ಕಲಬುರಗಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ 2ನೇ ಸ್ಥಾನ ಮತ್ತು ವಿಜ್ಞಾನದಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಒಬ್ಬ ರೈತನ ಮಗ, ಇನ್ನೊಬ್ಬ ಬಟ್ಟೆ ಕಟಿಂಗ್ ಮಾಡುವ ಮಾಸ್ಟರ್ ಮಗ. ಇಬ್ಬರೂ ಬಡತನ ರೇಖೆಯಲ್ಲಿರುವ ಕುಟುಂಬದ ಕುಡಿಗಳು ಎನ್ನುವುದು ಗಮನೀಯ.
ಜೇವರ್ಗಿ ತಾಲೂಕಿನ ಮುರುಗಾನೂರು ನಿವಾಸಿ ಹಾಗೂ ಕದಂಬ ಪಿಯು ಕಾಲೇಜಿನ ವಿದ್ಯಾರ್ಥಿ ನಿಂಗಣ್ಣ ಸಿದ್ದಣ್ಣ ಅಗಸರ್ 593 ಅಂಕ ಪಡೆದು ಕಲಾ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದಾನೆ. ಒಂದೇ ಒಂದು ಅಂಕದಲ್ಲಿ ಮೊದಲ ಸ್ಥಾನ ಕೈತಪ್ಪಿ ಹೋಗಿದೆ. ಕಲಬುರಗಿ ನಗರದ ಖಾಜಾ ಕಾಲೋನಿಯ ನಿವಾಸಿ ಹಾಗೂ ಶ್ರೀಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹ್ಮದ್ ಕ್ವಿಜರ್ 596 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾನೆ.
ರೈತನ ಮಗನ ಸಾಧನೆ: ಜೇವರ್ಗಿ ತಾಲೂಕಿನ ಮುರಾಗಾನೂರು ನಿವಾಸಿ ಹಾಗೂ ಜೇವರ್ಗಿ ಕದಂಬ ಕಾಲೇಜು ವಿದ್ಯಾರ್ಥಿ ರೈತನ ಮಗ ನಿಂಗಣ್ಣ ಸಿದ್ದಪ್ಪ ಅಗಸರ್ ಹಾಸ್ಟೆಲ್‌ನಲ್ಲಿದ್ದು ದಿನಾಲು ಏಳು ಗಂಟೆ ಅಭ್ಯಾಸ ಮಾಡುತ್ತಿದ್ದ. ಅಪ್ಪ ಸಿದ್ದಣ್ಣ, ಅವ್ವ ಬೋರಮ್ಮ ರೈತರು. ಇಬ್ಬರು ಎರಡು ಎಕರೆ ಜಮೀನಿನಲ್ಲಿ ದಿನಾಲೂ ದುಡಿದು ನನಗೆ ಓದಿಸಿದ್ದಾರೆ. ಅವರ ಶ್ರಮ ಮತ್ತು ನನ್ನ ಶ್ರದ್ಧೆಗೆ ಇವತ್ತು ಪ್ರತಿಫಲ ದೊರೆತಿದೆ. ಐಎಎಸ್ ಮಾಡುವ ಆಸೆ ಇದೆ. ಅದಕ್ಕಾಗಿ ಎಲ್ಲ ತಯಾರಿ ಸಮೇತ ಬಿಎ ಓದುತ್ತೇನೆ. ಕಾಲೇಜಿನಲ್ಲಿ ಅಧ್ಯಾಪಕರು ಹೇಳಿದ್ದನ್ನು ಕೇಳಿ ಓದಿಕೊಳ್ಳುತ್ತಿದ್ದೆ. ಎನ್‌ಸಿಇಆರ್‌ಟಿ, ತರಗತಿಯ ಪುಸ್ತಕ, ನೋಟ್ಸ್‌ಗಳು, ಉಪನ್ಯಾಸಕರ ಶಿಸ್ತುಬದ್ಧ ಬೋಧನೆಯನ್ನು ಶ್ರದ್ಧೆಯಿಂದ ಕೇಳಿ ಓದಿದ್ದೆ. ಸಿಇಟಿ, ನೀಟ್ ಪರೀಕ್ಷೆ ಎದುರಿಸಿದೆ. ನನ್ನ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಖಣದಾಳ ಸರ್ ಅವರ ಬೆಂಬಲ ನಿಜಕ್ಕೂ ನನ್ನ ಓದಿನ ಹಂಬಲ ಇಮ್ಮಡಿ ಮಾಡಿದೆ ಎನ್ನುತ್ತಾನೆ ನಿಂಗಣ್ಣ.
ವಿಜ್ಞಾನ ಟಾಪರ್ ಕ್ವಿಜರ್: ಕಲಬುರಗಿ ನಗರದ ಖಾಜಾ ಕಾಲೋನಿಯ ಬಟ್ಟೆ ಕಟಿಂಗ್ ಮಾಸ್ಟರ್ ಮಹ್ಮದ್ ಗೌಸೋದ್ದೀನ್ ಪುತ್ರ ಮಹ್ಮದ್ ಕ್ವಿಜರ್ ಶ್ರೀಗುರು ಕಾಲೇಜಿನ ವಿದ್ಯಾರ್ಥಿ. ಈತ ಕಲ್ಯಾಣ ಕರ್ನಾಟಕದ ಟಾಪರ್ ಕೂಡ ಆಗಿದ್ದಾನೆ. ಮೆಡಿಕಲ್ ಓದಬೇಕು ಎನ್ನುವ ಕನಸು ಕಟ್ಟಿರುವ ಈತ, ದಿನಾಲು ಆರೇಳು ಗಂಟೆ ಓದಿನಲ್ಲೇ ಇರುತ್ತಿದ್ದ. ಶಾಲೆಯಲ್ಲಿ ಹೇಳಿದ್ದನ್ನು ಮನೆಯಲ್ಲಿ ಕುಳಿತು ಮನನ ಮಾಡುತ್ತಿದ್ದ. ಕಿರು ಪರೀಕ್ಷೆಗಳು, ಕೋವಿಡ್ ಸಮಯದ ಆನ್‌ಲೈನ್ ಕ್ಲಾಸುಗಳು ಮತ್ತು ನನ್ನ ಕಾಲೇಜಿನ ಅಧ್ಯಾಪಕರ ಕಲಿಕೆಯ ಗುಣಮಟ್ಟ ಈ ಸಾಧನೆ ಕಾರಣವಾಗಿದೆ. ಅದೆಲ್ಲದಕ್ಕಿಂತ ಏನೇ ಕೇಳಿದರೂ ಇಲ್ಲ ಎನ್ನದ ಅಪ್ಪ(ಅಬ್ಟಾಜಾನ್), ಸದಾ ಕಾಲ ನನ್ನ ಆರೋಗ್ಯದ ಚಿಂತೆಯಲ್ಲೇ ಕೇಳಿದ್ದನ್ನು ಉಣಬಡಿಸಿದ ಅವ್ವ(ಅಮ್ಮಿಜಾನ್)ಸದಾ ಸ್ಮರಣೀಯರು ಎನ್ನುತ್ತಾನೆ ಮಹ್ಮದ್ ಕ್ವಿಜರ್.