ನೆಲಮಂಗಲ: ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದರೆ ಮುಂದಿನ ಭವಿಷ್ಯಉತ್ತಮವಾಗಿರುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಪವಾಡ ಶ್ರೀಬಸವಣ್ಣದೇವರ ಮಠದ ಸಭಾಂಗಣದಲ್ಲಿ ಶ್ರೀಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೀವನ ರೂಪಿಸಿಕೊಳ್ಳಲು ಸಾಧ್ಯ: ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆಯನ್ನು ಮಾಡಿದ್ದಾಳೆ, ಅದಕ್ಕಿಂತ ಹೆಚ್ಚಿನದಾಗಿ ಸಮಾಜ ಹಾಗೂ ಕುಟುಂಬಕ್ಕೆ ಸಾಮರಸ್ಯವಾಗಿ ಸೇವೆ ಮಾಡಿದಾಗ ಮಾತ್ರ ಶ್ರೇಷ್ಠತೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಭಾರತೀಯ ಸಂಸ್ಕೃತಿ, ಸಂಸ್ಕಾರದಿಂದ ಮಹಿಳೆ ದೂರವಾದರೆ ತನ್ನ ಭವಿಷ್ಯದಲ್ಲಿ ಮನಸ್ಸು ಮೆಚ್ಚುವಂತೆ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು: ರಾಜ್ಯದ ಜನರು ಬೆಂಬಲ ನೀಡಿದ ಪಕ್ಷದ ವಿರುದ್ಧ ಅಧಿಕಾರ ಪಡೆದ ಸಮ್ಮಿಶ್ರ ಸರ್ಕಾರ ಪತನವಾಗಿ, ಪ್ರಜಾಪ್ರಭುತ್ವದ ಗೆಲುವಿನಂತೆ ಬಿಜೆಪಿ ಅಧಿಕಾರದಲ್ಲಿದೆ. ಪ್ರಜಾಪ್ರಭುತ್ವಕ್ಕೆ ಮಾತ್ರ ಗೆಲುವು ಎಂಬ ಮಾತು ಸತ್ಯವಾಗಿದೆ. ಜನರು ಅತಿಹೆಚ್ಚು ಸ್ಥಾನಗಳನ್ನು ನೀಡಿ ವಿಧಾನ ಸಭೆಗೆ ಕಳುಹಿಸಿದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕುತಂತ್ರ ಮಾಡಿದರು. ದೇವರ ಹಾಗೂ ಜನರ ಆಶೀರ್ವಾದದಿಂದ ಮತ್ತೆ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ ಎಂದರು.
ಸಂಸ್ಕಾರ-ಸಂಸ್ಕೃತಿ ಮೈಗೂಡಿಸಿಕೊಳ್ಳಿ: ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಮಾತೃ ಶಕ್ತಿ ಪ್ರಮುಖ್ ಬಿ.ಎಲ್.ರಮಾರತ್ನ ಮಾತನಾಡಿ, ಭಾರತದಲ್ಲಿ ಮಾತ್ರ ಹೆಣ್ಣನ್ನು ಪೂಜೆ ಮಾಡುತ್ತಾರೆ. ಮಾತೃಸ್ವರೂಪಿಯಾಗಿ ಕಾಣುತ್ತಾರೆ. ದೇಶದ ಮೇಲೆ ಪರಕೀಯರ ಆಕ್ರಮಣದಿಂದ ಮಾತೃಶಕ್ತಿ ಬಲ ಕ್ಷೀಣಿಸಿತು.
ದ್ರೌಪದಿಯ ಛಲ, ಸಾವಿತ್ರಿ ಶಕ್ತಿ, ಸೀತೆ ನಂಬಿಕೆ, ವಿಶ್ವಾಸ ದೂರವಾಗಿವೆ. ಮದುವೆಯಾದ ದಂಪತಿಗಳು ಮೂರು ತಿಂಗಳಿಗೆ ಆತ್ಮಹತ್ಯೆ ಅಥವಾ ವಿಚ್ಚೇಧನಕ್ಕೆ ಮುಂದಾಗುತ್ತಾರೆ. ಇದನ್ನು ಕೊನೆಗೊಳಿಸಬೇಕು ಎಂಬ ದೃಢ ನಿರ್ಧಾರದಿಂದ ಸೇವೆ, ಸುರಕ್ಷೆ, ಸಂಘಟನೆ, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಮೂಲಕ ವಿಶ್ವಹಿಂದೂ ಪರಿಷತ್‌ನ ದುರ್ಗಾವಾಹಿನಿ ಕೆಲಸ ಮಾಡುತ್ತಿದೆ ಎಂದರು.
ಅಭಿನಂದನೆ: ಶ್ರೀಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶ್ರೀಸಿದ್ದಲಿಂಗಸ್ವಾಮೀಜಿ ಹಾಗೂ ಡಾ.ತೇಜಸ್ವಿನಿಅನಂತಕುಮಾರ್ ಪದವಿ ಪ್ರದಾನ ಮಾಡಿ ಶುಭಾ ಹಾರೈಸಿದರು.
ಈ ಸಂದರ್ಭದಲ್ಲಿ ಬಸವಣ್ಣದೇವರ ಮಠದ ಶ್ರೀಸಿದ್ದಲಿಂಗಸ್ವಾಮೀಜಿ, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ರಾಜೇಂದ್ರಪ್ರಸಾದ್, ಸಾಮಾಜಿಕ ಕಾರ್ಯಕರ್ತ ಬಿ.ಜಿ.ಭಟ್, ಪ್ರಾಂಶುಪಾಲೆ ಡಿ.ಜಿ.ರೇಖಾ, ವಿಶ್ವಹಿಂದೂ ಪರಿಷತ್‌ನ ಕಾಥ್ಯಾಯಿನಿ ಹಾಗೂ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.