Advertisement
ಭಾವನೆಗಳು ಅತಿ ಎನಿಸಿದರೆ, ಅದು ಆ ಮಗುವಿಗೆ ಸಮಸ್ಯೆಯ ಕುರುಹೂ ಆಗಿರಬಹುದು. ಮಕ್ಕಳು ಮಂಕಾಗಿರುವುದು, ಲವಲವಿಕೆ ಇಲ್ಲದಿರುವುದು, ಅತಿ ಕೋಪ, ತಾಪ, ಭಯ ಭಾವನೆಗಳ ವೈಪರೀತ್ಯ, ಸೂಚ್ಯವಲ್ಲದ ಭಾವನೆಗಳನ್ನು ಪ್ರದರ್ಶಿಸುವುದು ಮಕ್ಕಳಲ್ಲಿ ಆಗುತ್ತಿರುವ ದ್ವಂದ್ವ ಮತ್ತು ಸಮಸ್ಯೆಗಳ ಹೆಗ್ಗುರುತು. ಉತ್ತಮ ಭಾವನಾತ್ಮಕ
ಬೆಳವಣಿಗೆಗೆ ಏನು
ಮಾಡಬಹುದು?
ಮಾತು ಮನುಷ್ಯನ ಮನಸ್ಸಿನ ಕನ್ನಡಿ ಇದ್ದಂತೆ. ಉತ್ತಮವಾಗಿ ಶಬ್ದಗಳ ಬೆಳವಣಿಗೆಯನ್ನು ಪ್ರೇರೇಪಿಸಿದರೆ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಮಕ್ಕಳು ಕಲಿಯುತ್ತಾರೆ. ಮಕ್ಕಳಲ್ಲಿನ ಸೃಜನಶೀಲ ಚಟುವಟಿಕೆಗಳು ಭಾವನೆಗಳ ಬೆಳವಣಿಗೆಗೆ ಸಹಕರಿಸುತ್ತವೆ. ಮಕ್ಕಳಿಗೆ ಭಾವನೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಮಕ್ಕಳು ಸಾಮಾನ್ಯವಾಗಿ ಹಿರಿಯರನ್ನು ಅನುಕರಿಸುತ್ತಾರೆ. ಆದುದರಿಂದ, ಮನೆಯಲ್ಲಿನ ಹಿರಿಯರು, ಪೋಷಕರು, ನೆರೆಹೊರೆಯವರು ಮತ್ತು ಶಾಲೆಯಲ್ಲಿನ ಉಪಾಧ್ಯಾಯರುಗಳು ತುಂಬಾ ಜವಾಬ್ದಾರಿಯ ಸ್ಥಾನವನ್ನು ಪಡೆದಿರುತ್ತಾರೆ. ನಾವು ನಮ್ಮ ಭಾವನೆಗಳನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ, ಮಕ್ಕಳಿಗೆ ಹೇಳಿಕೊಡುವುದು ಕಷ್ಟ ಸಾಧ್ಯ. ವಿವಿಧ ಭಾವನೆಗಳು ಯಾವುವು, ಯಾಕೆ, ಹೇಗೆ ಮತ್ತು ಅವುಗಳ ಸಹಜತೆಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆಯನ್ನು ಕೊಡಬೇಕು. ಮನಸ್ಸು ಸ್ವಸ್ಥ ಭಾವನೆಗಳ ಆಗರವಾದಾಗ, ಸ್ವಸ್ಥ ದೇಶ ಆಗುವುದು ಸಾಧ್ಯ. ಬನ್ನಿ ನಾವು-ನೀವೆಲ್ಲರೂ ಭಾವನೆಗಳನ್ನು ನಿಭಾಯಿಸೋಣ ಮತ್ತು ಮಕ್ಕಳಿಗೂ ಭಾವನೆಗಳನ್ನು ನಿಭಾಯಿಸಲು ಹೇಳಿ ಕೊಡೋಣ.
ಮಕ್ಕಳ ದೈಹಿಕ ಬೆಳವಣಿಗೆಗೆ ಹೇಗೆ ನಾವು ಗಮನವಹಿಸುತ್ತೇವೋ, ಅದೇ ರೀತಿ ಭಾವನೆಗಳ ಬೆಳವಣಿಗೆಗೆ ಗಮನಕೊಡುವುದು ಮುಖ್ಯ. ಇದರ ಪ್ರಯೋಜನಗಳು ಹಲವು.
1. ಭಾವನೆಗಳನ್ನು ನಿಭಾಯಿಸುವ ಮಕ್ಕಳು ಸಾಮಾಜಿಕ ಹೊಂದಾಣಿಕೆಯನ್ನು ಚೆನ್ನಾಗಿ ಪಡೆಯುತ್ತಾರೆ.
2. ಅತಿಯಾದ ಭಾವನೆಗಳು ತೊಡಕಾಗುವುದನ್ನು ಗ್ರಹಿಸುತ್ತಾರೆ.
3. ಗುಂಪಿನಲ್ಲಿ ಕಲಿಕೆ ಸುಲಭವಾಗುತ್ತದೆ ಮತ್ತು ನಿರ್ಭಯತೆಯಿಂದ ಸಹಜವಾಗಿ ಅಭಿವ್ಯಕ್ತಿಮಾಡಲು ಕಲಿಯುತ್ತಾರೆ.
4. ಭಾವನೆಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕರಿಸುತ್ತವೆ. ಮೇಲಾಗಿ ಸರ್ವತೋಮುಖ ಬೆಳವಣಿಗೆಗೆ ಇಂಬು ಕೊಡುತ್ತವೆ. – ಡಾ| ಸೀಮಂತಿನಿ ಟಿ.ಎಸ್.,
ಅಸೋಸಿಯೆಟ್ ಪ್ರೊಫೆಸರ್,
ಕ್ಲಿನಿಕಲ್ ಸೈಕಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಅತ್ತಾವರ, ಮಂಗಳೂರು.