ಬೆಂಗಳೂರು: ಭಗವಂತ ಮಹಿಳೆಯರಿಗೆ “ಕಂಪ್ಯೂಟರೈಜ್ ಮೆಮೊರಿ’ ನೀಡಿದ್ದಾನೆ. ಅದನ್ನು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಂಡು, ದೇಶ ಪ್ರಗತಿಗೆ ಶ್ರಮಿಸಿ ಎಂದು ರಾಜ್ಯಪಾಲ ವಿ.ಆರ್.ವಾಲಾ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಬಾಲಭವನ ಸೊಸೈಟಿ ವತಿಯಿಂದ ಮಂಗಳವಾರ ನಗರದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಂದಿರು ಮಕ್ಕಳ ಬಗ್ಗೆ ಸದಾ ನಿಗವಹಿಸಿರಬೇಕು. ಟಿವಿ ನೋಡುವುದು, ಕಂಪ್ಯೂಟರ್ ಗೇಮ್ ಆಡುವುದನ್ನು ನಿಲ್ಲಿಸಿ, ಮೈದಾನದ ಆಟಕ್ಕೆ ಪ್ರೋತ್ಸಾಹ ನೀಡಬೇಕು. ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.
ಮಕ್ಕಳ ಸಾಹಸ, ಪ್ರತಿಭೆ, ಜ್ಞಾನ ಹಾಗೂ ಧೈರ್ಯದ ವಿಕಾಸದಿಂದ ಸದೃಢ ಭಾರತ ನಿರ್ಮಾಣ ಸಾಧ್ಯ. ಮಕ್ಕಳ ಬಲವರ್ಧನೆಯಿಂದ ದೇಶದ ಬಲವರ್ಧನೆಯಾಗಲಿದೆ. ಮಕ್ಕಳ ಜ್ಞಾನ ಸಂಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಉಮಾಶ್ರೀ ಮಾತನಾಡಿ, ದೇಶದ ಸಂಸ್ಕೃತಿಯನ್ನು ಮುನ್ನೆಡೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಮಕ್ಕಳ ಮೇಲಿದೆ. ಇಂದಿನ ಮಕ್ಕಳು ಭವಿಷ್ಯ ಪ್ರಜೆಗಳಲ್ಲ. ಇಂದಿನ ಪ್ರಜೆಗಳು. ಉತ್ತಮ ಆರೋಗ್ಯ, ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕು.
ಸಂಸದ ಪಿ.ಸಿ.ಮೋಹನ್, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಬಾಲ ಭವನ ಸೊಸೈಟಿ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್, ಇಲಾಖೆ ನಿರ್ದೇಶಕಿ ಎಂ.ದೀಪ, ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಮೊದಲಾದವರು ಉಪಸ್ಥಿತರಿದ್ದರು.