Advertisement

ಶಾಲಾ ಆವರಣದಲ್ಲಿ ಮೇಳೈಸಿತು ಮಕ್ಕಳ ಸಂತೆ

12:18 PM Nov 15, 2018 | |

ಸುಬ್ರಹ್ಮಣ್ಯ: ತಾಜಾ ಹಣ್ಣಿನ ರಸ, ತರಕಾರಿಗಳು, ಹಣ್ಣಿನ ಗಿಡಗಳು, ಹೂವು, ಚುರುಮುರಿ, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಮೊದಲಾದುವುಗಳ ಭರ್ಜರಿ ವ್ಯಾಪಾರ. ಇದು ಯಾವುದೋ ಪೇಟೆಯಲ್ಲಾಗುವ ಮುಕ್ತ ಸಂತೆಮಾರು ಕಟ್ಟೆಯಲ್ಲ. ಬದಲಾಗಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಂದ ಭರ್ಜರಿಯಾಗಿ ನಡೆದ ಮೆಟ್ರಿಕ್‌ ಮೇಳದ ಸಂತೆ ಇದು. ಸದಾ ಓದುವುದು, ಪಾಠ, ಆಟದಲ್ಲಿ ತಲ್ಲೀನರಾಗುತ್ತಿದ್ದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ತಾಜಾ ತರಕಾರಿ, ಹಣ್ಣು, ಹೂವು ವಿವಿಧ ರೀತಿಯ ಗಿಡಗಳನ್ನು ಶಾಲಾ ಆವರಣದಲ್ಲಿ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದರು. 

Advertisement

ಆವರಣದುದ್ದಕ್ಕೂ ಸ್ಟಾಲುಗಳು
ಇಲ್ಲಿ ವಿದ್ಯಾರ್ಥಿಗಳು ವ್ಯಾಪಾರಿಗಳಾದರೆ ಶಿಕ್ಷಕರು, ಹೆತ್ತವರು ಹಾಗೂ ಕೆಲ ಸಾರ್ವಜನಿಕರು ಕೂಡ ಗ್ರಾಹಕರಾಗಿದ್ದರು. ವಿದ್ಯಾರ್ಥಿಗಳು ಶಾಲಾವರಣದ ಉದ್ದಕ್ಕೂ ಸ್ಟಾಲ್‌ ಹಾಕಿ ಮನೆಯಿಂದ ತಂದಿದ್ದ ಚೀನಿಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಪಡುವಲಕಾಯಿ, ಬಾಳೆಹಣ್ಣು, ಹರಿವೆ ಸೊಪ್ಪು, ಹಸಿಮೆಣಸು, ಟೊಮಾಟೋ, ಸಿಹಿಗೆಣಸು, ಬಸಳೆ, ಎಳನೀರು, ಕೊಕ್ಕೊ, ವೀಳ್ಯದೆಲೆ, ತೆಂಗಿನಕಾಯಿ, ಕಬ್ಬು, ಸೀಬೆ ಕಾಯಿ, ಪರಂಗಿಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧಗಳ ಸಸ್ಯ, ಹೂವಿನ ಗಿಡ, ತಾಳೆಹಣ್ಣು, ಗುಲಾಬಿ, ಮಲ್ಲಿಗೆ, ಅರಿಶಿಣ, ನಿಂಬೆ, ಬದನೆ, ಹಣ್ಣುಗಳಾದ ಕಿತ್ತಳೆ, ಚಕ್ಕೋತ ಮೊದಲಾದುವುಗಳನ್ನು ಮಾರಾಟ ಮಾಡಿ ಸಾವಿರಾರು ರೂ. ಲಾಭದಾಯಕ ವ್ಯವಹಾರ ಮಾಡಿಕೊಂಡರು.

ಸಾವಯವ ಬೆಳೆಗಳು
ಮಕ್ಕಳ ಸಂತೆಯಲ್ಲಿ ಮನೆಗಳಲ್ಲಿ ಬೆಳೆದ ಸಾವಯವ ತರಕಾರಿಗಳನ್ನೆ ಮಾರಾಟಕ್ಕೆ ಇಡಲಾಗಿತ್ತು. ಅಂಗಡಿಯಿಂದ ಖರೀದಿಸಿ ತರದಂತೆ ಮಕ್ಕಳಿಗೆ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಂದ ಸೂಚನೆ ನೀಡಲಾಗಿತ್ತು. ಮನೆಯಲ್ಲಿ ಬೆಳೆಸಿದ ಬೆಳೆಗಳು ಮತ್ತು ಅದರಿಂದ ಸಿದ್ಧಪಡಿಸಿದ ತಿಂಡಿ ತಿನಿಸುಗಳನ್ನು ಮಕ್ಕಳು ಮಾರಾಟಕ್ಕೆ ಇಟ್ಟಿದ್ದರು. ನಡೆದ ಮೆಟ್ರಿಕ್‌ ಮೇಳವನ್ನು ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ ಮುತ್ತಪ್ಪ ಉದ್ಘಾಟಿಸಿದರು. ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ., ಸಂಸ್ಥೆಯ ಸಂಚಾಲಕ ಗಣೇಶ್‌ ಪ್ರಸಾದ್‌, ಚಂದ್ರಶೇಖರ ನಾಯರ್‌, ಮುಖ್ಯ ಶಿಕ್ಷಕಿ ವಿದ್ಯಾರತ್ನಾ ಉಪಸ್ಥಿತರಿದ್ದರು. 

70 ಸಾವಿರ ರೂ. ವ್ಯಾಪಾರ 
ಮೇಳದಲ್ಲಿ ಬೆಳಗ್ಗೆ ಸಂತೆ ಆರಂಭಗೊಂಡ ಕ್ಷಣದಿಂದಲೇ ಭರ್ಜರಿ ವ್ಯಾಪಾರ ನಡೆಯಿತು. ಮಧ್ಯಾಹ್ನ ವೇಳೆಗೆ ಎಲ್ಲ ಸ್ಟಾಲುಗಳಲ್ಲಿ ಸೊತ್ತುಗಳು ಖಾಲಿಯಾದವು. ಪ್ರೌಢಶಾಲಾ ವಿಭಾಗದಿಂದ 44 ಹಾಗೂ ಪ್ರಾ. ಶಾಲಾ ವಿಭಾಗದಿಂದ 37 ಸ್ಟಾಲುಗಳನ್ನು ತೆರೆಯಲಾಗಿತ್ತು. ಅತ್ಯಲ್ಪ ಅವಧಿಯಲ್ಲಿ 70 ಸಾವಿರ ರೂ. ವ್ಯವಹಾರ ನಡೆಸಲಾಗಿದೆ.

ಜ್ಞಾನವೃದ್ಧಿ
ಪೇಟೆಯಲ್ಲಿನ ಸಂತೆಯಲ್ಲಿ ಖರೀದಿ ಮಾಡುವುದನ್ನು ನೋಡಿದ್ದೆ. ಇವತ್ತು ಸ್ವತಃ ಅನುಭವ ಆಯಿತು. ವ್ಯಾಪಾರ ನಡೆಸುವುದು ಎಂದರೆ ಅದರಲ್ಲಿ ಒಂದು ರೀತಿ ಖುಷಿಯ ಅನುಭವಿದೆ. ವಿದ್ಯೆಯೊಂದಿಗೆ ವ್ಯಾಪಾರ ವಹಿವಾಟಿನ ಜ್ಞಾನವೃದ್ಧಿಗೆ ಇದು ಸಹಕಾರಿಯಾಯಿತು.
– ಲಕ್ಷ್ಮೀ ಚೌಹಾಣ್‌,
6ನೇ ತರಗತಿ ವಿದ್ಯಾರ್ಥಿನಿ

Advertisement

ವ್ಯಾಪಾರ ಮನೋಭಾವ
ಶಿಕ್ಷಣದಲ್ಲಿ ಒಂದು ರೀತಿಯ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳಲ್ಲಿ ವ್ಯಾಪಾರ ಮನೋಭಾವ ಬೆಳೆಯಬೇಕು. ವ್ಯವಹಾರ ಜ್ಞಾನ ಬೆಳೆಸಿಕೊಂಡಲ್ಲಿ ಮುಂದೆ ಅದು ಅವರಿಗೆ ಉಪಯೋಗಕ್ಕೆ ಬರುತ್ತದೆ. ಈ ಉದ್ದೇಶ ಇರಿಸಿಕೊಂಡು ಎಳವೆಯಲ್ಲೆ ಮಕ್ಕಳಲ್ಲಿ ಕೆಲ ಅನುಭವಗಳನ್ನು ಬಿತ್ತುವ ಉದ್ದೇಶ ಮೆಟ್ರಿಕ್‌ ಮೇಳದ್ದಾಗಿತ್ತು.
– ಗಣೇಶ್‌ ಪ್ರಸಾದ್‌,
ವಿದ್ಯಾಸಂಸ್ಥೆಯ ಸಂಚಾಲಕರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next