Advertisement
ಕೊರೊನಾ ವೈರಸ್‌ನ ಮೂಲ ಹುಡುಕಾಟದಲ್ಲಿ ಇಡೀ ವಿಶ್ವ ಸಮುದಾಯ ತೊಡಗಿಕೊಂಡಿದ್ದು ಇನ್ನೂ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯ ವಾಗಿಲ್ಲ. ಆದರೆ ಆರಂಭದಿಂದಲೂ ರಕ್ಷಣ ಮತ್ತು ಆರೋಗ್ಯ ತಜ್ಞರು, ವಿಜ್ಞಾನಿಗಳು ಚೀನದತ್ತಲೇ ಬೆಟ್ಟು ಮಾಡುತ್ತ ಬಂದಿದ್ದರೂ ಚೀನ ಮಾತ್ರ ಈ ಆರೋಪವನ್ನು ಅಲ್ಲಗಳೆಯುತ್ತಲೇ ಬಂದಿದೆ. ಕೊರೊನಾ ವೈರಸ್ ಅನ್ನು ಚೀನ ಜೈವಿಕ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಮೂಲಕ ಇಡೀ ವಿಶ್ವ ಸಮುದಾಯದ ವಿರುದ್ಧ ಜೈವಿಕ ಸಮರಕ್ಕೆ ಮುಂದಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ತಜ್ಞರ ತಂಡ ಕೂಡ ವೈರಸ್ ಪತ್ತೆಯಾದ ವುಹಾನ್‌ಗೆ ಭೇಟಿ ನೀಡಿ ಪರಿಶೀಲಿಸಲು ತೆರಳಿದ ವೇಳೆ ಆರಂಭದಲ್ಲಿ ಮೊಂಡಾಟ ತೋರಿದ್ದ ಚೀನ ಕೊನೆಗೆ ಜಾಗತಿಕ ಸಮುದಾಯದ ಪ್ರಬಲ ಒತ್ತಡಕ್ಕೆ ಮಣಿದಿತ್ತು. ತಜ್ಞರ ತಂಡಕ್ಕೆ ವುಹಾನ್‌ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ನೀಡಿತ್ತಾದರೂ ತನ್ನ ಷಡ್ಯಂತ್ರ ಎಲ್ಲೂ ಬಹಿರಂಗಗೊಳ್ಳದಂತೆ ಎಚ್ಚರಿಕೆ ವಹಿಸುವಲ್ಲಿ ಯಶಸ್ವಿ ಯಾಗಿತ್ತು. ಆದರೆ ಈ ನಡೆಗಳು ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿದ್ದವು. ಈಗ ಆಸ್ಟ್ರೇಲಿಯನ್ ಮ್ಯಾಗಜಿನ್ ಸಹಿತ ಕೆಲವು ವೆಬ್‌ಸೈಟ್‌ಗಳಲ್ಲಿ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖೀಸಿ ಪ್ರಕಟವಾಗಿರುವ ವರದಿಗಳು ಕೊರೊನಾ ವೈರಸ್‌ನ ಸೃಷ್ಟಿಕರ್ತನೇ ಚೀನ ಎಂಬ ಬಗ್ಗೆ ಮತ್ತಷ್ಟು ಪುರಾವೆ ಒದಗಿಸಿಕೊಟ್ಟಿವೆ. ಈ ಷಡ್ಯಂತ್ರವನ್ನು ಆರು ವರ್ಷಗಳ ಹಿಂದೆಯೇ ಅಂದರೆ 2015ರಲ್ಲಿಯೇ ಚೀನ ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದ್ದು ಚೀನದ ಕುತಂತ್ರಕ್ಕೆ ಕನ್ನಡಿ ಹಿಡಿದಿದೆ. ವೈರಸ್ ಅನ್ನು ಕೃತಕವಾಗಿ ಬದಲಿಸಿ ಸೋಂಕನ್ನು ಮನುಷ್ಯರಿಗೆ ಪಸರಿಸುವ ಮೂಲಕ ವಿಶ್ವವನ್ನು ವಿನಾಶಕ್ಕೆ ತಳ್ಳುವ ಇರಾದೆ ಚೀನದ್ದಾಗಿತ್ತು ಎಂಬುದು ಈಗ ಲಭಿಸಿರುವ ದಾಖಲೆಗಳಿಂದ ಸಾಬೀತಾ ಗಿದೆ. ವಿಶ್ವದ ಬಲಾಡ್ಯ ರಾಷ್ಟ್ರಗಳ ಮೇಲೆ ಈ ಜೈವಿಕ ಅಸ್ತ್ರ ಪ್ರಯೋಗಿಸಿ ಅವುಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಜರ್ಝ ರಿತಗೊಳಿಸಿ ಪಾರಮ್ಯ ಮೆರೆಯುವ ಹುನ್ನಾರ ಚೀನದ್ದಾಗಿದೆ ಎಂಬುದಂತೂ ಇದರಿಂದ ಸ್ಪಷ್ಟ. ಇನ್ನಾದರೂ ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಿ ಚೀನದ ಮುಖವಾಡವನ್ನು ಕಳಚುವ ಕಾರ್ಯಕ್ಕೆ ಮುಂದಾಗಬೇಕು. ಜಾಗತಿಕ ಶಾಂತಿಗೆ ಬೆದರಿಕೆ ಒಡ್ಡುವ ಮತ್ತು ಆ ಮೂಲಕ ಇಡೀ ಮನುಕುಲದ ಅಳಿವಿಗೆ ಮುಂದಾಗಿರುವ ಚೀನದ ಹುನ್ನಾರ ಬಯಲಿಗೆಳೆಯಲೇ ಬೇಕಿದೆ. ಈ ನಿಟ್ಟಿನಲ್ಲಿ ಇಡೀ ವಿಶ್ವ ಸಮು ದಾಯ ಚೀನದ ವಿರುದ್ಧ ಒಗ್ಗೂಡಿ ಹೋರಾಟ ನಡೆಸಿ ಅದನ್ನು ಏಕಾಂಗಿ ಯಾಗಿಸಬೇಕಿದೆ. ಕೊರೊನಾ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಿ ಜನತೆಯನ್ನು ಭಯಮುಕ್ತರಾಗಿಸಬೇಕಿದೆ ಮತ್ತು ಜೈವಿಕ ಸಮರ ದಂತಹ ಪ್ರವೃತ್ತಿಗೆ ಕಡಿವಾಣ ಹೇರುವ ದೃಢಸಂಕಲ್ಪ ಕೈಗೊಳ್ಳಬೇಕು. Advertisement
ಚೀನದ ಜೈವಿಕ ಸಮರದ ಹುನ್ನಾರ: ಮನುಕುಲಕ್ಕೇ ಮಾರಕ
02:19 AM May 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.