Advertisement

ಹೊಸ ಸ್ವರೂಪದ ವಿರುಪಾ

12:30 AM Mar 08, 2019 | |

ಒಬ್ಬ ಹುಡುಗನಿಗೆ ಮಾತು ಬರಲ್ಲ. ಕಿವಿಯೂ ಕೇಳಿಸಲ್ಲ. ಇನ್ನೊಬ್ಬ ಹುಡುಗನಿಗೆ ಕಣ್ಣೇ ಕಾಣಲ್ಲ. ಆದರೆ, ಬದುಕನ್ನು ಸವಾಲಾಗಿ ಸ್ವೀಕರಿಸಿರುವ ಆ ಇಬ್ಬರು ಹುಡುಗರು ಪ್ರತಿಭಾವಂತರು. ಅಂತಹ ಪ್ರತಿಭೆಗಳನ್ನು ಗುರುತಿಸಿ ಸಿನಿಮಾವೊಂದರಲ್ಲಿ ಅವರನ್ನೇ ಹೀರೋಗಳನ್ನಾಗಿ ಮಾಡಿರುವುದು ವಿಶೇಷ. ಹೌದು. ಮಾತು ಬಾರದ, ಕಣ್ಣು ಕಾಣದ ಇಬ್ಬರು ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ. ಅದೇ ಹೊಸ ಸುದ್ದಿ. ಅಂದಹಾಗೆ, ಆ ಚಿತ್ರದ ಹೆಸರು “ವಿರುಪಾ’ ಇದು ಬಹುತೇಕ ಹಂಪಿಯಲ್ಲೇ ಚಿತ್ರೀಕರಿಸಿದ ಚಿತ್ರ. ಅಷ್ಟೇ ಅಲ್ಲ, ಹಂಪಿ ಸುತ್ತಮುತ್ತಲಿನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿರುವುದು ಮತ್ತೂಂದು ವಿಶೇಷ. “ವಿರುಪಾ’ದಲ್ಲಿ ಮೂವರು ಮಕ್ಕಳ ಕಥೆ ಸಾಗುವುದರಿಂದ ಇದು ಮಕ್ಕಳ ಚಿತ್ರ. ಬಹುತೇಕ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿದೆ. ಈ ಚಿತ್ರವನ್ನು ಪುನೀಕ್‌ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಢಾಪ್ನಿ ನೀತು ಡಿಸೋಜ ನಿರ್ಮಾಣವಿದೆ. ಡಿಕ್ಸನ್‌ ಜಾಕಿ ಡಿಸೋಜ ಕಾರ್ಯಕಾರಿ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ. ಇದೇ ಮೊದಲ ಸಲ ಮಾಧ್ಯಮ ಮುಂದೆ ಬಂದಿದ್ದ ಚಿತ್ರತಂಡ “ವಿರುಪಾ’ ಕುರಿತು ಹೇಳಿಕೊಂಡಿತು.

Advertisement

ಮೊದಲು ಮಾತಿಗಿಳಿದದ್ದು ನಿರ್ದೇಶಕ ಪುನೀಕ್‌ ಶೆಟ್ಟಿ. “ನಾನು ಮೂಲತಃ ಫೋಟೋಗ್ರಾಫ‌ರ್‌. ಕಳೆದ ಎಂಟು, ಹತ್ತು ವರ್ಷಗಳ ಹಿಂದೆ ಹಂಪಿಗೆ ಹೋಗಿದ್ದಾಗ ಹೊಳೆದಿದ್ದ ಕತೆ ಇದು. ಎಲ್ಲೋ ಒಂದು ಕಡೆ ಸಿನಿಮಾ ಮಾಡುವ ಆಸೆ ಚಿಗುರಿತು. ನನ್ನ ಆಸೆಗೆ ನಿರ್ಮಾಪಕರು ಆಸರೆಯಾದರು. ಹೊಸ ವಿಷಯ ಇಟ್ಟುಕೊಂಡು ಮಕ್ಕಳ ಚಿತ್ರದಲ್ಲಿ ಏನಾದರೊಂದು ಸಂದೇಶ ಕೊಡಬೇಕು ಎಂಬ ಹಠವಿತ್ತು. ಇಲ್ಲಿರುವ ಮಕ್ಕಳಿಗೆ ನಟನೆ ಗೊತ್ತಿಲ್ಲ. ಹಂಪಿ ಸುತ್ತಮುತ್ತ ಇರುವ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ಕೊಡಿಸಿ, ಕ್ಯಾಮೆರಾ ಮುಂದೆ ನಿಲ್ಲಿಸಿದ್ದೇನೆ. ವಿರುಪಾ ಅನ್ನುವುದು ಮೂವರು ಮಕ್ಕಳ ಕಥೆ. ಒಬ್ಬನು ವಿನ್ಸೆಂಟ್‌, ಇನ್ನೊಬ್ಬ ರುಸ್ತುಂ ಮತ್ತೂಬ್ಬ ಪಾಕ್ಷ. ಈ ಮೂವರ ಮೊದಲ ಅಕ್ಷರ ಹೆಕ್ಕಿ “ವಿರುಪಾ’ ಎಂಬ ಹೆಸರಿಡಲಾಗಿದೆ. ಈಗಿನ ಮಕ್ಕಳಿಗೊಂದು ಸಂದೇಶ ಇಲ್ಲಿದೆ. ಸಿಟಿ ಮತ್ತು ಹಳ್ಳಿ ಬದುಕಿನ ನಡುವಿನ ವ್ಯತ್ಯಾಸ ಇಲ್ಲಿ ಹೇಳಲಾಗಿದೆ. ಮಕ್ಕಳ ಮನಸ್ಥಿತಿ ಕುರಿತ ವಿಷಯ ಇಲ್ಲಿದೆ. ಹಳ್ಳಿಯಲ್ಲಿರುವ ಹುಡುಗನೊಬ್ಬ ಸಿಟಿಗೆ ಹೋಗಿ, ಅಲ್ಲಿ ಇರಲಾರದೆ ಪುನಃ ಹಳ್ಳಿಗೆ ಬರುವ ಕಥೆ ಇಲ್ಲಿದೆ. ಹಳ್ಳಿ ಮತ್ತು ನಗರ ಸಂಸ್ಕೃತಿ ಅನಾವರಣಗೊಳ್ಳಲಿದೆ. ಮನಮಿಡಿಯುವ ಕಥೆಯೂ ಜೊತೆಗಿದೆ’ ಎಂಬುದು ನಿರ್ದೇಶಕರ ಮಾತು.

ನಿರ್ಮಾಪಕ ಡಿಕ್ಸನ್‌ ಜಾಕಿ ಡಿಸೋಜ ಅವರಿಗೆ ಇದು ಮೊದಲ ಪ್ರಯತ್ನ. “ಹಂಪಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ದೊಡ್ಡ ಸವಾಲಾಗಿತ್ತು. ಚಿತ್ರೀಕರಣ ವೇಳೆ ಸಾಕಷ್ಟು ಕಷ್ಟಪಟ್ಟಿದ್ದುಂಟು. ಮಕ್ಕಳು ಕೊಟ್ಟ ಸಹಕಾರ, ತಂಡ ಕೊಟ್ಟ ಪ್ರೋತ್ಸಾಹದಿಂದ ಒಳ್ಳೆಯ ಚಿತ್ರ ಮಾಡಿದ ತೃಪ್ತಿ ನನಗಿದೆ. ಕನ್ನಡಕ್ಕೆ ಇದೊಂದು ಹೊಸ ಬಗೆಯ ಚಿತ್ರ ಆಗಲಿದೆ’ ಎಂದರು ಡಿಕ್ಸನ್‌ ಜಾಕಿ.

ನಿಜ ಬದುಕಲ್ಲಿ ಅಂಧನಾಗಿರುವ ಶಯಾಲ್‌ ಗೋಮ್ಸ್‌, ಚಿತ್ರದಲ್ಲೂ ಅಂಧನಾಗಿಯೇ ನಟಿಸಿದ್ದಾನೆ. ಆ ಬಗ್ಗೆ ಹೇಳಿಕೊಳ್ಳುವ ಶಯಾಲ್‌, “ನನ್ನದು ಭಟ್ಕಳ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಥ್ಯಾಂಕ್ಸ್‌ ಹೇಳುತ್ತೇನೆ. ನಟನೆ ಗೊತ್ತಿಲ್ಲದ ನನ್ನನ್ನು ಕರೆದು, ವೇದಿಕೆ ಕೊಟ್ಟಿದ್ದಾರೆ. ನಟನೆ ಗೊತ್ತಿರಲಿಲ್ಲ. ಈ ಚಿತ್ರದ ಮೂಲಕ ಕಲಿತಿದ್ದೇನೆ. ಜೂನಿಯರ್‌ ಸಂಗೀತ ಆಗಿದೆ, ತಬಲ ಮತ್ತು ಕೀ ಬೋರ್ಡ್‌ ನುಡಿಸುತ್ತೇನೆ ಎಂದರು ಶಯಾಲ್‌.

ಪಾಕ್ಷ ಪಾತ್ರ ನಿರ್ವಹಿಸಿರುವ ವಿಷ್ಣು, “ನನ್ನದು ಹೊಸಪೇಟೆ. ಚಿತ್ರದಲ್ಲಿ ಶಯಾಲ್‌ ಗೆಳೆಯನಾಗಿ ನಟಿಸಿದ್ದೇನೆ. ಗೆಳೆಯರ ಜೊತೆ ಸುತ್ತಾಡಿ, ಕೊನೆಗೆ ಸಿಟಿಗೆ ಹೋಗಿ ಅಲ್ಲಿ ಇರಲಾಗದೆ ಮರಳಿ ಹಳ್ಳಿಗೆ ಬರುವ ಪಾತ್ರ ನನ್ನದು’ ಎಂದು ವಿವರ ಕೊಟ್ಟರು ವಿಷ್ಣು. ಇನ್ನು, ಮಾತು ಬಾರದ ಚರಣ್‌ನಾಯಕ್‌, ಎಲ್ಲರಿಗೂ ಕೈ ಮುಗಿಯುವ ಮೂಲಕ ಪ್ರೋತ್ಸಾಹಿಸಿ ಅಂತ ಸನ್ನೆ ಮಾಡಿ ಸುಮ್ಮನಾದ. ಉಪನ್ಯಾಸಕ ಆಗಿರುವ ಮಂಜು ಅವರಿಲ್ಲಿ ಉಪನ್ಯಾಸಕರಾಗಿಯೇ ನಟಿಸಿದ್ದಾರಂತೆ. “ಕಾಲೇಜು ದಿನಗಳಲ್ಲಿ ಕಂಡ ಕನಸು ಈ ಚಿತ್ರದ ಮೂಲಕ ಈಡೇರಿದೆ. ನಿರ್ದೇಶಕರು ಕರೆದು ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಇದೊಂದು ನೆನಪಲ್ಲುಳಿಯುವ ಚಿತ್ರ’ ಅಂದರು ಅವರು. ಚಿತ್ರಕ್ಕೆ ಪ್ರದೀಪ್‌ ಮಳ್ಳೂರು ಎರಡು ಹಾಡುಗಳಿಗೆ ಸಂಗೀತ ನೀಡಿ­ದ್ದಾರೆ. ಅನಂತ್‌ರಾಜ್‌ ಅರಸ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಬೇಬಿ ಪ್ರಾಪ್ತಿ, ಡ್ಯಾನಿಯಲ್‌ ಲೆಸ್ಸಾ­ಸ­ರ್‌, ಫೆಲ್ಸಿ ರಿತೀಶ್‌ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next