Advertisement

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ…

04:34 PM Mar 15, 2018 | Sharanya Alva |

ರಾಮು ಮತ್ತು ಮಹೇಶ ಇಬ್ಬರೂ ಆಪ್ತಸ್ನೇಹಿತರು. ಅವರಿಬ್ಬರೂ ಅಕ್ಕ ಪಕ್ಕದ ಮನೆಯವರಾಗಿದ್ದು ಒಂದೇ ಶಾಲೆಯಲ್ಲಿ  ಜೊತೆಯಾಗಿ ಓದುತ್ತಿದ್ದರು. ಒಂದು ದಿನ ಬೆಳಗ್ಗೆ ಎಂದಿನಂತೆ ರಾಮು ಮತ್ತು ಮಹೇಶ ಒಟ್ಟಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ಹಕ್ಕಿಯೊಂದು ನಿತ್ರಾಣ ಸ್ಥಿತಿಯಲ್ಲಿ ಬಿದ್ದಿತ್ತು. ಅವರಿಬ್ಬರೂ ಆ ಹಕ್ಕಿಯ ಬಳಿ ಧಾವಿಸಿ ಅದಕ್ಕೇನು ತೊಂದರೆಯಾಗಿರಬಹುದೆಂದು ಪರೀಕ್ಷಿಸಲು ಮುಂದಾದರು. ಹಕ್ಕಿಯ ದೇಹದ ಮೇಲೆ ಯಾವುದೇ ತೆರನಾದ ಗಾಯದ ಗುರುತುಗಳು ಇದ್ದಂತೆ ಕಾಣಲಿಲ್ಲ. ರೆಕ್ಕೆಗಳಿಗೂ ಯಾವುದೇ ರೀತಿಯ ಹಾನಿಯಾಗಿರುವುದು ಕಂಡುಬರಲಿಲ್ಲ.

Advertisement

ಕೆಲ ಕ್ಷಣಗಳ ನಂತರ ರಾಮುವಿಗೆ ಹಕ್ಕಿಗೆ ಏನಾಗಿದೆಯೆಂದು ಗೊತ್ತಾಯಿತು. ಅವನು ಆ ಹಕ್ಕಿಯನ್ನು ಅಲ್ಲಿಂದ ಎತ್ತಿಕೊಂಡು ಪಕ್ಕದಲ್ಲೇ ಇದ್ದ ಒಂದು ಮರದಡಿ ಅದಕ್ಕೆ ಬಿಸಿಲು ತಾಕದಂತೆ ನೆರಳಿನಲ್ಲಿಟ್ಟನು. ತನ್ನ ಬ್ಯಾಗಿನಲ್ಲಿದ್ದ ನೀರಿನ ಬಾಟಲಿಯನ್ನು ಹೊರಗೆ ತೆಗೆದು, ಅಸ್ವಸ್ಥಗೊಂಡ ಹಕ್ಕಿಯ ಮೇಲೆ ನೀರು ಸಿಂಪಡಿಸಿದನು. ಹಕ್ಕಿ ಏನಾದರೂ ಚೇತರಿಸಿಕೊಳ್ಳಬಹುದೇನೋ ಎಂದು ನೋಡಿದನು. ಆಗ ಹಕ್ಕಿಯು ತುಸು ಚಲನಶೀಲವಾದಂತೆ ಕಂಡಿತು.

ತನ್ನ ರೆಕ್ಕೆಯೊಂದನ್ನು ಒಮ್ಮೆ ನಿಧಾನವಾಗಿ ಆಡಿಸಿದಂತೆ ಮಾಡಿತು. ಬೇಸಿಗೆ ಕಾಲವಾದ್ದರಿಂದ ಕುಡಿಯಲು ನೀರು ಸಿಗದೆ, ಬಿಸಿಲಿನ ಝಳಕ್ಕೆ ತತ್ತರಿಸಿ ಹಕ್ಕಿ ನಿತ್ರಾಣಗೊಂಡಿತ್ತು. ರಾಮು ಇನ್ನೊಮ್ಮೆ ಬಾಟಲಿಯಲ್ಲಿದ್ದ ನೀರನ್ನು ಹಕ್ಕಿಯ ಮೇಲೆ ಸಿಂಪಡಿಸಿ ಅದರ ಕೊಕ್ಕಿಗೆ ಒಂದಷ್ಟು
ನೀರಿನ ಹನಿಗಳನ್ನು ಬಿಟ್ಟನು. ಬ್ಯಾಗಿನಿಂದ ಪುಸ್ತಕವೊಂದನ್ನು ತೆಗೆದು ಬೀಸಣಿಗೆಯಂತೆ ಬಳಸಿ ಅದಕ್ಕೆ ಗಾಳಿ ಸರಿಯಾಗಿ ಸೋಕುವಂತೆ ನೋಡಿಕೊಂಡನು. ಅಷ್ಟರಲ್ಲಿ ಹಕ್ಕಿ ಚೇತರಿಸಿಕೊಂಡಿತು.

ಹಕ್ಕಿಯು ನಿಧಾನವಾಗಿ ಸುಧಾರಿಸಕೊಳ್ಳತೊಡಗಿತ್ತು. ಸ್ವಲ್ಪ ಹೊತ್ತಿನಲ್ಲಿ ಒದ್ದೆಯಾದ ತನ್ನ ದೇಹವನ್ನು ಕೊಡವಿಕೊಳ್ಳುತ್ತಾ ಎದ್ದಿತು. ರಾಮು ಮತ್ತು ಮಹೇಶ ಹಕ್ಕಿಗೆ ಪ್ರಜ್ಞೆ ಬಂದಿದ್ದನ್ನು ಕಂಡು ತಮ್ಮನ್ನು ಕಂಡು ಗಾಬರಿ ಬೀಳುವುದು ಬೇಡ ಎಂಬ ಕಾರಣದಿಂದ ದೂರ ಸರಿದರು. ರಾಮು ಮತ್ತು ಮಹೇಶ ಅಲ್ಲೇ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ಅದನ್ನು ನೋಡುತ್ತಾ ನಿಂತರು. ಹಕ್ಕಿ ಸ್ವಲ್ಪ ಹೊತ್ತು ಅಲ್ಲೇ ನಿಂತು ಒಮ್ಮೆ ಅತ್ತಿತ್ತ ನೋಡಿ, ರೆಕ್ಕೆ ಬಡಿದು ಆಕಾಶದೆಡೆಗೆ ಒಮ್ಮೆಲೇ ಹಾರಿ ಬಿಟ್ಟಿತು. ಹಕ್ಕಿಯ ಜೀವ ಉಳಿದುದಕ್ಕೆ ಸಂತಸಪಡುತ್ತಾ ಇಬ್ಬರೂ ಗೆಳೆಯರು ಶಾಲೆಯ ಕಡೆ ಹೆಜ್ಜೆ ಹಾಕಿದರು. 

*ಷಣ್ಮುಖ ತಾಂಡೇಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next