Advertisement

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

08:03 PM Aug 04, 2021 | Team Udayavani |

ಕುಂದಾಪುರ: ಕೊರೊನಾದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದೆ, ಪಾಲಕರಿಗೆ ಆರ್ಥಿಕ ಹೊಡೆತವೂ ಇರುವ ಕಾರಣದಿಂದ ಸರಕಾರಿ ಶಾಲೆಗಳತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಲಿಯುತ್ತಿದ್ದ ಶಾಲೆಗೆ ಮಾಹಿತಿಯೇ ಕೊಡದೆ, ಟಿಸಿ (ವರ್ಗಾವಣೆ ಪ್ರಮಾಣಪತ್ರ) ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿದ್ದಾರೆ.

Advertisement

ವಿಳಂಬ:

ಎಲ್ಲವೂ ಸರಿಯಾಗಿದ್ದರೆ ಆ.2 ರಿಂದಲೇ ಭೌತಿಕ ತರಗತಿಗಳು ಆರಂಭ ವಾಗಬೇಕಿತ್ತು. ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆ, ಕಾರ್ಯ ಯೋಜನೆ  ನಡೆಸಿತ್ತು. ಕೊರೊನಾ ಮೂರನೇ ಅಲೆಯ ಭೀತಿ ಯಿಂದಾಗಿ ವಿಳಂಬವಾಗಿದೆ. ಯಾವಾಗ ಮುಖಾಮುಖೀ ತರಗತಿ ಆರಂಭವಾಗಲಿದೆ ಎನ್ನುವುದೇ  ನಿಖರವಾಗಿಲ್ಲ.

ತರಗತಿ:

ಟಿವಿಗಳಲ್ಲಿ ಸಂವೇದ ತರಗತಿ ಆರಂಭವಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಪಠ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಬೋಧನ ಸಾಮಗ್ರಿ ಪೂರೈಕೆ, ಪಠ್ಯಗಳ ಪೂರೈಕೆ, ಪಾಠ ಪ್ರವಚನ ಪೂರೈಕೆ ಜಾಲತಾಣದ ಮೂಲಕವೇ ಮಾಡಲಾಗುತ್ತಿದೆ. ಜಾಲತಾಣಗಳಿಲ್ಲದ ಮನೆಯ ವರಿಗೆ ಟಿವಿ ಮೂಲಕ ಬೋಧಿಸ ಲಾಗುತ್ತಿದೆ. ಟಿವಿಯೂ ಇಲ್ಲ, ಜಾಲತಾಣವೂ ಇಲ್ಲದಂತಹ ಮಕ್ಕಳಿಗೆ ಶಿಕ್ಷಕರೇ ತೆರಳಿ ತಮ್ಮ ಮೊಬೈಲ್‌ ಮೂಲಕ ಪಾಠಗಳನ್ನು ತೋರಿಸುವ ಬೋಧನ ಕ್ರಮ ವೂ ಕೆಲವೆಡೆ ನಡೆಯುತ್ತಿದೆ.

Advertisement

ಟಿಸಿ ಇಲ್ಲ :

ಕಲಿಯುತ್ತಿರುವ ಶಾಲೆಗೆ ಮಾಹಿತಿ ನೀಡದೆ, ವರ್ಗಾವಣೆ ಪ್ರಮಾಣಪತ್ರ ಪಡೆಯದೆ ಸರಕಾರಿ ಶಾಲೆಗೆ ಸೇರಿಸಲಾಗುತ್ತಿದೆ. ಇದರಿಂದ ಕಂಗಾಲಾದ ಖಾಸಗಿ ಶಾಲೆಗಳು ಟಿಸಿ ನೀಡುತ್ತಿಲ್ಲ. ಚೈಲ್ಡ್‌ ಹೆಲ್ಪ್ ಲೈನ್‌ಗೆ ಇಂತಹ ಅನೇಕ ದೂರುಗಳು ಬರುತ್ತಿದ್ದು ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ ಮೂರು ನೋಟಿಸ್‌ ನೀಡಿ, ಆಗಲೂ ಟಿಸಿ ನೀಡದೆ ಇದ್ದರೆ ಆನ್‌ಲೈನ್‌ ಮೂಲಕ ಇಲಾಖೆಯೇ ಟಿಸಿ ನೀಡಲು ಕ್ರಮ ವಹಿಸಲಾಗುತ್ತಿದೆ. ಇದು ಈಚಿನ ದಿನಗಳಲ್ಲಿ ಕ್ರಾಂತಿಕಾರಕ ಹಾಗೂ ಹೊಸ ಬೆಳವಣಿಗೆ. ಅಷ್ಟಲ್ಲದೆ ಶುಲ್ಕದ ಕುರಿತು ಶಾಲೆಗಳ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಯಿಂದ ಶಾಲೆಗಳಿಗೆ ತೆರಳಿ ಪರಿಶೀಲನೆಯೂ ನಡೆಯಲಿದೆ. ಹೀಗೆ ಖಾಸಗಿಯಿಂದ ಸರಕಾರಿ ಶಾಲೆಗೆ ಕಳೆದ ವರ್ಷ 5 ಶೇ., ಈ ವರ್ಷ ಇನ್ನೂ ಹೆಚ್ಚು ಮಕ್ಕಳು ಸೇರಿದ್ದಾರೆ.

ಖಾಸಗಿಯಿಂದ ಸರಕಾರಿ ಶಾಲೆಯತ್ತ :

ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಂದ ಸರಕಾರಿ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಆಯ್ದ ಸರಕಾರಿ ಶಾಲೆಗಳಲ್ಲೂ  ಇಂಗ್ಲಿಷ್‌ ಮೀಡಿಯಂ ಅನ್ನು ನಿಶುÏಲ್ಕವಾಗಿ ಬೋಧಿಸುತ್ತಿರುವ ಕಾರಣ ಹೆತ್ತ ವರು ಈ ಆಯ್ಕೆ ಮಾಡುತ್ತಿದ್ದಾರೆ. ಶಾಲಾ ಬಸ್‌, ಯೂನಿಫಾರಂ, ಖಾಸಗಿ ಶಾಲೆ ಎಂಬ ಯಾವುದೇ ಭೇದ ಭಾವ ಇಲ್ಲದೆ ಈಗ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತಿರುವ ಕಾರಣ ಹಮ್ಮುಬಿಮ್ಮಿಗೂ ಅವಕಾಶ ಇಲ್ಲ. ಕೆಲವು ಖಾಸಗಿ ಶಾಲೆಗಳು ಶುಲ್ಕ ಕ್ಕಾಗಿ ಪೀಡೆ ಕೊಡುತ್ತಿರುವುದು ಕೂಡ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಕಾರಣ ಎನ್ನಲಾಗಿದೆ.

ಶುಲ್ಕ ಕೊಡದ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಮುಂದಿನ ತರಗತಿಗೆ ಹಾಕದಿರುವುದು, ಶುಲ್ಕ ಕೊಡದವರ ಹೆಸರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಹಾಕುವುದು, ಆನ್‌ಲೈನ್‌ ತರಗತಿ ನಡೆಯುವಾಗ ಶುಲ್ಕ ಬಾಕಿ ಇರಿಸಿಕೊಂಡವರ ಹೆಸರು ಓದಿ ಹೇಳುವುದು, ಅಂತಹ ವಿದ್ಯಾರ್ಥಿಗೆ ಆನ್‌ಲೈನ್‌ ಬೋಧನೆ ಮಾಡದಿರುವುದು, ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಿಂದ ಪ್ರತ್ಯೇಕ ಇಡುವಂತಹ  ತಂತ್ರಗಾರಿಕೆ ಮಾಡುತ್ತಿವೆ ಎಂಬ ಆರೋಪಗಳಿವೆ. ಕೆಲವು ಶಾಲೆಗಳು ಬೋಧನ ಶುಲ್ಕದಲ್ಲಿ ಕಡಿತ, ರಿಯಾಯಿತಿ ಘೋಷಿಸಿದ್ದರೆ ಕೆಲವರು ಪೂರ್ಣ ಶುಲ್ಕ ಅಥವಾ ಏರಿಸಿದ ಮೊತ್ತ ಪಡೆಯುತ್ತಿದ್ದಾರೆ. ಇಂತಹ ಕೆಲವೇ ಕೆಲವು ಶಾಲೆಗಳಿಂದಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವ ಹಿಸುತ್ತಿರುವ ಇತರ ಖಾಸಗಿ ಶಾಲೆಗಳಿಗೂ ಕೆಟ್ಟ ಹೆಸರು ಬಂದಿದೆ.

ದಾಖಲಾತಿ :

ಕುಂದಾಪುರ ತಾ|ನಲ್ಲಿ ಸರಕಾರಿ ಶಾಲೆಗಳಿಗೆ ಎಲ್‌ಕೆಜಿಗೆ 68, ಯುಕೆಜಿಗೆ 92, 1ನೇ ತರ ಗ ತಿಗೆ 1,289, 10ನೇ ತರಗತಿವರೆಗೆ ಒಟ್ಟು 13,397, ಅನುದಾನಿತ ಶಾಲೆಗಳಿಗೆ 2,594, ಅನುದಾನ ರಹಿತ ಶಾಲೆಗಳಿಗೆ 10,372, ವಸತಿ ಶಾಲೆಗಳಿಗೆ 296 ಮಕ್ಕಳ ಸೇರ್ಪಡೆ ಯಾಗಿದೆ. ಕಳೆದ ವರ್ಷ ಒಟ್ಟು  28,524 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ದ್ದರು. ಈ ವರ್ಷ ಆಗಸ್ಟ್‌ ತಿಂಗಳ ಕೊನೆವರೆಗೆ ದಾಖಲಾತಿ ಪ್ರಕ್ರಿಯೆ ನಡೆಯ ಲಿದೆ. ಅನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.

ಸ್ಮಾರ್ಟ್‌ಫೋನ್‌ ಅಭಿಯಾನ :

ತಾಲೂಕಿನಲ್ಲಿ 109 ಮಕ್ಕಳಿಗೆ ಟಿವಿ ಹಾಗೂ ಸ್ಮಾರ್ಟ್‌ ಫೋನ್‌ ಸೌಲಭ್ಯ ಇಲ್ಲ. ಇಂತಹವರಿಗೆ ದಾನಿಗಳಿಂದ, ಶಿಕ್ಷಕರಿಂದ ಸ್ಮಾರ್ಟ್‌ಫೋನ್‌ ಸಂಗ್ರಹಿಸಿ ನೀಡುವ ಅಭಿಯಾನ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಮೂಲಕ ನಡೆಯುತ್ತಿದೆ.

ದಾಖಲಾತಿ ಪ್ರಕ್ರಿಯೆ ಆಗಸ್ಟ್‌ ಕೊನೆವರೆಗೆ ನಡೆಯಲಿದೆ. ಟಿಸಿ ಇಲ್ಲದೆ ಸೇರುವ ವಿದ್ಯಾರ್ಥಿಗಳ ದೂರನ್ನು ಪರಿಶೀಲಿಸಿ ನೋಟಿಸ್‌ ನೀಡಿ, ಆನ್‌ಲೈನ್‌ ಮೂಲಕ ಟಿಸಿ ಕೊಡಿಸಲಾಗುತ್ತಿದೆ. ಟಿವಿ, ವಾಟ್ಸ್‌ಆ್ಯಪ್‌ ಮೂಲಕ ಪಠ್ಯ ಚಟುವಟಿಕೆ ನಡೆಸಲಾಗುತ್ತಿದೆ. -ಎಸ್‌. ಕೆ. ಪದ್ಮನಾಭ , ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ

 

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next