ಮುನವಳ್ಳಿ: ಬಣಜಿಗ ಸಮಾಜದ ಬಂಧುಗಳು ತಮ್ಮ ವ್ಯಾಪಾರ ವೃತ್ತಿಯೊಂದಿಗೆ ತಮ್ಮ ಮಕ್ಕಳಿಗೆ ವಿದ್ಯಭ್ಯಾಸದತ್ತ ಗಮನ ನೀಡಬೇಕು. ಅಲ್ಲದೇ ಬಣಜಿಗ ಸಮಾಜದವರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮುನವಳ್ಳಿ ಘಟಕದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾರಂಭವನ್ನು ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವಬಸಪ್ಪ ಹೆಸರೂರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಗಜಂಪಿ, ತಾಲೂಕಾಧ್ಯಕ್ಷ ಬಸವರಾಜ ಹಂಪಣ್ಣವರ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಬಾಳಿ ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಣಜಿಗ ಬಂಧು ಮಾಸಪತ್ರಿಕೆಯ ಸಂಪಾದಕ ರುದ್ರಣ್ಣ ಹೊಸಕೇರಿ ಹಾಗೂ ಎಪಿಎಂಸಿ ನಿರ್ದೇಶಕ ಉಮೇಶ ಬಾಳಿ ಮಾತನಾಡಿ, ಸಂಸತ್ತು ಹಾಗೂ ವಿಧಾನಸೌಧದಲ್ಲಿ ಅಕ್ಕಮಹಾದೇವಿಯವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಮುನವಳ್ಳಿ ಘಟಕದ ಅಧ್ಯಕ್ಷ ಅರುಣಕುಮಾರ ಬಾಳಿ ಮಾತನಾಡಿ, ಬಣಜಿಗರು ಬಸವಣ್ಣನವರ ನಿಜವಾದ ಅನುಯಾಯಿಗಳು. ಬಣಜಿಗರು ಕಾಯಕಕ್ಕೆ ಮಹತ್ವ ನೀಡುತ್ತಾ ಸಮಾಜದ ಉನ್ನತಿಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ರಮೇಶ ಗೋಮಾಡಿ, ಎಂ.ಆರ್. ಗೋಪಶೆಟ್ಟಿ, ರಾಜಣ್ಣ ಬಾಳಿ, ಶಂಕರ ಗಯ್ನಾಳಿ, ನಾಗರಾಜ ಗೋಪಶೆಟ್ಟಿ, ಅಪ್ಪು ಶೆಟ್ಟರ, ಶಿವು ಕರೀಕಟ್ಟಿ, ಶ್ರೀಶೈಲ ಹಂಜಿ, ಅಶೋಕ ಗೋಮಾಡಿ, ಪ್ರದೀಪ ಹನಮಸಾಗರ, ಅಜ್ಜಪ್ಪ ಬಾಳಿ, ಪಂಚಪ್ಪ ಗೊಂದಿ, ಗುರು ದೇವಣಗಾವಿ, ಶ್ರೀಶೈಲ ಗೋಪಶೆಟ್ಟಿ ಸೇರಿದಂತೆ ಬಣಜಿಗ ಸಮಾಜದ ಸದಸ್ಯರು ಇದ್ದರು.