ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿದ್ದ ಬಾಲ ಮಂದಿರದಲ್ಲಿ ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿ ಅಸ್ಥಸ್ಥರಾದ 103 ಮಕ್ಕಳಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ.
ಕಿದ್ವಾಯಿ ಆಸ್ಪತ್ರೆಯ ಬಳಿ ಇರುವ ಬಾಲಮಂದಿರದಲ್ಲಿ ಭಾನುವಾರ ರಾತ್ರಿ 8.30ಕ್ಕೆ ಊಟ ಮಾಡುವ ವೇಳೆ ತಟ್ಟೆಯಲ್ಲಿ ಹಲ್ಲಿಬಿದ್ದಿರುವುದನ್ನು ನೋಡಿದ ಬಾಲಕನೊಬ್ಬ ವಾಂತಿ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಇನ್ನೂ ಐದಾರು ಬಾಲಕರು ವಾಂತಿ ಮಾಡಿಕೊಂಡಿದ್ದಾರೆ. ಈ ಘಟನೆ ಬಾಲಮಂದಿರದ ಮೇಲ್ವಿಚಾರಕರ ಗಮನಕ್ಕೆ ಬಂದ ಕೂಡಲೇ ಬಾಲಮಂದಿರದ 103 ಮಕ್ಕಳನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಬಾಲಕರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ವಿಷಾಹಾರ ಸೇವಿಸಿದ್ದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ತೊಂದರೆ ಇಲ್ಲ. ಸದ್ಯ ಮಕ್ಕಳು ಸೇವಿಸಿದ್ದ ಆಹಾರ ಹಾಗೂ ವಾಂತಿಯನ್ನು ಸಂಗ್ರಹಿಸಿದ್ದು, ಆಹಾರ ಪರೀಕ್ಷಾ ಪ್ರಯೋಗಾಲಯ (ಫುಡ್ ಸ್ಯಾಂಪಲ್ಸ್ ಲ್ಯಾಬ್‌ಗ) ಕಳುಹಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ವೈದ್ಯಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
ಮೂರು ಮಕ್ಕಳಿಗೆ ದ್ರವ ರೂಪದ ಆಹಾರ ನೀಡಲಾಗಿತ್ತು. ಉಳಿದ ಎಲ್ಲ ಮಕ್ಕಳು ಆರೋಗ್ಯದಿಂದ ಇದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನವೀನ್ ತಿಳಿಸಿದ್ದಾರೆ.
ಆಹಾರದಲ್ಲಿ ಹಲ್ಲಿ ಬಿದ್ದಿತ್ತು ಎಂಬ ಮಾಹಿತಿ ಇದೆ. ಮಕ್ಕಳು ಸೇವಿಸಿದ್ದ ಆಹಾರ ಹಾಗೂ ವಾಂತಿಯನ್ನು ಸಂಗ್ರಹಿಸಿ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಡುಗೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.
-ವಿಜಯ್ ಶಂಕರ್, ಬೆಂಗಳೂರು ನಗರ ಜಿಲ್ಲಾಧಿಕಾರಿ