Advertisement

ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ಕಂಪನಿಗೇ ವಾಪಸ್‌ ಕಳುಹಿಸುವ ಮಕ್ಕಳು!

12:37 PM Nov 18, 2019 | Lakshmi GovindaRaju |

ನಂಜನಗೂಡು: ನಾಳೆಗಳು ನಮ್ಮದು, ನಿಮ್ಮ ಕಸ ನಿಮಗೆ…. “ನಿಮ್ಮ ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ನಮಗೆ ಮರುಬಳಕೆ ಮಾಡಲಾಗುತ್ತಿಲ್ಲ. ಆ ವ್ಯವಸ್ಥೆಯೂ ನಮ್ಮಲ್ಲಿಲ್ಲ. ನಿಮ್ಮ ತ್ಯಾಜ್ಯ ನಮಗೆ ಬೇಕಿಲ್ಲ. ಈಗಾಗಲೇ ನಾವು ಇದರ ದುಷ್ಪರಿಣಾಮ ಅನುಭವಿಸುತ್ತಿದ್ದೇವೆ. ಹೀಗಾಗಿ ನಿಮ್ಮ ಉತ್ಪನ್ನಗಳಿಗೆ ನೀವು ಬಳಸುವ ಪ್ಲಾಸ್ಟಿಕ್‌ಗಳನ್ನು ನಿಮಗೇ ಕಳುಹಿಸುತ್ತಿದ್ದೇವೆ. ನೀವೇ ಮರುಬಳಕೆ ಮಾಡಿ. ಜತೆಗೆ ಪರಿಸರಕ್ಕೆ ಪ್ಲಾಸ್ಟಿಕ್‌ ಬಾರದಂತೆ ನೋಡಿಕೊಳ್ಳಿ’
ಇದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಿಗೆ ನಂಜನಗೂಡು ತಾಲೂಕಿನ ಹೆಗ್ಗಡಳ್ಳಿ ಶಾಲೆಯ ವಿದ್ಯಾರ್ಥಿಗಳು ಆಯ ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳೊಂದಿಗೆ ಕಳುಹಿಸಿದ ಪತ್ರ.

Advertisement

ಪ್ಲಾಸ್ಟಿಕ್‌ ನಿಷೇಧಕ್ಕೆ ಎಷ್ಟೇ ಜಾಗೃತಿ, ಕಾನೂನು ಕ್ರಮಗಳಿದ್ದರೂ ಇದರ ಬಳಕೆ ಮಾತ್ರ ನಿಲ್ಲುತ್ತಿಲ್ಲ. ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳು ಹೆಚ್ಚುತ್ತಿದ್ದು, ಇವುಗಳ ಮರುಬಳಕೆ ಸವಾಲು ಆಗಿದೆ. ಹೀಗಾಗಿ ಶಾಲೆ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ವಿವಿಧ ಕಂಪನಿಗಳ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ಆಯ್ದು, ಒಂದೆಡೆ ಸಂಗ್ರಹಿಸಿ, ಲೇಬಲ್‌ ಆಧಾರದ ಮೇಲೆ ಅಂಚೆ ಕಚೇರಿ ಮೂಲಕ ಕಂಪನಿಗಳಿಗೆ ವಾಪಸ್‌ ಕಳುಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈ ರೀತಿಯ ವಿಭಿನ್ನ ಅಭಿಯಾನ ನಡೆಸಿ ಸಂಸ್ಥೆಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದಕ್ಕೆ ಕೋಲ್ಗೇಟ್‌ ಕಂಪನಿಯು, ಪ್ರತಿಕ್ರಿಯೆ ನೀಡಿದ್ದು, ಪರಿಸರ ಸ್ನೇಹಿ ಪ್ಯಾಕಿಂಗ್‌ ಮೆಟೀರಿಯಲ್‌ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ.

“ನಿಮ್ಮ ಕಸ ನೀವೇ ಪಡೆಯಿರಿ, ಪ್ರಕೃತಿದತ್ತ ಶುದ್ಧ ಪರಿಸರ ನಮಗೆ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಹೆಗ್ಗಡಳ್ಳಿ ಶಾಲಾ ಮಕ್ಕಳು ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ಕಳೆದ ಏಪ್ರಿಲ್‌ನಿಂದ ಈ ಅಭಿಯಾನ ನಡೆಸುತ್ತಿದ್ದಾರೆ. ಇದುವರೆಗೂ ಈ ರೀತಿ ನಾಲ್ಕು ಅಭಿಯಾನ ನಡೆಸಿದ್ದು, ಇಂದು (ಗುರುವಾರ) ಮಕ್ಕಳ ದಿನಾಚರಣೆ ಪ್ರಯುಕ್ತ ಐದನೇ ಅಭಿಯಾನದ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕಂಪನಿಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ತಂದು ಅವುಗಳನ್ನು ಆಯಾ ಕಂಪನಿಗಳ ಲೆಬಲ್‌ ಆಧಾರದಲ್ಲಿ ವಿಂಗಡಿಸಿ ಕೋಲ್ಗೇಟ್‌, ಐಟಿಸಿ, ಯುಬಿ ಮಾಕ್ಸಲ್ಟ್ ಹಲದಿರಾಂ, ಸನ್‌ಫಿಸ್ಟ್‌, ಬ್ರಿಟಾನಿಯಾ, ನೆಸ್ಲೆ , ಬ್ರೂ ಕಾಫಿ, ಟಾಟಾ, ವಿವಿಧ ಅಡುಗೆ ಎಣ್ಣೆ ಕಂಪನಿಗಳು, ವಿವಿಧ ಲೇಸ್‌ ಮತ್ತೂ ಕುರ್‌ಕುರೆ ಸೇರಿದಂತೆ 35ಕ್ಕೂ ಹೆಚ್ಚು ಕಂಪನಿಗಳ ಪ್ರಾಸ್ಟಿಕ್‌ ಪ್ಯಾಕಿಂಗ್‌ ಮೆಟೀರಿಯಲ್‌ಗ‌ಳನ್ನು ಆಯಾ ಕಂಪನಿಗಳ ನೋಂದಾಯಿತ ಪ್ರಧಾನ ಕಚೇರಿಗಳಿಗೆ ಕೋರಿಯರ್‌ ಹಾಗೂ ಅಂಚೆ ಮೂಲಕ ವಾಪಸ್‌ ಕಳುಹಿಸುತ್ತಿದ್ದಾರೆ.

ಅಲ್ಲದೇ ನಂಜನಗೂಡಿನಲ್ಲಿ ಕಾರ್ಯ ಘಟಕಗಳನ್ನು ಹೊಂದಿರುವ ಐಟಿಸಿ, ನೆಸ್ಲೇ, ಯುಬಿ, ಏಷಿಯನ್‌ ಪೇಂಟ್ಸ್‌ ಮತ್ತಿತರ ಸ್ಥಳೀಯ ಘಟಕಗಳಿಗೆ ಅವರವರ ತ್ಯಾಜ್ಯಗಳನ್ನು ಕಳುಹಿಸುತ್ತಿದ್ದಾರೆ. ಬಹುಶಃ ಇದು ರಾಜ್ಯದಲ್ಲೇ ಮೊದಲ ವಿಭಿನ್ನ ಪ್ರಯತ್ನವಾಗಿದೆ. ಕಂಪನಿಗಳಿಗೆ ಪ್ಲಾಸ್ಟಿಕ್‌ ವಾಪಸ್‌ ಕಳುಹಿಸುವ ವೆಚ್ಚವನ್ನೇ ಶಾಲೆಯ ಮುಖ್ಯ ಶಿಕ್ಷಕ ಎ.ಎಂ.ಲಿಂಗರಾಜು, ಸಹ ಶಿಕ್ಷಕ ಸಂತೋಷ ಗುಡ್ಡಿ ಅಂಗಡಿ ಅವರೇ ಭರಿಸುತ್ತಿದ್ದಾರೆ. ಈ ವಿಭಿನ್ನ ಅಭಿಯಾನಕ್ಕೆ ಇವರೇ ಪ್ರೇರಣೆಯಾಗಿದ್ದಾರೆ.

Advertisement

ಕೋಲ್ಗೇಟ್‌ ಕಂಪನಿ ಪ್ರತಿಕ್ರಿಯೆ: ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವು ವಿದ್ಯಾರ್ಥಿಗಳ ಈ ಅಭಿಯಾನಕ್ಕೆ ಮೊದಲ ಹಂತದ ಯಶಸ್ಸು ಲಭಿಸಿದೆ. ಮಕ್ಕಳ ಪರಿಸರ ಕಾಳಜಿಗೆ ಸ್ಪಂದಿಸಿರುವ ಕೋಲ್ಗೇಟ್‌ ಕಂಪನಿಯು, ಪರಿಸರ ಸ್ನೇಹಿ ಪ್ಯಾಕಿಂಗ್‌ ಮೆಟೀರಿಯರ್‌ ತಯಾರಿಸುವುದಾಗಿ ಪತ್ರ ಬರೆದಿದೆ. ಪತ್ರದ ಜೊತೆಗೆ ವಿದ್ಯಾರ್ಥಿಗಳಿಗೆ ಮೂರು ಪೇಸ್ಟ್‌ ಹಾಗೂ ಎರಡು ಬ್ರಷ್‌ಗಳನ್ನು ಉಡುಗೊರೆಯಾಗಿದೆ ನೀಡಿದೆ. “ಪ್ರೀತಿಯ ಹೆಗ್ಗಡಹಳ್ಳಿಯ ಶಾಲಾ ವಿದ್ಯಾರ್ಥಿಗಳೇ, ನಿಮ್ಮ ಪರಿಸರ ಪ್ರಜ್ಞೆ ನಮಗೆ ಅತೀವ ಸಂತಸ ತಂದಿದೆ.

ನಮ್ಮ ವಿಶೇಷ ತಜ್ಞರ ತಂಡವು ಪರಿಸರ ಸ್ನೇಹಿ ಪ್ಯಾಕಿಂಗ್‌ ಮೆಟೀರಿಯರ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ನಮ್ಮ ಉತ್ಪನ್ನಗಳಿಗೆ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ. ಸಾದ್ಯವಾದಷ್ಟು ಪುನರ್‌ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ಗಳನ್ನೇ ಹೆಚ್ಚು ಬಳಸುತ್ತಿದ್ದೇವೆ. ಕಂಪನಿಯು ಪಿವಿಸಿ ಪ್ಲಾಸ್ಟಿಕ್‌ ಬಳಕೆಯನ್ನು ಶೇ.98ರಷ್ಟು ಕಡಿಮೆ ಮಾಡಿದೆ. ಇದನ್ನು ಶೇ.100ರಷ್ಟು ಮಾಡಲು ಯತ್ನಿಸುತ್ತಿದ್ದೇವೆ. ನಾವು ಬಹುಶಃ 2015ರ ಹೊತ್ತಿಗೆ ಸಂಪೂರ್ಣ ಗುರಿ ಸಾಧಿಸಲಿದ್ದೇವೆ.’ ಎಂದು ಕೋಲ್ಗೇಟ್‌ ಕಂಪನಿ ಭರವಸೆ ನೀಡಿದೆ.

* ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next