Advertisement

ಮಕ್ಕಳ ಸಾವು : ಮೊಂಬತ್ತಿ ಉರಿಸಿ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ

07:10 AM Aug 17, 2017 | Team Udayavani |

ಉಡುಪಿ: ಉತ್ತರ ಪ್ರದೇಶದ ಗೋರಖ್‌ಪುರದ ಬಾಬಾ ರಾಘವದಾಸ್‌ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದ 79 ಮಕ್ಕಳಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ಬುಧವಾರ ಕ್ಲಾಕ್‌ ಟವರ್‌ ಮುಂಭಾಗ ಮೊಂಬತ್ತಿ ಉರಿಸಿ, ಕಪ್ಪುಪಟ್ಟಿ ಧರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 

Advertisement

ಬಳಿಕ ಮಾತನಾಡಿದ ಮಹಿಳಾ ಕಾಂಗ್ರೆಸ್‌  ಜಿಲ್ಲಾಧ್ಯಕ್ಷೆ ವೇರೋನಿಕಾ ಕರ್ನೇಲಿಯೋ ಅವರು, ಸಿಎಂ ಯೋಗಿ ಆದಿತ್ಯನಾಥ್‌ ಅವರ ಸ್ವಕ್ಷೇತ್ರದಲ್ಲಿಯೇ ಈ ರೀತಿಯ ದುರಂತ ನಡೆದಿರುವುದು ಸರಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಯೋಗಿ ಅವರು ಬ್ರಹ್ಮಚಾರಿ ಆಗಿರುವುದರಿಂದ ಅವರಿಗೆ ಹೆಣ್ಣಿನ, ಸಂಸಾರದ ನೋವಿನ ಅರಿವು ಇಲ್ಲವೆನ್ನಿಸುತ್ತದೆ ಅದಕ್ಕಾಗಿಯೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ಸಾಮಾನ್ಯವೆನ್ನುವಂತೆ ನೋಡಿರುವುದು. ಪ್ರಧಾನಿ ಸಹಿತ ಎಲ್ಲ ಬಿಜೆಪಿ ನಾಯಕರು ಮೌನ ವಹಿಸಿರುವುದು ಖೇದಕರ ಸಂಗತಿ ಎಂದರು.  ಯುವ ಮುಖಂಡ ಅಮೃತ್‌ ಶೆಣೈ ಮಾತನಾಡಿ ವಿಜ್ಞಾನ- ತಂತ್ರಜ್ಞಾನ, ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಕ್ಷೀಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ನಾವೆಲ್ಲರೂ ತಲೆತಗ್ಗಿಸಬೇಕಾದ ರೀತಿಯಲ್ಲಿ ದುರಂತ ನಡೆದಿದೆ. ಆರೋಗ್ಯ ರಕ್ಷಣೆ ಆ ರಾಜ್ಯದ ಆದ್ಯ ಕರ್ತವ್ಯ.

ಸಿಎಂ ಸ್ವಕ್ಷೇತ್ರದಲ್ಲಿಯೇ ಆಸ್ಪತ್ರೆಯ ಹಣ ಪಾವತಿ ಬಾಕಿಯಿಂದ ಆಕ್ಸಿಜನ್‌ ಪೂರೈಕೆಗೆ ತೊಂದರೆಯುಂಟಾಗಿರುವುದು ಅವಮಾನಕರ. ಅಮಿತ್‌ ಷಾ ಹಾಗೂ ಎಲ್ಲ ಬಿಜೆಪಿ ನಾಯಕರು ಮನುಷ್ಯನ ಜೀವವನ್ನು ಹಗುರವಾಗಿ ಪರಿಗಣಿಸಿದೆ. ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. 

ಶ್ರದ್ಧಾಂಜಲಿ ಸಭೆಯಲ್ಲಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ಸದಸ್ಯರಾದ ಜನಾರ್ದನ ಭಂಡಾರ್ಕರ್‌, ಸೆಲಿನಾ ಕರ್ಕೇಡಾ, ಮಹಿಳಾ ಕಾಂಗ್ರೆಸ್‌ ಪ್ರ. ಕಾರ್ಯದರ್ಶಿ ಡಾ| ಸುನಿತಾ, ನಾಯಕಿಯರಾದ ಸರಳಾ ಕಾಂಚನ್‌, ಜ್ಯೋತಿ ಹೆಬ್ಟಾರ್‌, ರೋಶ್ನಿ ಒಲಿವೆರೋ, ಮಮತಾ ಶೆಟ್ಟಿ, ಸುಜಾತ ಆಚಾರ್ಯ, ಗೀತಾ ಕಾಂಚನ್‌, ಗೋಪಿ ನಾಯ್ಕ, ಮೇರಿ ಡಿಸೋಜ ಮತ್ತಿತರರು ಭಾಗವಹಿಸಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next