ಗಿಂತ ಎತ್ತರದಲ್ಲಿದೆ. ಎವರೆಸ್ಟ್ ಪರ್ವತ ಸಮುದ್ರಮಟ್ಟದಿಂದ 8,849 ಮೀ. ಎತ್ತರದಲ್ಲಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಪರ್ವತ ಎನ್ನುವುದು ಇಲ್ಲಿ ಗಮನಾರ್ಹ.
ಈ ಹವಾಮಾನ ನೌಕೆ 9,060 ಕ್ಯೂಬಿಕ್ ಮೀಟರ್ ವಿಸ್ತಾರವಾಗಿದೆ. ಇದರ ತೂಕ 2.625 ಟನ್‌ಗಳು. ಇದರ ಕೆಳಗೆ ನೇತಾಡುತ್ತಿರುವ ವಾಹನದ ತೂಕ 90 ಟನ್‌ಗಳು! ಇಂತಹ ಭಾರೀ ಗಾತ್ರದ ನೌಕೆಯ ಮೂಲಕ ಚೀನ ಮಾಹಿತಿ ಸಂಗ್ರಹಿಸಲು ಹೊರಟಿದೆ.
ಚೀನದ ಹಲವು ವೈಜ್ಞಾನಿಕ ಸಂಸ್ಥೆಗಳು ಈ ಅಧ್ಯಯನದಲ್ಲಿ ಪಾಲ್ಗೊಂಡಿವೆ. ಎವರೆಸ್ಟ್ ಪರ್ವತಶ್ರೇಣಿ ಚೀನ, ಟಿಬೆನ್ ಗಡಿಭಾಗದಲ್ಲೂ ಬರಲಿದೆ. ಆದ್ದರಿಂದ ಟಿಬೆಟ್‌ನ ವಾತಾವರಣವನ್ನು, ಓಜೋನ್ ಪದರದ ಸ್ಥಿತಿಯನ್ನೂ ಅರಿಯಲು ಚೀನಕ್ಕೆ ಸಹಾಯವಾಗಲಿದೆ.