ಚಿತ್ತಾಪುರ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರಯುತ ಶಿಕ್ಷಣ ಅವಶ್ಯವಾಗಿ ಸಿಗಬೇಕು ಎಂದು ಸಮಾಜ ಸೇವಕ ಮಣಿಕಂಠ ರಾಠೊಡ ಹೇಳಿದರು.
ಪಟ್ಟಣದ ಆಚಾರ್ಯ ಚಾಣಕ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದ ಶಿಕ್ಷಣವು ಮಕ್ಕಳ ಭವಿಷ್ಯದ ಬುನಾದಿಯಾಗಿದೆ. ಈ ಅವಧಿಯಲ್ಲಿ ಪಡೆಯುವ ಶಿಕ್ಷಣ ಮುಖ್ಯವಾಗಿರುತ್ತದೆ ಎಂದರು.
ಪ್ರಾಥಮಿಕ ಶಿಕ್ಷಣವು ಪ್ರೌಢ, ಕಾಲೇಜು ಮತ್ತು ಉನ್ನತ ಶಿಕ್ಷಣಕ್ಕೆ ದಾರಿದೀಪವಾಗುತ್ತದೆ. ಅದಕ್ಕಾಗಿ ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡಿ ತಾವು ಹಾಗೂ ತಾವು ಕಲಿತ ಶಾಲೆ, ತಾಲೂಕಿಗೆ, ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸಿದಾಗ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಪುರಸಭೆ ಸದಸ್ಯ ಶಾಮ ಮೇಧಾ ಮಾತನಾಡಿ, ಕಳೆದ 25 ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಾ ಅನೇಕ ಪ್ರತಿಭೆಗಳು ತಮ್ಮ ಸಾಧನೆಯನ್ನು ಹೊರಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಚಾರ್ಯ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಅನುದಾನಿತ ಶಿಕ್ಷಣ ಸಂಸ್ಥೆ ಸಂಘದ ಅಧ್ಯಕ್ಷ ಶಿವಶರಣಪ್ಪ, ಶಿಕ್ಷಕರಾದ ದೇವಪ್ಪ ನಂದೂರಕರ್, ವಿಷ್ಣುವರ್ಧನ ರೆಡ್ಡಿ, ಬಸವರಾಜ ಪಾಟೀಲ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಬಾಲಾಜಿ ಬುರಬುರೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಆಡಳಿತ ಮಂಡಳಿಯ ಅಮೂಲ್ ತ್ರೀಮಲ್, ಮುಖ್ಯಶಿಕ್ಷಕ ವೀರಭದ್ರಪ್ಪ ಪಾಟೀಲ ಇದ್ದರು. ರಂಜಿತಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಭೀಮಪ್ಪ ದಂಡು ನಿರೂಪಿಸಿ, ವಂದಿಸಿದರು.