Advertisement

ಪುಸ್ತಕ ಮೇಳದಲ್ಲಿ ಮಕ್ಕಳೇ “ಪ್ರಥಮ’

03:59 PM Oct 20, 2018 | |

ದಶಕಗಳ ಹಿಂದೆ ಎರಡಾಣೆ ನಾಕಾಣೆ ದುಡ್ಡನ್ನು ತೆತ್ತು ಕೊಂಡ ಪುಸ್ತಕ ಓದಿದ್ದ ಮನಸ್ಸುಗಳಿಗೆ ಈಗಲೂ ಬಣ್ಣದ ತುತ್ತೂರಿ, ಅಜ್ಜನ ಕೋಲು, ನಮ್ಮ ಮನೆಯ ಸಣ್ಣ ಪಾಪ ಮುಂತಾದ ಕವಿತೆಗಳು ನೆನಪಿವೆ. ಕವಿತೆಗಳ ಜೊತೆ ನೀಡಲಾಗಿದ್ದ ಚಿತ್ರಗಳೂ ಮನದಲ್ಲಿ ಹಚ್ಚ ಹಸಿರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಗಂಭೀರ ಸಾಹಿತ್ಯದ ಜೊತೆ ಜೊತೆಗೇ ಗುಣಮಟ್ಟದ, ರಂಗು ರಂಗಿನ ಚಿತ್ರಗಳನ್ನು ಹೊತ್ತ ಮಕ್ಕಳ ಪುಸ್ತಕಗಳು ಮೇಳದ ರಂಗನ್ನು ಹೆಚ್ಚಿಸಿವೆ. ಶಿಶು ಸಾಹಿತ್ಯಕ್ಕೆ ಹಿಂದಿದ್ದ ಮಹತ್ವ, ಆಕರ್ಷಣೆ, ಬೆರಗನ್ನು ಉಳಿಸಿಕೊಳ್ಳುವ ಕೆಲಸ ನಡೆದೇ ಇದೆ. ಈ ಕೆಲಸದಲ್ಲಿ ನಿರತವಾಗಿರುವ ಸಂಸ್ಥೆಗಳಲ್ಲೊಂದು ಲಾಭರಹಿತ ಎನ್‌ಜಿಒ ಪ್ರಥಮ್‌ ಬುಕ್ಸ್‌. 

Advertisement

ಕನ್ನಡದ ಹಳೆಯ ತಲೆಮಾರಿನ ಕವಿಗಳು, ಸಾಹಿತಿಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಪಂಜೆ ಮಂಗೇಶರಾಯರು, ಕುವೆಂಪು, ಡಾ. ಜಿ.ಪಿ. ರಾಜರತ್ನಂ, ಡಾ. ಸಿದ್ದಯ್ಯ ಪುರಾಣಿಕ ಮತ್ತು ಬಿ.ಕೆ. ತಿರುಮಲಮ್ಮ ಅವರ ಕವಿತೆಗಳ ಗುಚ್ಚವನ್ನು ಪ್ರಥಮ್‌ ಬುಕ್ಸ್‌ ಹೊರತಂದಿತ್ತು. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್‌ ಎರಡೂ ಇರುವ ದ್ವಿಭಾಷಾ ಪುಸ್ತಕಗಳು ಮಳಿಗೆಯಲ್ಲಿವೆ.

ಇತರೆ ಪುಸ್ತಕ ಮಳಿಗೆಗಳಲ್ಲೂ ಮಕ್ಕಳು, ಪಾಲಕರು ಮಕ್ಕಳ ಪುಸ್ತಕಗಳನ್ನು ಬಿಡಿಸಿ ಓದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೇಳದಲ್ಲಿ ಎಲ್ಲಾ ಪುಸ್ತಕಗಳ ಮೇಲೆ ಕನಿಷ್ಠ ಶೇ.15 ರಿಯಾಯಿತಿ ಇದೆ.  ಡಿಜಿಟಲ್‌ ಯುಗದಲ್ಲಿ ಕಾಗದ ಬೆಲೆ ಕಳೆದುಕೊಳ್ಳುತ್ತಿದೆ ಎಂಬ ಆತಂಕ ಮನೆ ಮಾಡಿರುವ ಹೊತ್ತಿನಲ್ಲಿ ಮಕ್ಕಳನ್ನು ಸ್ಮಾರ್ಟ್‌ಫೋನ್‌ಮತ್ತು ಕಂಪ್ಯೂಟರ್‌ ಪರದೆಯಿಂದ ಆಚೆಗೆ ಕರೆ ತರುವ ಕೆಲಸ ಪುಸ್ತಕ ಮೇಳಗಳಿಂದಾಗುತ್ತಿರುವುದು ಸುಳ್ಳಲ್ಲ. ಅಕ್ಟೋಬರ್‌ 15ರಿಂದ ನಡೆಯುತ್ತಿರುವ “ಬೆಂಗಳೂರು ಪುಸ್ತಕ ಮೇಳ’ ನಾಳೆ ಕೊನೆಗೊಳ್ಳಲಿದೆ.  

ಎಲ್ಲಿ?: ತ್ರಿಪುರವಾಸಿನಿ, ಅರಮನೆ ಮೈದಾನ
ಯಾವಾಗ?: ಅ. 21ರ ವರೆಗೆ

Advertisement

Udayavani is now on Telegram. Click here to join our channel and stay updated with the latest news.

Next