ಬೆಂಗಳೂರು: ಮರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮತ್ತು ಗಿನ್ನಿಸ್ ದಾಖಲೆ ಉದ್ದೇಶದಿಂದ ಸುಮಾರು 14 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು “ಮೈ ಟ್ರೀ ಮೈ ಲೈಫ್’ ಘೋಷಣೆಯಡಿ ಮರಗಳನ್ನು ಅಪ್ಪಿಕೊಂಡು ಎರಡು ನಿಮಿಷ ಧ್ಯಾನಿಸಿದ ವಿನೂತನ ಕಾರ್ಯಕ್ರಮ ನಗರದ ಲಾಲ್‌ಬಾಗ್‌ನಲ್ಲಿ ಶನಿವಾರ ನಡೆಯಿತು.
ಬೆಂಗಳೂರು ನಗರ, ಗ್ರಾಮಾರಂತ ಜಿಲ್ಲೆ, ಕೋಲಾರ, ಶಿವಮೊಗ್ಗದ ಸುಮಾರು 20ರಿಂದ 30 ಶಾಲೆಗಳ ವಿದ್ಯಾರ್ಥಿಗಳು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 10 ಸಾವಿರಕ್ಕೂ ಅಧಿಕ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಮರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ಗಿನ್ನಿಸ್ ದಾಖಲೆ ಮಾಡುವುದಕ್ಕಿಂತಲೂ ಮರಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ತೋಟಗಾರಿಕೆ ಇಲಾಖೆ ಮತ್ತು ರೋಟರಿ ಜಿಲ್ಲೆ 3190 ಈ ಕಾರ್ಯಕ್ರಮ ಆಯೋಜಿಸಿದ್ದವು.
ಒಂದು ತಿಂಗಳ ಸಿದ್ಧತೆ: “ಮೈ ಟ್ರೀ ಮೈ ಲೈಫ್’ ಕಾರ್ಯಕ್ರಮಕ್ಕಾಗಿಯೇ ತೋಟಗಾರಿಕೆ ಇಲಾಖೆ ಕಳೆದ ಒಂದು ತಿಂಗಳಿಂದ ಲಾಲ್‌ಬಾಗ್‌ನಲ್ಲಿ ಸಿದ್ಧತೆ ನಡೆಸಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಮರಗಳಿಗೆ ಟೇಪ್‌ಗ್ಳನ್ನು ಸುತ್ತಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹಾವುಗಳನ್ನು ಹಿಡಿಸಲಾಗಿತ್ತು. ಅಲ್ಲದೇ ವಿದ್ಯಾರ್ಥಿಗಳು ಹೋಗುವ ಜಾಗವನ್ನೆಲ್ಲಾ ಸ್ವತ್ಛಗೊಳಿಸುವ ಕಾರ್ಯ ನಿರ್ವಹಿಸಲಾಗಿತ್ತು. ಇದಕ್ಕೆ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಕೂಡ ನೆರವು ನೀಡಿದ್ದರು. ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿತ್ತು.
ಗಿನ್ನಿಸ್ ದಾಖಲೆಗೆ ಅಗತ್ಯವಿರುವ 300 ಷರತ್ತುಗಳನ್ನು ಸಹ ಲೋಪದೋಷಗಳಾಗದಂತೆ ನೋಡಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ರೋಟರಿ ಕ್ಲಬ್ ಸಿಬ್ಬಂದಿ, ಶಿಕ್ಷಕರು, ಸ್ವಯಂ ಸೇವಕರು ನೆರವು ನೀಡಿದ್ದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಲಾಲ್‌ಬಾಗ್ ಹೇಗೆ ವ್ಯವಹರಿಸಬೇಕು ಹಾಗೂ ಮರಗಳನ್ನು ಹೇಗೆ, ಎಷ್ಟುಕಾಲ, ಯಾವಾಗ ರೀತಿಯಲ್ಲಿ ಅಪ್ಪಿಕೊಳ್ಳಬೇಕು ಎನ್ನುವ ಕುರಿತು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಒಂದು ದಿನದ ತರಬೇತಿಯನ್ನೂ ಸಹ ನೀಡಲಾಗಿತ್ತು.
ಕಂಪನಿಗಳಿಂದ ಉಪಹಾರ: ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕೆಲ ಕಂಪನಿಗಳು ಉಚಿತವಾಗಿ ಉಪಹಾರ ಒದಗಿಸಿದ್ದವು. ಐಟಿಸಿ ಕಂಪನಿ ಬ್ರಿಟಾನಿಯ ಬಿಸ್ಕತ್ತು, ಜಿಆರ್‌ಬಿ ಕಂಪನಿ ಮಿಲ್ಕ್, ತುಪ್ಪ, ಡೈರಿ ಡೇ ಸಂಸ್ಥೆ ಐಸ್ ಕ್ಯಾಂಡಿ ಒದಗಿಸಿದ್ದವು. ಲಕ್ಷ್ಮೀ ಸಂಸ್ಥೆ ಧ್ವನಿವರ್ಧಕದ ಸೇವೆ ನೀಡಿತ್ತು. ಅಲ್ಲವೇ ವಿವಿಧ ತಿಂಡಿ, ತಿನಿಸುಗಳನ್ನು ಕೆಲವು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿದ್ದವು.
ಕಾರ್ಯಕ್ರಮದಲ್ಲಿ ಪರಿಸರವಾದಿ ಯಲ್ಲಪ್ಪರೆಡ್ಡಿ, ರೋಟರಿ ಸಹಾಯಕ ರಾಜ್ಯಪಾಲ ರವೀಂದ್ರನಾಥ್, ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ, ತೋಟಗಾರಿಕೆ ಇಲಾಖೆ ಆಯುಕ್ತ ಪಿಸಿ ರೇ, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ಉಪನಿರ್ದೇಶಕ ಚಂದ್ರಶೇಖರ್, ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.