ಎಚ್.ಡಿ. ಕೋಟೆ: ತಾಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಪೋಷಕರು ಶಾಲಾ ಕಟ್ಟಡದ ಬೇಡಿಕೆಗಾಗಿ ಸೋಮವಾರ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿ ಸರ್ಕಾರ ಹಾಗೂ ತಾಲೂಕಿನ ಶಾಸಕರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗಿದರು.
ಪಟ್ಟಣದ ಶಾಲಾ ಕಟ್ಟಡಗಳು ತುಂಬ ಹಳೆಯದಾಗಿದ್ದು, ಕುಸಿಯುವ ಹಂತದಲ್ಲಿವೆ. ಅದರೆ ಇಲ್ಲಿನ ಶಾಲೆಯ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲದ್ದ ಕಾರಣ ಶಾಲೆಯನ್ನು ಶಿಕ್ಷಕರು ತೆರೆಯದಂತೆ ಎಚ್ಚರ ವಹಿಸಿ ಶಾಲಾ ಗೇಟ್‌ಗೆ ಬೀಗ ಜಡಿದು ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ತಾಪಂ ಸದಸ್ಯ ನಂಜೇಗೌಡ ಮಾತನಾಡಿ, ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು, ದುರಸ್ತಿಗಾಗಿ ಹಲವು ಬಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಸಹ ಯಾರೊಬ್ಬರು ಸಹ ಇಲ್ಲಿ ಬಂದು ನೋಡಿಲ್ಲ, ಶಾಲಾ ಮಕ್ಕಳು ಯಾವಾಗ ಕಟ್ಟಡ ಬಿಳುತ್ತದೋ ಎಂಬ ಭಯದಲ್ಲಿ ಪಾಠ ಆಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂದು ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ತಾಲೂಕು ಶಿಕ್ಷಣ ಸಂಯೋಜಕ ಭೀಮಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಕ್ಕಳ ಮತ್ತು ಪೋಷಕರನ್ನು ಮನಲಿಸಲು ಯತ್ನಿಸಿದರು ಸಫಲವಾಗಲಿಲ್ಲ. ಪ್ರತಿಭಟನೆ ಕೈಬಿಡದ ಮಕ್ಕಳು ಮತ್ತು ಪೋಷಕರು ಶಾಸಕರು, ಸಂಸದರು ಬರುವವರೆಗೂ ಪ್ರತಿಭಟನೆ ನಿಲ್ಲದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಗ್ರಾಪಂ. ಸದಸ್ಯರಾದ ದೇವೇಶ್, ಹೆಜ್ಜೆ„ರಯ್ಯ, ನಂಜುಂಡಮೂರ್ತಿ, ಎಸ್‌ಡಿಎಂಸಿ ಸದಸ್ಯ ನಟರಾಜು, ಬೋಗನಂಜಪ್ಪ, ಮುಖಂಡರಾದ ಸಣ್ಣಸ್ವಾಮಿ ನಾಯಕ, ಎಂ.ಡಿ.ಮಂಚಯ್ಯ, ರಾಜಾಚಾರಿ, ರುದ್ರಯ್ಯ, ವಾಸು, ಮಹಿಳಾ ಸಂಘಟನೆಗಳು, ಪೋಷಕರು ಸೇರಿದಂತೆ 140ಕ್ಕೂ ಹೆಚ್ಚು ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.