ಮಹದೇವಪುರ: ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದು ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಅಭಿಪ್ರಾಯಪಟ್ಟರು.
ಕ್ಷೇತ್ರದ ಹೂಡಿಯಲ್ಲಿ ಬೆಂಗಳೂರು ಪೂರ್ವ ತಾಲೂಕು ತಿಗಳ( ವಹಿಕುಲ ) ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ 2016-2017 ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ರಾಜ್ಯ ಸರ್ಕಾರ 2015-2016 ಸಾಲಿನಲ್ಲಿ 15 ಕೋಟಿ ರೂ. ವಿಶೇಷ ಅನುದಾನವನ್ನು ಮೀಸಲಿಟ್ಟಿದ್ದು ಈ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ನಿವೃತ್ತ ಎಸಿಪಿ ಹಾಗೂ ರಾಜ್ಯ ತಿಗಳ(ವಹಿ°ಕುಲ) ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಸುಬ್ಬಣ್ಣ ಮಾತನಾಡಿ, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದ್ದು ಇದರಿಂದ ಜಮೀನನ್ನು ಮಾರಾಟ ಮಾಡದೆ ಆಸ್ತಿಪಾಸ್ತಿಯನ್ನು ಉಳಿಸಿಕೊಳ್ಳಬೇಕು. ಸಮುದಾಯದ ಮೂಲ ಕಸುಬು ಕೃಷಿಯನ್ನು ಮುಂದುವರಿಸಿಕೊಂಡು ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕು ಎಂದರು.
ಇದೇ ವೇಳೆ ವಿಧಾನಪರಿಷತ್‌ನ ನೂತನ ನಾಮ ನಿರ್ದೇಶರಾಗಿರುವ ಪಿ.ಆರ್. ರಮೇಶ್, ಎಂ.ಸಿ.ಎ ಲಿಮಿಟೆಡ್ ನಿಗಮ ಮಂಡಳಿಯ ನಿರ್ದೇಶಕ ಎನ್.ಎ.ನಾರಾಯಣಸ್ವಾಮಿ ಹಾಗೂ ಬೆಂಗಳೂರು ವಿವಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ| ವೀಣಾ ಅವರನ್ನು ಸನ್ಮಾನಿಸಲಾಯಿತು.
ತಿಗಳ ಕ್ಷೇಮಾಭಿವೃದ್ಧಿ ಸಂಘದ ಪೂರ್ವ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಪಾಲಿಕೆ ಸದಸ್ಯೆ ಶ್ವೇತಾ ವಿಜಯಕುಮಾರ್, ಎಂ.ಸಿ.ಎ ಲಿಮಿಟೆಡ್ ನಿಗಮ ಮಂಡಳಿ ನಿರ್ದೇಶಕ ಎನ್.ಎ.ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ವರ್ತೂರು ಶ್ರೀಧರ್, ರಾಮಚಂದ್ರಪ್ಪ, ಯಲ್ಲಪ್ಪ ಲೋಕೇಶ್, ಮುನಿಸ್ವಾಮಿ ಮತ್ತಿತರರು ಹಾಜರಿದ್ದರು.