Advertisement

ಮಕ್ಕಳು ಪರಿಸರ ರಾಯಭಾರಿಗಳಾಗಲಿ: ನ್ಯಾ|ದೇಸಾಯಿ

12:36 PM Jun 06, 2018 | Team Udayavani |

ಚಿಕ್ಕಮಗಳೂರು: ಗಿರಿಶಿಖರ ಹಾಗೂ ಕಾನನದಿಂದ ಕೂಡಿರುವ ಈ ಜಿಲ್ಲೆಯಲ್ಲಿ ಆಮ್ಲಜನಕದ ಮಟ್ಟ ಉತ್ತಮವಾಗಿದೆ.
ಈ ಪ್ರಾಕೃತಿಕ ಪರಿಸರವನ್ನು ಉಳಿಸಿ ಬೆಳೆಸಬೇಕೆಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪಿ.ಎನ್‌. ದೇಸಾಯಿ
ಹೇಳಿದರು.

Advertisement

ನಗರದ ಹಿರೇಮಗಳೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ ಹಾಗೂ ವಕೀಲರ ಸಂಘ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ
ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಕೃತಿ ಪ್ರೇಮ ಹೆಚ್ಚಾಗಿರುತ್ತದೆ. ಅವರನ್ನು ಪರಿಸರ ಉಳಿಸುವ ರಾಯಭಾರಿಗಳನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಪ್ಲಾಸ್ಟಿಕ್‌ ಬಳಕೆ ತಡೆಯುವ ಘೋಷಣೆಯನ್ನು ವಿಶ್ವ ಪರಿಸರ ದಿನ ಈ ವರ್ಷ ಹೊಂದಿದ್ದು, ಪುನರ್ಬಳಕೆಯಾಗದ
ಪ್ಲಾಸ್ಟಿಕ್‌ನ್ನು ಉಪಯೋಗಿಸದಂತೆ ಆಲೋಚಿಸಬೇಕೆಂದು ತಿಳಿಸಿ, ಈ ರೀತಿ ಕಾರ್ಯಕ್ರಮಗಳ ಮೂಲಕ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.  ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಬಗ್ಗೆ ಮಾತನಾಡಿದ ಪರಿಸರ ಪ್ರೇಮಿ ಸ.ಗಿರಿಜಾಶಂಕರ, ಇರುವ ಈ ಭೂಮಿಯನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಮನುಷ್ಯನ ಮೇಲಿದೆ. ಪರಿಸರವೆಂದರೆ ಕೇವಲ ಮನುಷ್ಯ ಮಾತ್ರವಲ್ಲ, ಇಲ್ಲಿರುವ ಸೂಕ್ಷ್ಮಜೀವಿಗಳಿಂದ ಹಿಡಿದು ನೆಲ, ಜಲ, ಮಣ್ಣು, ವಾತಾವರಣ, ಪ್ರಾಣಿ, ಪಕ್ಷಿ, ಸಣ್ಣ ಸಸ್ಯದಿಂದ ಹಿಡಿದು ಬೃಹದಾಕಾರದ ಮರವೂ ಸೇರುತ್ತದೆ ಎಂದು ಹೇಳಿದರು.

ಪ್ಲಾಸ್ಟಿಕ್‌ ಬಳಕೆ ಇಂದು ವಿಶ್ವದಲ್ಲೆ ಮಿತಿಮೀರಿದೆ. 80 ಲಕ್ಷ ಟನ್‌ ಪ್ಲಾಸ್ಟಿಕ್‌ ವಿವಿಧ ಜಲ ಹಾಗೂ ಇನ್ನಿತರ ಮೂಲಗಳಿಂದ ಸಮುದ್ರ ಸೇರುತ್ತಿವೆ. ಮುಂದೊಂದು ದಿನ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಗಾಳ ಹಾಕಿದರೆ ಕೇವಲ ಪ್ಲಾಸ್ಟಿಕ್‌ ದೊರೆಯುತ್ತದೆಯೇ ಹೊರತು, ಮೀನುಗಳು ದೊರೆಯಲಾರವು ಎಂದರು.

ಒಂದು ಕಾಲದಲ್ಲಿ ಶುದ್ಧವಾಗಿ ಹರಿಯುತ್ತಿದ್ದ ಎಲ್ಲಾ ನೀರಿನ ಝರಿ ಸೇರಿದಂತೆ ಮೂಲಗಳು ಇಂದು ಕಲುಷಿತವಾಗಿವೆ.
ನಾವು ಸೇವಿಸುತ್ತಿರುವ ಗಾಳಿ ವಿಷವಾಗುತ್ತಾ ಬರುತ್ತಿದೆ. ಅತ್ಯಂತ ಪರಿಶುದ್ಧವಾಗಿದ್ದ ಮಣ್ಣು ಕೀಟನಾಶಕಗಳ ಅತಿ ಬಳಕೆಯಿಂದ ಅದೂ ಸಹ ಮಾಲಿನ್ಯಪೂರಿತವಾಗಿದೆ ಎಂದು ತಿಳಿಸಿದರು.

Advertisement

ಅಧ್ಯಕ್ಷತೆಯನ್ನು ಶಾಲೆಯ ಎಸ್‌ .ಡಿ.ಎಂ.ಸಿ. ಅಧ್ಯಕ್ಷೆ ಮಮತಾ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ. ಸಿಇಒ ಸಿ. ಸತ್ಯಭಾಮಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ, ನ್ಯಾಯಾಧೀಶರಾದ ಕಂಬೇಗೌಡ, ಕೆ.ಎಲ್‌. ಅಶೋಕ, ಅಣ್ಣಾಸಾಹೇಬ್‌, ಡಿ.ಪಿ. ದೇವೇಂದ್ರನ್‌, ಬಿ.ಟಿ. ದುಶ್ಯಂತ್‌, ಎಚ್‌. ಎಸ್‌.ಪುಟ್ಟಸ್ವಾಮಿ, ಶ್ರೀದೇವಿ ಮೋಹನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next