ದೇವದುರ್ಗ: ಭಾರೀ ಮಳೆ ಹಿನ್ನೆಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ, ಭತ್ತ, ಹತ್ತಿ, ತೊಗರಿ, ಕಬ್ಬು ಸೇರಿ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿದೆ. ಹೊನ್ನಟಗಿ ಗ್ರಾಮದ ಮಲ್ಲಪ್ಪ ಎಂಬುವವರ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಹಾಳಾಗಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಬಿಟ್ಟು ಬಿಡದೇ ನಿರಂತರ ಸುರಿದ ಮಳೆಯಿಂದಾಗಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಯಾಗಿವೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡ ಸಮೀಕ್ಷೆ ಮಾಡಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಇಲ್ಲಿವರೆಗೆ 215 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 196 ಹೆಕ್ಟೇರ್ ಪ್ರದೇಶದಲ್ಲಿತೊಗರಿ, 986 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 10 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಷ್ಟವಾಗಿದೆ ಎಂದು ಸಮೀಕ್ಷೆ ತಂಡದ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೂ ಬೆಳೆ ಸಮೀಕ್ಷೆ ಪೂರ್ಣವಾಗಬೇಕಾಗಿದೆ.
ಬೆಳೆಗಳಿಗೆ ರೋಗ: ತಾಲೂಕಿನಾದ್ಯಂತ ನಿರಂತರ ಮಳೆಯ ಅವಾಂತರಕ್ಕೆ ಹತ್ತಿ, ತೊಗರಿ ಬೆಳೆಗಳಿಗೆ ಕೆಲ ರೋಗಗಳ ಲಕ್ಷಣಗಳು ಕಂಡುಬಂದಿವೆ. ಕಾಡಿಗ ರೋಗ, ಕಾಯಿ ಕೊರಕ ಸೇರಿ ಇತರೆ ರೋಗಗಳು ಹರಡುತ್ತಿದ್ದು, ರೈತರು ಆತಂಕ ಪಡುವಂತಾಗಿದೆ. ಹತ್ತಿ ಕೆಂಪು ಬಣ್ಣಕ್ಕೆತಿರುಗಿದೆ. ಕೃಷ್ಣಾ ನದಿ ತೀರದ ಗ್ರಾಮಗಳ ವ್ಯಾಪ್ತಿಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನೆಲಕ್ಕಚ್ಚಿದೆ. ಈ ಭಾರಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ನಾಟಿ ಮಾಡಿದ್ದಾರೆ. ಮೆಣಸಿನಕಾಯಿ ಬೆಳೆದ ರೈತರ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ.
ಹುದ್ದೆಗಳು ಖಾಲಿ: ಕೃಷಿ ಇಲಾಖೆಯಲ್ಲಿ ಕೆಲ ಹುದ್ದೆಗಳು ಖಾಲಿಯಿದ್ದು, ಹುದ್ದೆ ಭರ್ತಿಗೆ ಸರಕಾರ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ರೈತಪರ ಯೋಜನೆ ಸಮರ್ಪಕವಾಗಿ ಪೂರೈಕೆಯಲ್ಲಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಅಧೀಕ್ಷಕರು, ಎಫ್ ಡಿಎಸ್, ಪ್ರಥಮ ದರ್ಜೆ ಸಹಾಯಕ, ಇಬ್ಬರು ಕೃಷಿ ತಾಂತ್ರಿಕ ಅಧಿಕಾರಿಗಳು ಮೂವರು ಪರಿಚಾರ ಹುದ್ದೆಯಲ್ಲಿ ಒಬ್ಬರೂ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಸ್ವಂತ ವಾಹನ ಚಾಲಕ ಸಮಸ್ಯೆ ಇಲಾಖೆಗೆ ಕಾಡುತ್ತಿದೆ.
ಕಟ್ಟಡ ಶಿಥಿಲ: ಪಟ್ಟಣದಲ್ಲಿರುವ ಕೃಷಿ ಸಹಾಯಕ ನಿರ್ದೇಶಕ ಕಚೇರಿ ಶಿಥಿಲಗೊಂಡಿದೆ. ಆಗಾಗ ಮೇಲಿನ ಛತ್ತು ಸಿಮೆಂಟ್ ಉದುರಿ ಬೀಳುತ್ತಿದ್ದು, ಅಧಿಕಾರಿ, ಸಿಬ್ಬಂದಿ ಆತಂಕದಲ್ಲೇ ಕೆಲಸ ಕಾರ್ಯಗಳು ನಿರ್ವಹಿಸಬೇಕಾಗಿದೆ. ಕಟ್ಟಡ ದುರಸ್ತಿಗಾಗಿ ಕೃಷಿ ಅಧಿಕಾರಿ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ. ಅನುದಾನ ಕೊರತೆ ಅಧಿಕಾರಿಗಳ ನಿರ್ಲಕ್ಷéವೋ ಶಿಥಿಲಗೊಂಡ ಕಟ್ಟಡದಲ್ಲೇ ಭಯದಿಂದ ಕೆಲಸಗಳು ಮಾಡಬೇಕಾಗಿದೆ.
ಮಳೆಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆ ಕಾರ್ಯ ನಡೆದಿದೆ. ಭತ್ತ, ಮೆಣಸಿನಕಾಯಿ, ಹತ್ತಿ, ತೊಗರಿ ಸೇರಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ. ವರದಿ ತಾಲೂಕಾಡಳಿತಕ್ಕೆ ನೀಡಲಾಗಿದೆ
.-ಡಾ.ಎಸ್.ಪ್ರಿಯಾಂಕ್, ಸಹಾಯಕ ಕೃಷಿ ನಿರ್ದೇಶಕಿ.
ಬೆಳೆ ನಷ್ಟದ ಸಮೀಕ್ಷೆ ಪಾರಾದರ್ಶಕವಾಗಿ ನಡೆಯಬೇಕು. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ನೊಂದ ರೈತರಿಗೆಪರಿಹಾರ ನೀಡಬೇಕು. ವಿಳಂಬ ಧೋರಣೆ ತಾಳಿದಲ್ಲಿ ಹೋರಾಟ ಅನಿವಾರ್ಯತೆ
.-ರೂಪಾ ನಾಯಕ,ಜಿಲ್ಲಾ ಸಂಚಾಲಕಿ, ರೈತ ಸಂಘ
-ನಾಗರಾಜ ತೇಲ್ಕರ್