ಅಫಜಲಪುರ: 50ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ಶಿಕ್ಷಕರು ಹಬ್ಬಕ್ಕೊಮ್ಮೆ, ಹುಣ್ಣಿಮೆಗೊಮ್ಮೆ ಬರುತ್ತಿದ್ದಾರೆ. ಶಿಕ್ಷಕರ ಈ ಬೇಜವಾಬ್ದಾರಿತನಕ್ಕೆ ಬೇಸತ್ತು ಮಕ್ಕಳು ತಮ್ಮ ಪಾಲಕರೊಂದಿಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು. ತಾಲೂಕಿನ ಬಳೂರ್ಗಿ ಗ್ರಾಮದ ಹರಿಜನ ವಾಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹರಿಜನ ವಾಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಷ್ಟು ಮಕ್ಕಳಿಗೆ ಇಬ್ಬರು ಶಿಕ್ಷಕರಿದ್ದು, ಈ ಪೈಕಿ ಒಬ್ಬ ಶಿಕ್ಷಕರು ಶಾಲೆಗೆ ಬರುವುದೇ ಇಲ್ಲ. ಅವರ ಮುಖವನ್ನು ನಾವುಗಳು ಸರಿಯಾಗಿ ನೋಡಿಯೇ ಇಲ್ಲ. ಇನ್ನೊಬ್ಬ ಶಿಕ್ಷಕರು ಬೇಕಾಬಿಟ್ಟಿಯಾಗಿ ಶಾಲೆಗೆ ಬರುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳ ಸೈಕ್ಷಣಿಕ ಮಟ್ಟ ಕುಂಠಿತಗೊಂಡಿದೆ. ಅಲ್ಲದೆ ನಮ್ಮ ಶಾಲೆಯ ಹೆಸರು ಹಾಳಾಗಿದೆ. ಮಕ್ಕಳು ಸಹ ಶಿಕ್ಷಕರು ಶಾಲೆಗೆ ಬರುವುದಿಲ್ಲವೆಂದು ಶಾಲೆಯಲ್ಲಿ ಪುಸ್ತಕಗಳನ್ನಿಟ್ಟು ಹರಟೆ ಹೊಡೆಯುತ್ತಾ ಓಡಾಡುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ತುಕಾರಾಮ ಕರೇಲಿ ಮಾತನಾಡಿ, ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕಷ್ಟು ಸಮಸ್ಯೆ
ಇದೆ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಿಕ್ಷಕರಂತು ಸರಿಯಾಗಿ ಶಾಲೆಗೆ ಬರುವುದಿಲ್ಲ, ಒಬ್ಬರ ಮುಖವನ್ನು ನಾವು ಸರಿಯಾಗಿ ನೋಡಿಲ್ಲ, ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ ಗೊತ್ತಿಲ್ಲ. ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನು ಶಿಕ್ಷಕರು ನೀಡಿಲ್ಲ, ಚಿತ್ರ ನೋಡಿ ವಸ್ತು ಗುರುತಿಸದಷ್ಟು ಮಕ್ಕಳು ಹಿಂದೆ ಬಿದ್ದಿದ್ದಾರೆಂದರೆ ಇಲ್ಲಿನ ಶಿಕ್ಷಕರು ಅದ್ಯಾವ ರೀತಿಯಲ್ಲಿ ಶಿಕ್ಷಣ ನೀಡುತ್ತಾರೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಶಿಕ್ಷಕರನ್ನು ತೆಗೆದು ಹೊಸ ಶಿಕ್ಷಕರನ್ನು ನೇಮಿಸಬೇಕು. ಇಲ್ಲಿಗೆ ಬರುವ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಇದ್ದುಕೊಂಡು ಬಡಾವಣೆ ಮಕ್ಕಳಿಗೆ ಪಾಠ ಬೋಧನೆ ಮಾಡುವಂತೆ ತಾಕೀತು ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಮತ್ತು ಪಾಲಕರೊಂದಿಗೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳೂರ್ಗಿ ಗ್ರಾಮದ ಹರಿಜನ ವಾಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಸಮಸ್ಯೆ ಕುರಿತು ಶಾಲೆಯ ಎಸ್ ಡಿಎಂಸಿ ಅದ್ಯಕ್ಷರು ತಿಳಿಸಿದ್ದಾರೆ. ತಕ್ಷಣ ಹೊಸ ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಪಾಠ ಬೋಧನೆ ಆರಂಭಿಸಲಾಗುತ್ತದೆ. ಕರ್ತವ್ಯ ಲೋಪ ಎಸಗಿದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ವಸಂತ ರಾಠೊಡ, ಬಿಇಒ