ಮಕ್ಕಳ ಭವ್ಯ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಹಾಗಿದ್ದರೂ ಶೇ.35ರಷ್ಟು ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ದೀರ್ಘಾವಧಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊಂದಲ ಅಥವಾ ತಿಳಿವಳಿಕೆ ಕೊರತೆ ಇರುತ್ತದೆ ಎಂಬುದನ್ನು ಹೂಡಿಕೆ ಪರಿಣತರು ತಮ್ಮ ಸಮೀಕ್ಷೆಯಿಂದ ಕಂಡು ಕೊಂಡಿದ್ದಾರೆ.
ಅನೇಕರಿಗೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆಯನ್ನು ಆರಂಭಿಸಬೇಕು ಎಂಬುದೇ ಗೊಂದಲದ ವಿಷಯವಾಗಿರುತ್ತದೆ. ಇನ್ನು ಹಲವರು ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೆ ಕೆಲವರು ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ತಡವಾಗಿಯೇ ಬಂದಿರುತ್ತಾರೆ !
ಅನೇಕ ಹೆತ್ತವರಿಗೆ ಮಕ್ಕಳ ಭವಿಷ್ಯದ ಗುರಿ ಸಾಧಿಸಲು ಯುಲಿಪ್ ಯೋಜನೆ ಒಳ್ಳೆಯದೇ, ಸುಖನ್ಯಾ ಸಮೃದ್ಧಿ ಯೋಜನೆ ಆದೀತೇ, ಪಿಪಿಎಫ್ ಆದೀತೇ, ಬ್ಯಾಂಕ್ ನಿರಖು ಠೇವಣಿ ಒಳ್ಳೆಯದೇ, ಚಿನ್ನ ಖರೀದಿಸಿಡುವುದು ಬುದ್ಧಿವಂತಿಕೆಯಾದೀತೇ ಅಥವಾ ರಿಯಲ್ ಎಸ್ಟೇಟ್ (ಭೂ ಹೂಡಿಕೆ) ಉತ್ತಮವಾದೀತೇ ? ಎಂಬ ಪ್ರಶ್ನೆಗಳು ಕಾಡುತ್ತಿರುತ್ತವೆ. ಆದರೆ ಬಹಳಷ್ಟು ಮಂದಿ ತಪ್ಪು ಸಲಹೆಗಳಿಗೆ ಮಾರು ಹೋಗಿ ತಪ್ಪು ನಿರ್ಧಾರಗಳನ್ನು ಕೈಗೊಂಡು ತಪ್ಪು ಮಾಧ್ಯಮಗಳಲ್ಲಿ ಹಣ ಹೂಡುತ್ತಾರೆ ಎನ್ನುವುದು ವಾಸ್ತವವಾಗಿರುತ್ತದೆ ಎನ್ನುತ್ತಾರೆ ಹೂಡಿಕೆ ಪರಿಣತರು.
ಮಕ್ಕಳ ಭವಿಷ್ಯದ ಗುರಿ ಸಾಧನೆಗೆ ಹಣ ಹೂಡಿಕೆ ಆರಂಭಿಸುವ ಮೊದಲು ಸಾಧಿಸಬೇಕಾದ ಗುರಿಯ ಬಗ್ಗೆ ನಿಖರತೆ ಇರುವುದು ಒಳ್ಳೆಯದು. ಹೆತ್ತವರಲ್ಲಿ ಶೇ.35 ಮಂದಿಗೆ ತಮ್ಮ ಮಕ್ಕಳ ಶಿಕ್ಷಣವೇ ತಮ್ಮ ಬದುಕಿನ ಬಲುದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆ ಎಂದು ಪರಿಣತರು ಹೇಳುತ್ತಾರೆ.
ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಯಾವ ಮ್ಯೂಚುವಲ್ ಫಂಡ್ ಒಳ್ಳೆಯದು ಎಂಬ ಪ್ರಶ್ನೆ ಸರಣಿಯಲ್ಲಿ ಮೊದಲನೇಯದ್ದಾಗಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.
ಮ್ಯೂಚುವಲ್ ಫಂಡ್ ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಆರಂಭಿಸಲಾಗುವ ಹೂಡಿಕೆ ನಿಯಮಿತವಾಗಿರುತ್ತದೆ ಎಂಬುದು ಖರೆ. ತಿಂಗಳ ನಿರ್ದಿಷ್ಟ ಕಂತಿನ ಸಿಪ್ ಮೂಲಕ ಹಣ ಹೂಡುವ ಸೌಕರ್ಯ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಇರುತ್ತದೆ. ಆದರೆ ನಮ್ಮ ಗುರಿ ಕಿರು ಅವಧಿಯದ್ದೇ, ಮಧ್ಯಮಾವಧಿಯದ್ದೇ ಅಥವಾ ದೀರ್ಘಾವಧಿಯದ್ದೇ ಎಂಬುದನ್ನು ನಾವು ತೀರ್ಮಾನಿಸಬೇಕಿರುತ್ತದೆ.
ಎಂಟರಿಂದ ಹತ್ತು ವರ್ಷಗಳ ದೀರ್ಘಾವಧಿಯ ಗುರಿ ಸಾಧನೆಯ ಉದ್ದೇಶವಿದ್ದರೆ ಈಕ್ವಿಟಿ ಫಂಡ್ ಅಥವಾ ಡೈವರ್ಸಿಫೈಡ್ ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಆಕರ್ಷಕವಾಗಿರುತ್ತದೆ. ಏಕೆಂದರೆ ಇದರಲ್ಲಿ ಶೇ.12ರ ಗರಿಷ್ಠ ಇಳುವರಿ ಇರುತ್ತದೆ ಮತ್ತು ಹೂಡಿಕೆ ರಿಸ್ಟ್ ಎಂಬುದು ನಗಣ್ಯವಾಗಿರುತ್ತದೆ. ಹಾಗಿದ್ದರೂ ಹೂಡಿಕೆಯ ವಿಷಯದಲ್ಲಿ ಲಾರ್ಜ್ ಮತ್ತು ಮಿಡ್ ಕ್ಯಾಪ್ ಫಂಡ್ ಗಳ ಮಿಶ್ರಣವನ್ನು ಆಯ್ಕೆ ಮಾಡುವುದೇ ಲೇಸು ಎನ್ನುತ್ತಾರೆ ಪರಿಣತರು.
ಇಎಲ್ಎಸ್ಎಸ್ ಮೂಲಕದ ಹೂಡಿಕೆಯಲ್ಲಿ , ಎಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ಮೂಲಕದ ಹೂಡಿಕೆಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ ಮತ್ತು ಹೂಡಿಕೆಯ ಲಾಕ್ ಇನ್ ಪೀರಿಯಡ್ ಕೇವಲ ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ.
ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಮಕ್ಕಳ ಭವಿಷ್ಯದ ಗುರಿಯನ್ನು ನಿರ್ಧರಿಸಿ ಈ ಕೆಳಗಿನ ರೀತಿಯಲ್ಲಿ ಹೂಡಿಕೆಗೆ ತೊಡಗುವುದು ಸಮಂಜಸವಾಗಿರುತ್ತದೆ :
ಲಾಂಗ್ ಟರ್ಮ್ (ದೀರ್ಘಾವಧಿ) – ಎಂಟಕ್ಕಿಂತ ಹೆಚ್ಚು ವರ್ಷದ ಅವಧಿ : ಈಕ್ವಿಟಿ ಅಥವಾ ಈಕ್ವಿಟಿ ಓರಿಯೆಂಟೆಡ್ ಫಂಡ್, ಇಎಲ್ಎಸ್ಎಸ್
ಹೂಡಿಕೆ ಹಂಚಿಕೆ : ಈಕ್ವಿಟಿ : ಶೇ.80-85, ಡೆಟ್ : ಶೇ.15-20.
ಮೀಡಿಯಂ ಟರ್ಮ್ – ಮಧ್ಯಮಾವಧಿ – 5ರಿಂದ 7 ವರ್ಷ : ಬ್ಯಾಲೆನ್ಸ್ಡ್ ಅಥವಾ ಹೈಬ್ರಿಡ್ ಫಂಡ್
ಹೂಡಿಕೆ ಹಂಚಿಕೆ : ಈಕ್ವಿಟಿ ಶೇ.60-65; ಡೆಟ್ : ಶೇ.35-40
ಶಾರ್ಟ್ ಟರ್ಮ್ – ಕಿರು ಅವಧಿ – 2 ರಿಂದ 3 ವರ್ಷ ಅವಧಿ : ಹೂಡಿಕೆ ಹಂಚಿಕೆ : ಈಕ್ವಿಟಿ : ಶೇ.25 ರಿಂದ ಶೇ.30; ಡೆಟ್ : ಶೇ.70-75.
ಮ್ಯೂಚುವಲ್ ಫಂಡ್ ಹೂಡಿಕೆಯ ಇಳುವರಿಯು ಮಾರುಕಟ್ಟೆಗೆ ಅನುಗುಣವಾಗಿ ಅತ್ಯುತ್ತಮ ಇಳುವರಿಯನ್ನು ಕೊಡುವುದರಿಂದ ಇವು ಆಕರ್ಷಕ ಹೂಡಿಕೆಯ ಮಾಧ್ಯಮಗಳಾಗಿರುತ್ತವೆ.