ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳ ದಾಖಲಾತಿ ನಿರೀಕ್ಷಿತ ಪ್ರಮಾಣದಲ್ಲಿದ್ದರೂ ಪ್ರೌಢಶಾಲೆ ಮೂಲಸೌಲಭ್ಯ ಕೊರತೆ ಎದುರಿಸುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ವರ್ಷವಿಡಿ ಪರದಾಡುವಂತಾಗಿದೆ.
ಅಗತ್ಯ ಕೊಠಡಿ ಇಲ್ಲ: ಸರ್ಕಾರಿ ಪ್ರೌಢಶಾಲೆ ಸದ್ಯ 8 ಕೊಠಡಿಗಳನ್ನು ಹೊಂದಿದೆ. ಒಂದು ಕೊಠಡಿ ಕಂಪ್ಯೂಟರ್ ಕ್ಲಾಸ್, ಒಂದು ಕೊಠಡಿ ಆಫೀಸ್, ಒಂದು ಕೊಠಡಿಯ ಮೇಲ್ಛಾವಣಿಯು ಶಿಥಿಲಾವಸ್ಥೆಗೆ ಬಂದಿರುವ ಕಾರಣ ಬೀಗ ಹಾಕಲಾಗಿದೆ. ಉಳಿದ ಐದು ಕೊಠಡಿಗಳಲ್ಲಿ 8, 9 ಹಾಗೂ 10ನೇ ತರಗತಿ ನಡೆಸಲಾಗುತ್ತಿದೆ.
ಮಕ್ಕಳ ದಾಖಲಾತಿಯಲ್ಲಿ ದಾಖಲೆ: ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ 220, 9ನೇ ತರಗತಿಯಲ್ಲಿ 204, 8ನೇ ತರಗತಿಗೆ (226-ಕಳೆದ ವರ್ಷದ ದಾಖಲಾತಿ) ಇನ್ನೂರಕ್ಕೂ ಅಧಿ ಕ ದಾಖಲಾತಿ ಸೇರಿದಂತೆ ಸುಮಾರು 650ಕ್ಕೂ ಅಧಿಕ ಮಕ್ಕಳಿಗೆ ಕೇವಲ 5 ಕೊಠಡಿಗಳಲ್ಲಿಯೇ ಕಲಿಸಬೇಕಾಗಿದೆ. ಒಂದು ಕೊಠಡಿಗೆ ಕನಿಷ್ಠ 70 ವಿದ್ಯಾರ್ಥಿಗಳನ್ನು ನಿಗದಿಪಡಿಸಿದರೂ ಕನಿಷ್ಠ 9 ಕೊಠಡಿಗಳ ಅಗತ್ಯವಿದೆ. ಆದರೆ, ಇರುವುದು 5 ಮಾತ್ರ. ಒಂದು ನೂತನ ಕೊಠಡಿ ನಿರ್ಮಿಸಲಾಗಿದೆ.
ಜಿಪಂ ಅಧಿಕಾರಿಗಳು ಕೊಠಡಿ ಉದ್ಘಾಟಿಸಿ ಇನ್ನು ಶಾಲೆಗೆ ಹಸ್ತಾಂತರಿಸಬೇಕಾಗಿದೆ. ಈಚೆಗೆ ಎರಡು ನೂತನ ಕೊಠಡಿಗಳ ನಿರ್ಮಾಣ ಆರಂಭವಾಗಿದೆ. ಅದರ ಕಾಮಗಾರಿ ಪೂರ್ಣಗೊಂಡು ಮಕ್ಕಳ ಓದಿಗೆ ಲಭ್ಯವಾಗುವುದರೊಳಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧ ಅವಧಿ ಪೂರ್ಣಗೊಂಡಿರುತ್ತದೆ. ಅಲ್ಲಿಗೆ ಈ ವರ್ಷವು ಮಕ್ಕಳಿಗೆ ಶಾಲೆಯ ಕಾರಿಡಾರ್ ವೇ ಗತಿ ಎಂಬಂತಾಗಿದೆ.
ಶಿಕ್ಷಕರ ಕೊರತೆ: ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 17 ಜನ ಶಿಕ್ಷಕರು ಬೇಕು. ಆದರೆ ಸದ್ಯ 7 ಜನ ಕಾಯಂ ಶಿಕ್ಷಕರಿದ್ದಾರೆ. ಪ್ರಸಕ್ತ ವರ್ಷ 5 ಜನ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಆದೇಶ ನೀಡಿದ್ದಾರೆ. ಅತಿಥಿ ಶಿಕ್ಷಕರು ಬಂದು ಸಹ ಶಿಕ್ಷಕರ ಕೊರತೆಯ ಸಮಸ್ಯೆಯು ಹಾಗೆ ಮುಂದುವರಿಯಲಿದೆ. ಅಲ್ಲದೇ ಮುಖ್ಯಶಿಕ್ಷಕ ಹುದ್ದೆ ಇಲ್ಲ. ಸಹಾಯಕ ಸಿಬ್ಬಂದಿ (ಕ್ಲರ್ಕ್) ಇಲ್ಲ. ಪ್ರಸಕ್ತ ವರ್ಷದಿಂದ ಓರ್ವ ಕ್ಲರ್ಕ್ ಸಿಬ್ಬಂದಿ ನೇಮಕ ಮಾಡುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದುವರೆಗೂ ಸಿಬ್ಬಂದಿಯ ಆಗಮನವಾಗಿಲ್ಲ.
ಕಾಂಪೌಂಡ್ ಇಲ್ಲ: ಮುಖ್ಯವಾಗಿ ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲದ ಕಾರಣ, ಪ್ರೌಢಶಾಲೆ ಆವರಣವು ಕುರಿಗಾರರಿಗೆ ಕುರಿ ಮೇಯಿಸಲು, ಖಾಸಗಿ ವಾಹನಗಳ ನಿಲುಗಡೆಗೆ, ರಾತ್ರಿ ವೇಳೆ ಸಂಚಾರಿ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಮಳೆಯಾದರೆ ಶಾಲೆ ಆವರಣ ಕೆಸರುಗದ್ದೆಯಂತಾಗುತ್ತದೆ. ಅದಕ್ಕಾಗಿ ಶಾಲೆಗೆ ಮೊದಲು ಸುಸಜ್ಜಿತ ಕಾಂಪೌಂಡ್ ನಿರ್ಮಾಣ ಅಗತ್ಯವಾಗಿದೆ.
ಶಿಥಿಲಾವಸ್ಥೆಯ ಅಡುಗೆ ಕೊಠಡಿ: ಇನ್ನು ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೊಠಡಿ ಶಿಥಿಲಾವಸ್ಥೆ ಕಟ್ಟಡವಾಗಿದ್ದು, ಕಿರಿದಾದ ಕೊಠಡಿಯಾಗಿದೆ. ದವಸ ಧಾನ್ಯ ಸಂಗ್ರಹಿಸಲು ಅಡುಗೆ ಮಾಡಲು ತೊಂದರೆಯಾಗುತ್ತಿದ್ದರೂ ಸಹ, ಅನಿವಾರ್ಯವಾಗಿ ಅಡುಗೆ ಸಿಬ್ಬಂದಿ ಇದ್ದ ಜಾಗದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಅಡುಗೆ ಮಾಡುತ್ತಿದ್ದಾರೆ. ಅಡುಗೆ ಕೋಣೆಯ ಪಕ್ಕದಲ್ಲಿಯೇ ಚರಂಡಿ ಇದ್ದು, ಅದಕ್ಕಾಗಿ ಹಂದಿಗಳ ಕಾಟ ತಪ್ಪಿಲ್ಲ. ಅದಕ್ಕಾಗಿ ಸುಸಜ್ಜಿತ ಅಡುಗೆ ಕೊಠಡಿ ಅಗತ್ಯವಿದೆ.
ಪುರುಷ ಶೌಚಾಲಯವಿಲ್ಲ: ಬಹುಮುಖ್ಯವಾಗಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶೌಚಾಲಯ ಸಮಸ್ಯೆ ಹೇಳತೀರದಾಗಿದೆ. ಶಾಲೆಗೆ ಪುರುಷ ಶೌಚಾಲಯವಿಲ್ಲದ ಕಾರಣ ವಿದ್ಯಾರ್ಥಿಗಳು ನಿಸರ್ಗ ಬಾಧೆಗೆ ಪರದಾಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವತ್ಛ ಭಾರತ ಘೋಷಣೆ ಇಲ್ಲಿ ಅನ್ವಯಿಸುವುದಿಲ್ಲ ಎಂಬಂತಾಗಿದೆ. ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿ ಧಿಗಳು ತಕ್ಷಣ ಶಾಲೆಗೆ ಕಾಂಪೌಂಡ್ ಮತ್ತು ಶೌಚಾಲಯ ನಿರ್ಮಾಣಕ್ಕೆ ಒತ್ತು ಕೊಡಬೇಕಾಗಿದೆ.
ಮಹಾಲಿಂಗಪುರ ಸರ್ಕಾರಿ ಪ್ರೌಢಶಾಲೆಗೆ ಈಚೆಗೆ ಎರಡು ನೂತನ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಟ್ಟಡ ಪೂರ್ಣಗೊಂಡಿರುವ ಒಂದು ಕೊಠಡಿಯನ್ನು ಶೀಘ್ರ ಉದ್ಘಾಟಿಸಲಾಗುವುದು. ಮಹಾಲಿಂಗಪುರ ಪುರಸಭೆಗೆ ನೀಡಿದ ವಿಶೇಷ ಅನುದಾನದಲ್ಲಿ 11 ಲಕ್ಷ ರೂ.ಗಳನ್ನು ಶೌಚಾಲಯ ನಿರ್ಮಾಣಕ್ಕಾಗಿ ಕ್ರಿಯಾಯೋಜನೆ ರೂಪಿಸಲಾಗಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಆದ್ಯತೆ ಮೇರೆಗೆ ಸರ್ಕಾರಿ ಪ್ರೌಢಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು.
-ಸಿದ್ದು ಸವದಿ, ಶಾಸಕರು ತೇರದಾಳ
ಸರ್ಕಾರಿ ಪ್ರೌಢಶಾಲೆಯಲ್ಲಿನ ಸಮಸ್ಯೆ ಮತ್ತು ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಶಾಸಕ ಸಿದ್ದು ಸವದಿ, ಬಿಇಒ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಹೆಚ್ಚಾಗಿ ಬಡಮಕ್ಕಳೇ ಕಲಿಯುವ ಸರ್ಕಾರಿ ಶಾಲೆಗಳತ್ತ ಜನಪ್ರತಿನಿಧಿ ಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕಾಗಿದೆ. –
ಚಂದ್ರವ್ವ ಗೌಡರ, ಅಧ್ಯಕ್ಷರು ಎಸ್‌ಡಿಎಂಸಿ