Advertisement

ಮಕ್ಕಳು ಮರಳಿ ಶಾಲೆಗೆ: ಹೆತ್ತವರು ಏನು ಮಾಡಬಹುದು?

05:41 PM May 22, 2022 | Team Udayavani |

ಕಳೆದ ಎರಡು ವರ್ಷಗಳ ಕಾಲ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿಗಳ ಬದುಕು ಮತ್ತು ಮಾನಸಿಕ ಆರೋಗ್ಯದ ಮೇಲೆ ಬಹಳ ದೊಡ್ಡ ಪರಿಣಾಮವಾಗಿದೆ. ಶೈಕ್ಷಣಿಕ ಅಭ್ಯಾಸ ಮತ್ತು ಆಟೋಟಗಳ ನಡುವಣ ನಿರ್ಣಾಯಕ ಸಮತೋಲನವನ್ನು ಮಕ್ಕಳು ಕಳೆದುಕೊಂಡು ಬಿಟ್ಟಿದ್ದಾರೆ. ತಮ್ಮ ಗೆಳೆಯ -ಗೆಳತಿಯರಿಂದ ದೂರವಿದ್ದುದು ಮತ್ತು ಅವರ ಜತೆಗೆ ಆಟವಾಡುವ ಅವಕಾಶವನ್ನು ದೀರ್ಘ‌ಕಾಲ ಕಳೆದುಕೊಂಡದ್ದರಿಂದ ಮಕ್ಕಳ ಮೇಲೆ ಒತ್ತಡ ಉಂಟಾಗಿದೆ ಮತ್ತು ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಂಡಿವೆ.

Advertisement

ಇದರಿಂದ ಉಂಟಾಗಿರುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳೆಂದರೆ:

 ಮಕ್ಕಳು ಬೇಗನೆ ಸಿಟ್ಟಾಗುವುದು, ಕಿರಿಕಿರಿಗೊಳ್ಳುವುದು ಮತ್ತು ಕ್ಷಿಪ್ರ ಭಾವನಾತ್ಮಕ ಬದಲಾವಣೆಗಳು  ವೀಡಿಯೋ ಗೇಮ್‌ಗಳು ಮತ್ತು ಮೊಬೈಲ್‌ ಫೋನ್‌ಗಳಲ್ಲಿ ಅವರು ಕಾಲ ಕಳೆಯುವುದು ಹೆಚ್ಚಿದೆ

 ಅವರು ಪ್ರತ್ಯೇಕವಾಗಿ ಹೆಚ್ಚು ಕಾಲ ಕಳೆಯುತ್ತಾರೆ ಮತ್ತು ಇದರಿಂದ ಬೇಗನೆ ಸಿಟ್ಟಾಗುವುದು ಹೆಚ್ಚುತ್ತಿದೆ

 ಹಲವು ಕಾರಣಗಳಿಂದಾಗಿ ಮಕ್ಕಳು ಕಲಿಕೆಯ ವಿಚಾರದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ ಕೆಲವರಿಗೆ ಓದುವಿಕೆ, ಇನ್ನು ಕೆಲವರಿಗೆ ಲೆಕ್ಕಾಚಾರ, ಕೆಲವರಿಗೆ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವುದು, ಇತರರು ಯೋಚನೆಗಳ ಸಂಯೋಜನೆಯಲ್ಲಿ ಕಷ್ಟವನ್ನು ಎದುರಿಸುತ್ತಿರಬಹುದು.

Advertisement

ಪ್ರತೀ ಮಗುವೂ ಶಾಲೆ, ತರಗತಿಯೊಳಗೆ ಕಲಿಕೆಯ ಚಟುವಟಿಕೆಯಲ್ಲಿ ವ್ಯಸ್ತನಾಗಲು ಸಿದ್ಧವಾಗಿರುವುದು, ಆರಂಭಿಕ ಕಲಿಕೆಯ ಅನುಭವದಿಂದ ಪೂರ್ಣ ಪ್ರಯೋಜನವನ್ನು ಗಳಿಸುವುದು, ಇವೆಲ್ಲದರ ಒಟ್ಟು ಪರಿಣಾಮವಾಗಿ ಬೆಳವಣಿಗೆ ಕಾಣುವುದು, ಕಲಿಕೆಗೆ ಸಿದ್ಧವಾಗಿರುವುದು ಮತ್ತು ಯಶಸ್ಸು ಗಳಿಸಲು ಸಿದ್ಧವಾಗಿರುವುದೇ ಶಾಲೆಗೆ ಹೋಗಲು ಸಿದ್ಧವಾಗಿರುವುದು ಎಂಬುದರ ಪೂರ್ಣ ಅರ್ಥ. ಮಗು ಮನೆಯ ಪರಿಸರದಿಂದ ಶಾಲಾ ವಾತಾವರಣಕ್ಕೆ ಪರಿವರ್ತನೆಯಾಗುವ ಪ್ರಕ್ರಿಯೆಯಲ್ಲಿ ಹೆತ್ತವರು, ಮಗು ಮತ್ತು ಶಾಲೆ ಭಾಗಿಯಾದಾಗ ಶಾಲಾ ಕಲಿಕೆಗೆ ಸಿದ್ಧತೆ ಸಾಧ್ಯವಾಗುತ್ತದೆ. ಶಾಲಾ ಕಲಿಕೆಗೆ ಸಿದ್ಧತೆ ಸುಗಮವಾಗಿ ನಡೆಯಲು ಕೆಲವು ಆಧಾರ ಸ್ತಂಭಗಳಿವೆ, ಸ್ವಯಂ ನಿಯಂತ್ರಣ, ಭಾಷೆ, ಕಾರ್ಯ ಕಾರಣ ಸಂಬಂಧ ಸ್ಥಾಪನೆ, ಯೋಜನೆ ಮತ್ತು ಅನುಕ್ರಮಣಿಕೆ ಸಾಧನೆ- ಇವು ಆ ಆಧಾರ ಸ್ತಂಭಗಳು.

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಪರಿಣಾಮಕಾರಿ ಸಂವಹನ, ಸಮರ್ಪಕವಾದ ಓದುವಿಕೆ, ಬರೆಯುವಿಕೆ ಮತ್ತು ಕೇಳುವಿಕೆಯ ಕೌಶಲಗಳ ಕೊರತೆ ಪ್ರಸ್ತುತ ಶಿಕ್ಷಕ ವರ್ಗ ಎದುರಿಸುತ್ತಿರುವ ಸವಾಲಾಗಿದ್ದು, ಇವುಗಳನ್ನು ಸಮರ್ಥವಾಗಿ ಪರಿಹರಿಸಬೇಕಾಗಿದೆ.

ಈ ಎಲ್ಲ ವಿಚಾರಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಎದುರಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದ್ದು, ಮನೆಯಿಂದಲೇ ಇದು ಆರಂಭವಾಗಬೇಕಿದೆ. ತಮ್ಮ ಮಕ್ಕಳಿಗೆ ಈ ವಿಚಾರದಲ್ಲಿ ಸಹಾಯ ಮಾಡುವುದಕ್ಕೆ ಹೆತ್ತವರಿಗೆ ಕೆಲವು ಸಲಹೆಗಳು ಇಲ್ಲಿವೆ:

ನಿಮ್ಮ ಮಕ್ಕಳ ಸ್ವಯಂ ನಿಯಂತ್ರಣ ಕೌಶಲ ಹರಿತಗೊಳ್ಳುವಂತಹ ಆಟಗಳನ್ನು ಆಡಿ: ಆರಂಭಿಕ ವಯಸ್ಸಿನಲ್ಲಿ ಯಶಸ್ವಿಯಾಗಲು ಮಕ್ಕಳಿಗೆ ಏಕಾಗ್ರತೆ ಸಾಧಿಸುವುದಕ್ಕೆ ಮತ್ತು ಸೂಚನೆಗಳನ್ನು ಪಾಲಿಸುವುದಕ್ಕೆ ಸಹಾಯವಾಗುವಂತಹ ಆಟಗಳನ್ನು ಆಡಬೇಕು. “ಕೆಂಪು ದೀಪ’ ಎಂದು ಹೇಳಿದಾಗ ಮಗು ನಿಲ್ಲಬೇಕಾದ ಮತ್ತು “ಹಸುರು ದೀಪ’ ಎಂದಾಗ ಚಲಿಸಬೇಕಾದ ಕೆಂಪು ದೀಪ-ಹಸುರು ದೀಪ ಆಟ ಇದಕ್ಕೆ ಒಂದು ಉದಾಹರಣೆ.

ಇನ್ನೊಮ್ಮೆ ಆಡುವಾಗ ನಿಯಮವನ್ನು ಬದಲಾಯಿಸಿ; ಅಂದರೆ “ಕೆಂಪು ದೀಪ’ ಅಂದಾಗ ಚಲಿಸಬೇಕು ಮತ್ತು “ಹಸುರು ದೀಪ’ ಅಂದಾಗ ನಿಲ್ಲಬೇಕು. ಹೀಗೆ ಆಟದ ನಿಯಮವನ್ನು ಬದಲಾಯಿಸಿದಾಗ ಮಗು ಏಕಾಗ್ರತೆ ಸಾಧಿಸಬೇಕಾಗುತ್ತದೆ, ಆಲಿಸಬೇಕಾಗುತ್ತದೆ ಮತ್ತು “ಹಸುರು ದೀಪ’ ಎಂದಾಗ ಚಲಿಸುವ ನಿಯಮವನ್ನು ಪ್ರಜ್ಞಾಪೂರ್ವಕವಾಗಿ ಮುರಿಯಬೇಕಾಗುತ್ತದೆ. ಈ ನಿಯಮ ಬದಲಾವಣೆಯು ಮಗುವಿಗೆ ನಿಂತು, ಆಲೋಚಿಸಿ ಆ ಬಳಿಕ ಪ್ರತಿಸ್ಪಂದಿಸುವಂತೆ ಉತ್ತೇಜಿಸುತ್ತದೆ.

ಮಗುವಿನ ಏಕಾಗ್ರತೆಯನ್ನು ಪುನಶ್ಚೇತನಗೊಳಿಸುವುದಕ್ಕಾಗಿ ಶ್ರಮಿಸಿ: ಸುದೀರ್ಘ‌ಕಾಲ ಪ್ರತ್ಯಕ್ಷ ತರಗತಿ ಪಾಠ-ಕಲಿಕೆಯಿಂದ ದೂರವಿದ್ದ ಬಳಿಕ ಈಗ ಮತ್ತೆ ಸ್ಮರಣೆಯಿಂದ ಮಾಹಿತಿಯನ್ನು ಸಂಸ್ಕರಿಸುವುದು, ಶೇಖರಿಸುವುದು ಮತ್ತು ಮರಳಿ ನೆನಪಿಗೆ ತಂದುಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಆಗಾಗ ನಿಮ್ಮ ಮಗುವಿಗೆ ಸಲಹೆ-ಸೂಚನೆಗಳನ್ನು ನೀಡುವುದರಿಂದ ಅವರಿಗೆ ಏಕಾಗ್ರವಾಗಿರಲು, ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಪಝಲ್‌ಗ‌ಳು, ಮೇಝ್ಗಳಂತಹ ಆಟಗಳನ್ನು ಆಡುವುದರಿಂದ ಈ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ.

ನಿಮ್ಮ ಮಗುವಿನ ಭಾವನಾತ್ಮಕ ಬುದ್ಧಿಮತ್ತೆಯನ್ನು ಪೋಷಿಸಿ: ದೀರ್ಘ‌ಕಾಲ ಮನೆಯಲ್ಲಿಯೇ ಬಂದಿಯಾಗಿದ್ದಂತಹ ಸ್ಥಿತಿ ಅನೇಕ ಪುಟಾಣಿ ಮಕ್ಕಳ ಭಾವನಾತ್ಮಕ ಬುದ್ಧಿಮತ್ತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಶಾಲಾ ವಾತಾವರಣಕ್ಕೆ ಒಗ್ಗಿಕೊಳ್ಳುವುದಕ್ಕೆ ಭಾವನಾತ್ಮಕ ಬುದ್ಧಿಮತ್ತೆಯು ನಿರ್ಣಾಯಕವಾಗಿರುವ ಅಂಶವಾಗಿದೆ. ಭಾವನಾತ್ಮಕವಾಗಿ ಬುದ್ಧಿವಂತವಾಗಿರುವ ಮಗುವಿಗೆ ಯಾವಾಗ ಸಹಾಯ ಕೇಳಬೇಕು ಎನ್ನುವುದು ಗೊತ್ತಿರುತ್ತದೆ. ಮಗುವಿನ ಬಳಿ ಅವರ ಭಾವನೆಗಳ ಬಗ್ಗೆ ಮಾತನಾಡುವ ಮೂಲಕ ಅವುಗಳ ಹೆಸರುಗಳನ್ನು ಮತ್ತು ಅವುಗಳ ಬಗ್ಗೆ ಹಾಗೂ ಅವುಗಳನ್ನು ಹೇಗೆ ಸಮರ್ಪಕವಾಗಿ ಅಭಿವ್ಯಕ್ತಿಗೊಳಿಸಬೇಕು ಎನ್ನುವುದನ್ನು ಅರಿತುಕೊಳ್ಳಲು ಸಹಾಯ ಮಾಡಿ. ಮಗುವಿನ ಭಾವನೆಗಳನ್ನು ತಿರಸ್ಕರಿಸುವ ಬದಲು ಅವುಗಳನ್ನು ಸ್ವೀಕರಿಸಿ. ಇದರ ಜತೆಗೆ ಹೆತ್ತವರು ಮಕ್ಕಳಿಗೆ ಭಾವನೆಗಳನ್ನು ನಿಭಾಯಿಸುವ ವಿಧಾನಗಳನ್ನು ಕೂಡ ಕಲಿಸಬಹುದು. ಉದಾಹರಣೆಗೆ, ಋಣಾತ್ಮಕ ಭಾವನೆಗಳು ಉಂಟಾದಾಗ ಆಳವಾಗಿ ಉಸಿರೆಳೆದುಕೊಳ್ಳುವ ಅಥವಾ ಹತ್ತರ ವರೆಗೆ ಎಣಿಕೆ ಮಾಡುವ ಮೂಲಕ ನಿಭಾಯಿಸುವುದನ್ನು ಹೇಳಿಕೊಡಬಹುದು. ಇದಲ್ಲದೆ, ತಮಗೆ ಕಿರಿಕಿರಿ ಉಂಟಾದಾಗ ಆಟವಾಡುವುದು, ಚಿತ್ರ ಬಿಡಿಸುವುದು, ಸಂಗೀತ ಕೇಳುವಂತಹ ಕ್ರಿಯೆಗಳಲ್ಲಿ ತೊಡಗಿಕೊಳ್ಳುವಂತೆ ತಮ್ಮ ಭಾವನೆಗಳನ್ನು ಧನಾತ್ಮಕವಾಗಿ ಹರಿಯಬಿಡಲು ಅವರಿಗೆ ಹೇಳಿಕೊಡಿ.

ಸ್ವಯಂ ನಿಯಂತ್ರಣವನ್ನು ಆಚರಣೆಗೆ ತನ್ನಿ: ಕೊರೊನಾ ಸಾಂಕ್ರಾಮಿಕ ಆರಂಭವಾದ ಬಳಿಕ ಅನೇಕ ಮಕ್ಕಳು ಸ್ವಯಂ ನಿಯಂತ್ರಣದ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಳಿ ಬದಲಾಯಿಸಿಕೊಳ್ಳುವಂತಹ ಆಟಗಳನ್ನು ಮಕ್ಕಳ ಜತೆಗೆ ಆಡುವ ಮೂಲಕ ಸ್ವಯಂ ನಿಯಂತ್ರಣ ಕೌಶಲವನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ. ಉದಾಹರಣೆಗೆ, ಯುನೋ ಕಾರ್ಡ್‌ ಆಟ.

ಓದುವ ಸಂಸ್ಕೃತಿಯನ್ನು ಬೆಳೆಸಿ: ಮಕ್ಕಳನ್ನು ಶಾಲಾ ಕಲಿಕೆಗೆ ಸನ್ನದ್ಧಗೊಳಿಸುವುದಕ್ಕೆ ಓದುವ ಹವ್ಯಾಸವನ್ನು ಬೆಳೆಸುವುದು ಅತ್ಯಂತ ಸುಲಭ, ಪರಿಣಾಮಕಾರಿ ಮಾರ್ಗ. ಇದರಿಂದ ಸಾಮಾಜಿಕ ಕೌಶಲಗಳು ಮತ್ತು ಶಬ್ದ ಭಂಡಾರವೂ ವೃದ್ಧಿಸುತ್ತದೆ. ಕತೆಗಳನ್ನು ಓದುವ ಸಂದರ್ಭದಲ್ಲಿ ಮಕ್ಕಳು ಪುಟ್ಟ ಪ್ರಹಸನ ಆಡುವಂತೆ ಹೆತ್ತವರು ಪ್ರೋತ್ಸಾಹಿಸಬಹುದು. ಕತೆಯ ಪ್ರತೀ ಪಾತ್ರದ ಬಗ್ಗೆ ಮಗುವಿಗೆ ಏನು ಅನ್ನಿಸುತ್ತದೆ ಎಂದು ಹೆತ್ತವರು ಕೇಳಬಹುದು ಹಾಗೂ ಕತೆಯ ಬಗ್ಗೆ ಇರುವ ಧನಾತ್ಮಕ ಅಂಶಗಳನ್ನು ಎತ್ತಿ ಹೇಳಬಹುದು.

ದಿನಚರಿಗಳನ್ನು ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಲಭ್ಯರಿರಿ: ಶಾಲಾ ತರಗತಿಯ ಅವಧಿಗಳ ಬಳಿಕ ಮಗು ನಿಮ್ಮ ಜತೆಗೆ ಸಾಕಷ್ಟು ಹೊತ್ತು ಸಮಯ ಕಳೆಯುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಶಾಲೆಯಲ್ಲಿ ಏನು ನಡೆಯಿತು, ಏನನ್ನು ತಾನು ಕಲಿತೆ ಎಂಬುದನ್ನು ಮಗು ನಿಮ್ಮ ಜತೆಗೆ ಹಂಚಿಕೊಳ್ಳುವಂತಾಗಲಿ, ಶಾಲಾ ಶಿಕ್ಷಕರು ನೀಡಿದ ಕೆಲಸ ಕಾರ್ಯಗಳನ್ನು ನಿಮ್ಮ ಜತೆಗೆ ಮಗು ಮಾಡುವಂತೆ ನೋಡಿಕೊಳ್ಳಿ. ಇದರಿಂದ ತನ್ನ ಹೆತ್ತವರು ತನ್ನ ಕಲಿಕೆಯ ಜತೆಗೆ ಸಕ್ರಿಯವಾಗಿ ಒಳಗೊಳ್ಳುತ್ತಿದ್ದಾರೆ, ತನ್ನ ಬದುಕಿನ ಜತೆಗೆ ಅವರು ಭಾಗಿಯಾಗುತ್ತಿದ್ದಾರೆ ಎಂಬ ಭಾವನೆ ಮಗುವಿನಲ್ಲಿ ಮೂಡುತ್ತದೆ. ಇದರ ಜತೆಗೆ ಮಗುವಿನ ಬದುಕಿನಲ್ಲಿ ಏನೇನು ಆಗುತ್ತಿದೆ ಎಂಬುದರ ಮಾಹಿತಿ ಹೆತ್ತವರಿಗೂ ಇರುತ್ತದೆ.

ಸಹಪಠ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ: ಮಗು ತನಗೆ ಇಷ್ಟವಾದ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ಶೈಕ್ಷಣಿಕ ಚಟುವಟಿಕೆ ಮತ್ತು ಸಾಧನೆಯಲ್ಲಿಯೂ ಗಮನಾರ್ಹ ಉನ್ನತಿ ಉಂಟಾಗುತ್ತದೆ. ನಿಮ್ಮ ಮಗು ಚಿತ್ರ ಬಿಡಿಸುವುದು, ನೃತ್ಯ ಮಾಡುವುದು, ಹಾಡುವುದು, ಆಟೋಟಗಳನ್ನು ಆಡುವುದು ಮತ್ತು ಶಾಲೆಗೆ ಸಂಬಂಧಿಸಿದ ಇತರ ಯಾವುದೇ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರೆ ಆತ/ಆಕೆ ಅದರಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಬೇಡಿ. ಬದಲಾಗಿ ಅದರಲ್ಲಿ ಭಾಗವಹಿಸುವಂತೆ ಅವರನ್ನು ಪ್ರೋತ್ಸಾಹಿಸಿ. ಇದರಿಂದ ಮಗು ತನ್ನ ಬಗ್ಗೆ ತಾನು ವಿಶ್ವಾಸ ಬೆಳೆಸಿಕೊಳ್ಳುತ್ತದೆಯಲ್ಲದೆ ತಾನು ಯಾವುದೋ ಒಂದರಲ್ಲಿ ಸಮರ್ಥ ಎಂಬ ಭಾವನೆ ಹೊಂದಲು ಸಾಧ್ಯವಾಗುತ್ತದೆ. ತನ್ನ ಸಾಮರ್ಥ್ಯ ವನ್ನು ಹೆತ್ತವರು ತಿಳಿದುಕೊಂಡಿದ್ದಾರೆ ಎನ್ನುವ ಭಾವನೆಯನ್ನೂ ಇದು ಬೆಳೆಸುತ್ತದೆ.

ಕೌಟುಂಬಿಕ ಅಧ್ಯಯನ ಕೊಠಡಿ: ನೀವು ಉದ್ಯೋಗಸ್ಥ ಹೆತ್ತವರಾಗಿದ್ದಲ್ಲಿ ನಿಮ್ಮ ಮನೆಯ ಒಂದು ಭಾಗವನ್ನು “ಕುಟುಂಬ ಅಧ್ಯಯನ ಕೊಠಡಿ’ಯಾಗಿ ಮೀಸಲಿಡಿ. ಇದು ಮನೆಯ ಎಲ್ಲ ಸದಸ್ಯರು ತಮ್ಮ ತಮ್ಮ ಶೈಕ್ಷಣಿಕ, ಔದ್ಯೋಗಿಕ ಅಥವಾ ವ್ಯಾಪಾರ ವ್ಯವ ಹಾರ ಸಂಬಂಧಿಯಾದ ಕೆಲಸ ಕಾರ್ಯಗಳನ್ನು ಮಾಡುವ ಸ್ಥಳವಾಗಿ ರಲಿ. ನಿಮ್ಮ ಮಗು ಕೂಡ ಇಲ್ಲಿಯೇ ತನ್ನ ಮನೆಗೆಲಸ, ಓದು ಇತ್ಯಾದಿ ನಡೆಸಲಿ. ಇದರಿಂದ ನಿಮಗೆ ನಿಮ್ಮ ಔದ್ಯೋಗಿಕ ಕೆಲಸಕಾರ್ಯಗಳ ಜತೆಗೆಯೇ ಮಗುವಿನ ಶಾಲಾ ಚಟುವಟಿಕೆಗಳ ಮೇಲೆ ನಿಗಾ ಇರಿಸಲು, ಪ್ರಗತಿಯನ್ನು ಗಮನಿಸಲು ಸಾಧ್ಯವಾಗುತ್ತದೆ. ಮಗುವಿನ ಕಲಿಕಾ ಪ್ರಕ್ರಿಯೆಯ ಜತೆಗೆ ನೀವು ಭಾಗಿಯಾಗಲು ಇದು ಅವಕಾಶ ಒದಗಿಸುತ್ತದೆ.

ಆದರ್ಶವಾಗಿ: ಬಿಕ್ಕಟ್ಟುಗಳು ಅಥವಾ ಸವಾಲುಗಳನ್ನು ಸಾವಧಾನವಾಗಿ, ಉತ್ಪಾದಕ ರೀತಿಯಲ್ಲಿ ಬಗೆಹರಿಸಲು ಸಮಸ್ಯಾ ಪರಿಹಾರ ಕೌಶಲಗಳನ್ನು ಉಪಯೋಗಿಸಿಕೊಳ್ಳಿ. ಯಾವುದೇ ಸಮಸ್ಯೆ ಅಥವಾ ಸವಾಲು ಎದುರಾದಾಗ ನೀವು ಸಿಟ್ಟಾಗಿ, ಉದ್ವಿಗ್ನರಾದರೆ ಮಗು ಕೂಡ ಅದೇ ದಾರಿ ಹಿಡಿಯುತ್ತದೆ. ಇತರರ ಜತೆಗೆ ಮಾತನಾಡುವಾಗ, ವ್ಯವಹರಿಸುವಾಗ ಸಹಾನುಭೂತಿ, ಗೌರವಗಳಿರಲಿ. ನಿಮ್ಮಿಂದ ತಪ್ಪಾಗಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮೂಲಕ ಉತ್ತರದಾಯಿತ್ವವನ್ನು ಪ್ರದರ್ಶಿಸಿ ಮತ್ತು ಭವಿಷ್ಯದಲ್ಲಿ ಅದೇ ತಪ್ಪುಗಳನ್ನು ಪುನರಾವರ್ತಿಸದಿರುವ ಜಾಣ್ಮೆಯನ್ನು ಪ್ರದರ್ಶಿಸಿ. ಪ್ರತಿಯೊಂದಕ್ಕೂ ಇತರರನ್ನು ದೂರುವ, ಇತರರನ್ನು ಹೊಣೆ ಮಾಡುವ ವರ್ತನೆಯನ್ನು ತೋರಿಸದಿರಿ.

ನಿಮ್ಮ ಮಗುವನ್ನು ಇತರ ಮಕ್ಕಳ ಜತೆಗೆ ಹೋಲಿಸದಿರಿ: ನಿಮ್ಮ ಮಗುವನ್ನು ಇತರ ಮಕ್ಕಳ ಜತೆಗೆ ಹೋಲಿಸುವುದರಿಂದ ನಿಮ್ಮ ಮಗುವಿನ ಮೇಲೆ ಹಲವು ಋಣಾತ್ಮಕ ಪರಿಣಾಮಗಳು ಉಂಟಾಗಬಲ್ಲವು. ಇದರಿಂದ ಅವರಿಗೆ ಒತ್ತಡ ಉಂಟಾಗುವುದಷ್ಟೇ ಅಲ್ಲದೆ ಮಗು ಮತ್ತು ನಿಮ್ಮ ನಡುವಣ ಸಂಬಂಧವೂ ಕೆಡುತ್ತದೆ. ಅವರ ಸಾಮರ್ಥ್ಯಗಳನ್ನು ಶ್ಲಾ ಸಿ ಮತ್ತು ಅವರ ಸಾಧನೆಗಳ ಬಗ್ಗೆ ಮುಕ್ತವಾಗಿ ಹೆಮ್ಮೆ ವ್ಯಕ್ತಪಡಿಸಿ. ಕೆಲವು ಮನುಷ್ಯ ಸಹಜ ದೌರ್ಬಲ್ಯಗಳನ್ನು ಹೊಂದಿರುವುದರಲ್ಲಿ ತಪ್ಪಿಲ್ಲ ಎಂಬುದನ್ನು ಅವರಿಗೆ ಕಲಿಸಿಕೊಡಿ ಮತ್ತು ನಿಮಗೆ ಸಾಧ್ಯವಿರುವಷ್ಟು ಅವರಿಗೆ ಸಹಾಯ ಮಾಡಿ. ಎಲ್ಲಕ್ಕಿಂತ ಮಿಗಿಲಾಗಿ ಸದಾ ಅವರನ್ನು ಬೆಂಬಲಿಸಿ, ಅವರನ್ನು ಪ್ರೀತಿಸಿ; ಅವರು ತಮ್ಮ ಗರಿಷ್ಠ ಸಾಧನೆ ಮಾಡುವುದರಿಂದ ನಿಮಗೆ ಬಹಳ ಸಂತೋಷವಾಗುತ್ತದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿ.

ಪ್ರವೀಣ್‌ ಜೈನ್‌

ಮನೋ ಸಾಮಾಜಿಕ ಕನ್ಸಲ್ಟಂಟ್‌,

ಸೈಕಿಯಾಟ್ರಿ ವಿಭಾಗ ಮತ್ತು ಹೊಂಬೆಳಕು

ಪುನರ್ವಸತಿ ಕೇಂದ್ರ, ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next