ದೋಟಿಹಾಳ: ಮಧ್ಯಾಹ್ನದ ಬಿಸಿಯೂಟಕ್ಕಾಗಿ 1 ಕಿ.ಮೀ ನಡೆದು ಹೋಗುತ್ತಿದ್ದ ಕ್ಯಾದಿಗುಪ್ಪ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಬಗ್ಗೆ ನಿನ್ನೆ ಉದಯವಾಣಿ ವರದಿ ಮಾಡಿದ್ದು, ಅದರ ಫಲಶ್ರುತಿ ಎಂಬಂತೆ ಇಂದು ಬುಧವಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.
ಬುಧವಾರ ತಾಲೂಕು ಅಕ್ಷರದಾಸೋಹ ಅಧಿಕಾರಿ ಕೆ.ಶರಣಪ್ಪ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿ ಊಟದ ವ್ಯವಸ್ಥೆ ಮಾಡಿದರು.
ಕಳೆದ ಒಂದು ವಾರದಿಂದ ಈ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಒಂದು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ದುಸ್ಥಿತಿಯನ್ನು ಇಂದು ಉದಯವಾಣಿ ದಿನಪತ್ರಿಕೆ ಮತ್ತು ಆನ್‍ಲೈನ್‍ನಲ್ಲೂ “ಬಿಸಿಯೂಟಕ್ಕಾಗಿ ಕಿ.ಮೀ ಪಾದಯಾತ್ರೆ ಅನಿವಾರ್ಯ” ಎಂಬ ಶೀರ್ಷಿಕೆಯಲ್ಲಿ ಪ್ರಕಟ ಮಾಡಲಾಗಿತ್ತು.
ಇದನ್ನೂ ಓದಿ: ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ
ಕೂಡಲೆ ಅಧಿಕಾರಗಳು ಪ್ರಾಥಮಿಕ ಶಾಲೆಯಲ್ಲಿ ತಯಾರಿಸಿದ ಬಿಸಿಯೂಟದ ಅಡುಗೆಯನ್ನು ಪ್ರೌಢಶಾಲೆಗೆ ತಂದು ಅಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದರು. ಹೀಗಾಗಿ ಇಂದಿನಿಂದ ಪ್ರೌಢ ಶಾಲೆಯ ಮಕ್ಕಳು ನಡೆದುಕೊಂಡು ಹೋಗುವುದು ತಪ್ಪಿದಂತಾಗಿದೆ.
ಗ್ರಾಪಂ ಅಧ್ಯಕ್ಷ ರೇಣುಕಾ ಸಂಗಪ್ಪ ವಾಲಿಕಾರ ಪ್ರೌಢ ಶಾಲಾ ಮಕ್ಕಳ ಬಿಸಿಯೂಟಕೆ ಚಾಲನೆ ನೀಡಿದರು. ಈ ವೇಳೆ ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು ಇದ್ದರು.