Advertisement

ಬಡವರ ಮಕ್ಕಳು ವೈದ್ಯರಾಗಬೇಕು

12:28 PM May 03, 2017 | Team Udayavani |

ಬೆಂಗಳೂರು: ಬಡವರು, ಸಾಮಾನ್ಯ ಜನರ ಮಕ್ಕಳು ವೈದ್ಯರಾಗಬೇಕು ಎಂಬ ಕಾರಣಕ್ಕೆ ಸರ್ಕಾರಿ ವೈದ್ಯ ಸೀಟುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ನೀಡಿರುವ 60 ಕೋಟಿ ರೂ. ದೇಣಿಗೆಯಡಿ ಧರ್ಮಶಾಲೆ ನಿರ್ಮಾಣಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸುವ ಜತೆಗೆ ಲೀನಿಯರ್‌ ಆಕ್ಸಲರೇಟರ್‌ ಯಂತ್ರ ಹಾಗೂ ರಕ್ತ ನಿಧಿ ಘಟಕದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. 

Advertisement

ರಾಜ್ಯದಲ್ಲಿ 18 ಸರ್ಕಾರಿ ವೈದ್ಯ ಕಾಲೇಜುಗಳಿದ್ದು, 14 ಕಾಲೇಜುಗಳನ್ನು ಸರ್ಕಾ­ರವೇ ಆರಂಭಿಸಿದೆ. ಬಡವರ ಮಕ್ಕಳಿಗೆ ಹೆಚ್ಚು ಅವಕಾಶ ಸಿಗಲಿ ಎಂಬುದು ಇದರ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರಿ ವೈದ್ಯ ಸೀಟಿಗೆ ಪೈಪೋಟಿ ನಡೆಸುವವರು ನಂತರ ಗ್ರಾಮೀಣ ಜನರ ಸೇವೆ ಸಲ್ಲಿಸಲು ಹಿಂದೇಟು ಹಾಕುವ ಮನೋಭಾವ ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಹಾಗೂ ನಾಲ್ಕು ಕಂದಾಯ ವಿಭಾಗಗಳಲ್ಲೂ ಸೂಪರ್‌ಸ್ಪೆಷ್ಟಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ರಾಜ್ಯದ 6.30 ಕೋಟಿ ಜನಸಂಖ್ಯೆಯಲ್ಲಿ 4 ಕೋಟಿಗೂ ಅಧಿಕ ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. 1.10 ಕೋಟಿ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಸರ್ಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಿದ್ದು, ಅವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಗುರಿ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ ವಾರ್ಷಿಕವಾಗಿ 25,000 ಕೋಟಿ ರೂ., ಆರೋಗ್ಯ ಇಲಾಖೆಗೆ 7,500 ಕೋಟಿ ರೂ. ಅನುದಾನ ನೀಡುತ್ತಿದ್ದರೂ ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆಯಿದ್ದರೂ ಖಾಸಗಿ ಆಸ್ಪತ್ರೆಗೆ ಹೋಗುವ ಮನೋಭಾವ ಹೆಚ್ಚಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಯಿಂದ ನೆರವು ಕೋರುತ್ತಾರೆ. ನಿತ್ಯ 20-25 ಈ ರೀತಿಯ ಮನವಿಗಳು ಬರುತ್ತಿದ್ದು, ವರ್ಷಕ್ಕೆ 100 ಕೋಟಿ ರೂ.ಗಿಂತ ಹೆಚ್ಚು ಹಣ ನೀಡಲಾಗುತ್ತಿದೆ. ಈ ರೀತಿ ವೈದ್ಯಕೀಯ ನೆರವು ನೀಡುವ ಬದಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಗುಣಮಟ್ಟದ ಆರೋಗ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಶುಭವಾಗಲಿ, ಪುಣ್ಯ ಬರಲಿ: ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಧರ್ಮಶಾಲೆ ನಿರ್ಮಾಣಕ್ಕೆ 60 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಸರ್ಕಾರ, ನಾಡಿನ ಜನತೆ ಪರವಾಗಿ ಹಾಗೂ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಸಮಾಜದಲ್ಲಿ ದಾನ ನೀಡುವವರು, ನೀಡದವರೂ ಇದ್ದಾರೆ. ಕೆಲವರು ಸಮಾಜ ತಮಗೆ ಕೊಟ್ಟಿದ್ದನ್ನು ವಾಪಸ್‌ ಸಮಾಜಕ್ಕೆ ನೀಡುತ್ತಾರೆ. ಸಮಾಜದ ಕೊಡುಗೆಯಿಲ್ಲದೆ ನಾವು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಬಡ ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸಲು ಉದಾರವಾಗಿ ನೆರವು ನೀಡುತ್ತಿರುವ ಸುಧಾಮೂರ್ತಿ ಅವರಿಗೆ ಆಯುಷ್ಯ, ಆರೋಗ್ಯ ದೊರಕಲಿ. ಇತರೆ ದಾನಿಗಳಿಗೆ ಶುಭವಾಗಲಿ, ಪುಣ್ಯ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.

Advertisement

ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಮಾತನಾಡಿ, ಇನ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿ ಅವರು ರೋಗಿಗಳಿಗೆ ಹೆಚ್ಚಿನ ಸವಲತ್ತು ಕಲ್ಪಿಸಲು ಮುಂದಾಗಿದ್ದಾರೆ. ಧರ್ಮಶಾಲೆ ನಿರ್ಮಾಣಕ್ಕೆ 50 ಕೋಟಿ ರೂ. ನೆರವು ಘೋಷಿಸಿದರೂ ನಂತರ ಅಗತ್ಯವಿರುವಷ್ಟೂ ಹಣ ನೀಡುವುದಾಗಿ ಹೇಳಿದ್ದಾರೆ. ಹಾಗೇ ಯಕೃತ್ತು ಕಸಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 75 ಕೋಟಿ ರೂ. ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಂಸ್ಥೆಗೆ ದೇಣಿಗೆ ನೀಡಿದ ದಾನಿಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ಮೇಯರ್‌ ಜಿ.ಪದ್ಮಾವತಿ, ವೈದ್ಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ, ಪಾಲಿಕೆ ಸದಸ್ಯೆ ಗಂಗಾಬಿಕೆ, ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೀತಿದೆ
ಬೆಂಗಳೂರು:
ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಗಳು ಹೊರಟ ಕೆಲ ನಿಮಿಷದಲ್ಲೇ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ (ರೇಡಿಯೋಥೆರಪಿ) ಡಾ.ವಿನಯ್‌ ಅವರು ಸಂಸ್ಥೆಯ ನಿರ್ದೇಶಕರು, ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ, ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳದತ್ತ ಘೋಷಣೆ ಕೂಗುತ್ತಲೇ ಬಂದ ಡಾ.ವಿನಯ್‌, ಸಂಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ದಾನಿಗಳು ನೀಡಿದ ದೇಣಿಗೆಯನ್ನು ಸಮರ್ಪಕವಾಗಿ ಬಳಸದೆ ಬ್ಯಾಂಕ್‌ನಲ್ಲಿಟ್ಟು ಬಡ್ಡಿ ಹಣ ಪಡೆಯಲಾಗುತ್ತಿದೆ. ದೇಣಿಗೆ ನೀಡಿದ ಹಣದಲ್ಲಿ 80 ಲಕ್ಷ ರೂ. ಬಳಸಿಕೊಂಡು ನಿರ್ದೇಶಕರ ನಿವಾಸ ನವೀಕರಿಸಿ ಹಣ ಪೋಲು ಮಾಡಲಾಗುತ್ತಿದೆ’ ಎಂದು ದೂರಿದರು.

ಭಾರತೀಯ ವೈದ್ಯ ಮಂಡಳಿ ನಿಯಮಾವಳಿ ಪ್ರಕಾರ ಸಂಸ್ಥೆಯ ನಿರ್ದೇಶಕರಾಗುವವರು ಕನಿಷ್ಠ 10 ವರ್ಷ ಸಹ ಪ್ರಾಧ್ಯಾಪಕ/ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು. ಆದರೆ ಲಿಂಗೇಗೌಡರಿಗೆ 10 ತಿಂಗಳ ಸೇವಾವಧಿ ಕಡಿಮೆಯಿದ್ದರೂ ನೇಮಕ ಮಾಡಲಾಗಿದೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳಿಗೆ ದೂರು ನೀಡಲು ಮುಂದಾದಾಗ ಭೇಟಿಗೆ ಅವಕಾಶ ನೀಡುವುದಾಗಿ ನಂಬಿಸಿದ ಸಿದ್ದಾಪುರ ಠಾಣೆ ಸಬ್‌ಇನ್‌ಸ್ಪೆಕ್ಟರ್‌, ನಮ್ಮನ್ನು 2 ಗಂಟೆ ಕಾಲ ಕೊಠಡಿಯೊಂದರಲ್ಲಿ ಅಕ್ರಮವಾಗಿ ಬಂಧಿಸಿಟ್ಟು ಮುಖ್ಯಮಂತ್ರಿಗಳು ನಿರ್ಗಮಿಸಿದ ನಂತರ ಹೊರಗೆ ಬಿಟ್ಟಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ದೂರಿದರು.

ಹಾಸನದ ಮಂಗಳಾ ಎಂಬುವರು ಮಾತನಾಡಿ, “ತಂದೆ ಜಯಣ್ಣ ಅವರ ಕುತ್ತಿಗೆಯಲ್ಲಿ ಗಡ್ಡೆ ಕಾಣಿಸಿಕೊಂಡಿದ್ದು, ರೇಡಿಯೋಥೆರಪಿಗಾಗಿ ಮೂರು ತಿಂಗಳಿನಿಂದ ಅಲೆದಾಡಿದರೂ ಚಿಕಿತ್ಸೆ ದೊರಕಿಲ್ಲ. ಆದರೆ ಹಣ ನೀಡಿದವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಇದು ಬಡವರ ಆಸ್ಪತ್ರೆ ಎನ್ನುತ್ತಾರೆ. ಆದರೆ ಇಲ್ಲಿ ದೊಡ್ಡವರಿಗಷ್ಟೇ ಚಿಕಿತ್ಸೆ ಸಿಗುತ್ತಿದೆ. ಈ ಅವ್ಯವಸ್ಥೆಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು. ಆದರೆ ಇದಾವುದನ್ನೂ ಕೇಳಿಸಿಕೊಳ್ಳಲು ಸಿಎಂ ಅಲ್ಲಿರಲಿಲ್ಲ!

ಮೆಚ್ಚುಗೆ ಕೇಳಿ ಕಸಿವಿಸಿಯಾಗುತ್ತೆ!
ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ­ಮೂರ್ತಿ ಮಾತನಾಡಿ, “ನಮ್ಮ ಕೈಲಾಗಿದ್ದು ನೀಡಿದ್ದಕ್ಕೆ ಹತ್ತಾರು ಬಾರಿ ಮೆಚ್ಚುಗೆ ವ್ಯಕ್ತಪಡಿಸುವುದು ಕೇಳಿದಾಗ ಕಸಿವಿಸಿಯಾಗುತ್ತದೆ. ಆದರೆ, “ಇದ್ದಾಗ ಇಮಾಮ್‌ ಸಾಬಿ, ಇಲ್ಲದಾಗ ಫ‌ಕೀರ್‌ ಸಾಬಿ’ ಎಂಬ ಉತ್ತರ ಕರ್ನಾಟಕದ ಮಾತಿನಂತೆ ನಾವಿದ್ದೇವೆ. ನಮ್ಮ ತಂದೆ ಹುಬ್ಬಳ್ಳಿಯ ಹಿಂದಿನ ಕರ್ನಾಟಕ ವೈದ್ಯ ಕಾಲೇಜಿನಲ್ಲಿ ಸರ್ಕಾರಿ ವೈದ್ಯರಾಗಿದ್ದರು. ಹಾಗಾಗಿ ನನಗೆ ಬಾಲ್ಯದಿಂದಲೂ ಸರ್ಕಾರಿ ಆಸ್ಪತ್ರೆ ಆವರಣಗಳ ಪರಿಚಯವಿದೆ.

ನನ್ನ ಎರಡೂ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಯಿತು. ಮೊದಲ ಹೆರಿಗೆಗೆ 25 ಪೈಸೆ, ಎರಡನೇ ಹೆರಿಗೆಗೆ 15 ರೂ. ಖರ್ಚಾಗಿತ್ತು. ಹಾಗಾಗಿ ರಾಜ್ಯ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಋಣ ನನ್ನಮೇಲಿದೆ’ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡವರೇ ಬರುವುದರಿಂದ ಅವರಿಗೆ ಕಿಂಚಿತ್ತಾದರೂ ನೆರವಾಗುವುದು ನಮ್ಮ ಉದ್ದೇಶ. ಎರಡು ಹೊತ್ತು ಊಟಕ್ಕೆ ಸಾಕಾಗುವಷ್ಟು ಸಂಪತ್ತಿದ್ದಾಗ ಉಳಿದದ್ದು ಜನರ ಉಪಯೋಗಕ್ಕೆ ಬಳಕೆಯಾದರೆ ಉತ್ತಮ. ಕನ್ನಡತಿಯಾಗಿ ಹಾಗೂ ಸರ್ಕಾರಿ ವೈದ್ಯರ ಪುತ್ರಿಯಾಗಿ ಇದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next