ರಾಯಚೂರು: ಬಿಸಿಯೂಟದಲ್ಲಿ ಅನ್ನ, ಸಾರು, ಚಿತ್ರಾನ್ನ ತಿಂದು ಬೇಸತ್ತ ಮಕ್ಕಳಿಗೆ ದೋಸೆ, ಇಡ್ಲಿಯಂಥ ರುಚಿಕರ ಉಪಾಹಾರ ತಯಾರಿಸಿ ಕೊಟ್ಟರೇ..!
ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ರೀತಿ ಉಪಾಹಾರ ಮಾಡುವ ಮೂಲಕ ಗಮನ ಸೆಳೆಯಲಾಗಿದೆ. ನೂರಾರು ಮಕ್ಕಳಿಗೆ ಉಪಾಹಾರ ಮಾಡಿ ಬಡಿಸುವುದು ಕಷ್ಟ ವಾದರೂ ಮಕ್ಕಳ ಖುಷಿಗೋಸ್ಕರ ಎರಡು ಬಾರಿ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲೆಯ ಮುಖ್ಯಶಿಕ್ಷಕ ಯಲ್ಲಪ್ಪ ಹಂದ್ರಾಳ ವಿದ್ಯಾರ್ಥಿಗಳ ಜತೆ ಸಮಾಲೋಚನೆ ಮಾಡುವಾಗ ನಿಮಗೆ ಬಿಸಿಯೂಟದಲ್ಲಿ ಏನೇನು ನೀಡಬೇಕು ಎಂದು ಕೇಳಿದ್ದರು. ಆಗ ಒಬ್ಬ ವಿದ್ಯಾರ್ಥಿ ದೋಸೆ ನೀಡಿದರೆ ರುಚಿಯಾಗಿರುತ್ತದೆ ಎಂದು ಹೇಳಿದ್ದ. ಇದಕ್ಕೆ ಉಳಿದ ಮಕ್ಕಳು ಕೂಡ ಹೌದೆಂದು ತಲೆಯಾಡಿಸಿದ್ದರು. ಮಕ್ಕಳ ಬಯಕೆ ಕೇಳಿ ಸುಮ್ಮನಾಗದ ಮುಖ್ಯಶಿಕ್ಷಕ, ಕಳೆದ ಆ.20ರಂದು ಬಿಸಿಯೂಟದ ಬದಲಿಗೆ ದೋಸೆಯನ್ನೇ ಮಾಡಿಸಿದ್ದರು.
ಎರಡು ದಿನದ ಶ್ರಮ: ದೋಸೆ ಮಾಡುವುದೆಂದರೆ ಅನ್ನ, ಸಾರು, ಚಿತ್ರಾನ್ನ ಮಾಡಿದಷ್ಟು ಸುಲಭವಲ್ಲ. ಒಂದು ದಿನ ಮುಂಚಿತವಾಗಿಯೇ ಅಕ್ಕಿ, ಉದ್ದಿನ ಬೇಳೆ ನೆನೆ ಹಾಕಿ ರಾತ್ರಿ ರುಬ್ಬಿಕೊಂಡು ಹಿಟ್ಟು ತಯಾರಿಸಬೇಕು. ಅಲ್ಲದೇ, 217 ವಿದ್ಯಾರ್ಥಿಗಳಿಗೆ ದೋಸೆ ಮಾಡಲು ಹೆಚ್ಚುವರಿ ಹೆಂಚುಗಳು ಬೇಕು.
ಇಷ್ಟೆಲ್ಲ ಕೆಲಸಗಳ ಮಧ್ಯೆಯೂ ಅಡುಗೆ ಸಿಬ್ಬಂದಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡರೆ, ಶಾಲೆ ಶಿಕ್ಷಕರು ಕೂಡ ಇದಕ್ಕೆ ಸಾಥ್ ನೀಡಿದರು. ಸರ್ಕಾರ ಬಿಸಿಯೂಟಕ್ಕೆ ನೀಡುವ ಅಡುಗೆ ಸಾಮಗ್ರಿಗಳ ಜತೆಗೆ ಹೆಚ್ಚುವರಿ ಸಾಮಗ್ರಿಗಳನ್ನು ಖರೀದಿಸಲು ಶಿಕ್ಷಕರು ಆರ್ಥಿಕ ನೆರವು ನೀಡಿದರು. ಅಡುಗೆ ಸಿಬ್ಬಂದಿ ಮನೆಯಿಂದಲೇ ದೋಸೆ ಹೆಂಚುಗಳನ್ನು ತಂದಿದ್ದರು. ದೋಸೆ ಜತೆಗೆ ಟೊಮ್ಯಾಟೊ ಗೊಜ್ಜು, ಕೊಬ್ಬರಿ ಚಟ್ನಿ ಮಾಡಲಾಗಿತ್ತು. ಎಲ್ಲ ಮಕ್ಕಳಿಗೆ ಸಾಕೆನಿಸು ವಷ್ಟು ದೋಸೆ ಮಾಡಿ ಬಡಿಸಲಾಯಿತು. ಮಕ್ಕಳು ಬಹಳ ಖುಷಿಯಿಂದಲೇ ತಿಂದು ಸಂಭ್ರಮಿಸಿದರು. ಮಕ್ಕಳ ಖುಷಿಯನ್ನು ಕಂಡು ಶಿಕ್ಷಕರು ಈಚೆಗೆ ಇಡ್ಲಿ ಸಾಂಬಾರ್ ಕೂಡ ಮಾಡಿ ಬಡಿಸಿದ್ದಾರೆ. ಈ ಬಗ್ಗೆ ಎಸ್ ಡಿಎಂಸಿ ಸದಸ್ಯರು, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇಚ್ಛಾಶಕ್ತಿ ತೋರಿದರೆ ಸಾಧ್ಯ
ಸರ್ಕಾರ ನೀಡುವ ಅಡುಗೆ ಸಾಮಗ್ರಿಗಳಲ್ಲಿ ಈ ರೀತಿ ಉಪಾಹಾರಗಳನ್ನು ಪದೇ ಪದೇ ಮಾಡುವುದು ಕಷ್ಟದ ಕೆಲಸ. ವಿಶೇಷ ದಿನಗಳಲ್ಲಿ, ಶಿಕ್ಷಕರ ಜನ್ಮದಿನ ಸೇರಿ ಅಪರೂಪಕ್ಕೊಮ್ಮೆ ಮಾಡಬಹುದಷ್ಟೇ. ಆದರೆ, ತಿಂಗಳಿಗೆ ಒಂದೆರಡು ಬಾರಿಯಾದರೂ ಈ ರೀತಿ ಮಾಡಿದರೆ ಮಕ್ಕಳು ಹೆಚ್ಚು ಆಸಕ್ತಿಯಿಂದ ಶಾಲೆಗೆ ಬರುತ್ತಾರೆ. ಇದಕ್ಕೆ ಸರ್ಕಾರ ಬಿಸಿಯೂಟದ ಸಾಮಗ್ರಿಗಳ ಜತೆಗೆ ಹೆಚ್ಚುವರಿ ಅಡುಗೆ ಪದಾರ್ಥಗಳನ್ನು ನೀಡಲು ಇಚ್ಛಾಶಕ್ತಿ ತೋರಬೇಕು ಎನ್ನುವುದು ಶಿಕ್ಷಕರ, ಪಾಲಕರ ಅನಿಸಿಕೆಯಾಗಿದೆ.
ನಾವು ಮಕ್ಕಳ ಜತೆ ಬೆರೆತು ಅವರ ಇಷ್ಟ-ಕಷ್ಟಗಳನ್ನು ಕೇಳಿದಾಗ ಅವರ ಕಲಿಕೆ ಸುಧಾರಣೆ ಮಾಡಲು ಸಾಧ್ಯ. ಮಕ್ಕಳು ಇಷ್ಟ ಪಟ್ಟಿದ್ದರು ಎನ್ನುವ ಕಾರಣಕ್ಕೆ ನಮ್ಮ ಶಾಲೆಯಲ್ಲಿ ಬಿಸಿಯೂಟದ ಬದಲಿಗೆ ಒಮ್ಮೆ ದೋಸೆ, ಮತ್ತೂಮ್ಮೆ ಇಡ್ಲಿ ಮಾಡಲಾಗಿತ್ತು. ಇದನ್ನು ಮಕ್ಕಳು ಬಹಳ ಆಸ್ವಾದಿಸಿದರು. ಆದರೆ, ನಮಗಿರುವ ಲಭ್ಯ ಸಂಪನ್ಮೂಲದಲ್ಲಿ ಪದೇ ಪದೇ ಈ ರೀತಿ ಮಾಡಲು ಸಾಧ್ಯವಿಲ್ಲ. ಬಿಸಿಯೂಟದಲ್ಲಿ ಒಂದೇ ರೀತಿಯ ಊಟ ತಿನ್ನಲು ಮಕ್ಕಳು ಬೇಸರ ಪಟ್ಟುಕೊಳ್ಳುತ್ತಾರೆ.
● ಯಲ್ಲಪ್ಪ ಹಂದ್ರಾಳ, ಮುಖ್ಯಶಿಕ್ಷಕ, ಹಿರೇರಾಯಕುಂಪಿ ಪ್ರೌಢಶಾಲೆ
●ಸಿದ್ಧಯ್ಯಸ್ವಾಮಿ ಕುಕನೂರು