ನಮ್ಮ ಮನೆಗೆ ದೆವ್ವ ಬಾರದಿರಲಿ ಎಂಬ ಸದಾಶಯದಿಂದಲೇ ಮುಂಬಾಗಿಲಿನ ಮೇಲೆ ನಾಳೆ ಬಾ ಎಂದು ಬರೆಯುತ್ತಿದ್ದೆವು. ಒಂದು ವೇಳೆ ಮಧ್ಯರಾತ್ರಿಯಲ್ಲಿ ದೆವ್ವ ಬಂದರೂ, ನಾವು ಬರೆದಿರುವುದನ್ನು ಓದಿ ವಾಪಸ್ ಹೋಗುತ್ತದೆ ಎಂಬ ನಂಬಿಕೆ ನಮ್ಮದಿತ್ತು!
ನಮ್ಮದು ಮಲೆನಾಡು. ಬಾಲ್ಯ ಸಂಪನ್ನವಾಗಿದ್ದು ದಟ್ಟ ಕಾಡು ಕಣಿವೆಗಳ ನಡುವೆಯೇ. ಆ ದಿನಗ ಳನ್ನು ನೆನೆದರೆ ಈಗಲೂ ಮನಸು ಮಗುವಾಗಿ ಬಿಡುತ್ತದೆ. ಮಳೆಗಾಲದ ಕೆಲವೊಂದು ತಮಾಷೆಯ ಸಂಗತಿಗಳು ಪದೇ ಪದೆ ನೆನಪಾಗಿ ನಗು ತರಿಸುತ್ತವೆ. ಜೋರು ಮಳೆಗಾಲದಲ್ಲಿ ನಾವು ಒಳ್ಳೆಯ ಛತ್ರಿ ತೆಗೆದುಕೊಂಡು ಶಾಲೆಗೆ ಹೊರಟರೂ, ಮನೆಗೆ ಬರುತ್ತಿದ್ದುದು ಮುರಿದ ಛತ್ರಿ ಜೊತೆಗೆ! ದಾರಿಯುದ್ದಕ್ಕೂ ಉಂಬಳಗಳ ಕಾಟ, ಜೀರುಂಡೆ ಸದ್ದು…
ಮಳೆ ನಿಂತರೂ, ಜೋರಾಗಿ ಬೀಸಿದ ಗಾಳಿಗೆ ಮರದ ಎಲೆಗಳು ಮೈ ಕೊಡವಿಕೊಂಡಾಗ, ಭರ್ರನೆ ಬೀಳುವ ಹನಿಗಳಿಗೆ ಬೆಚ್ಚಿಬೀಳುತ್ತಿದ್ದೆವು. ಎಷ್ಟೋ ಸಲ, ಜೀರುಂಡೆಗಳ ಸದ್ದು ಎಲ್ಲಿಂದ ಬರ್ತಾ ಇದೆ ಎಂದು ತಿಳಿಯುವ ಕುತೂಹಲದಿಂದ ಹುಡುಕುತ್ತಾ ದೂರ ಸಾಗಿ, ಹೆದರಿ ವಾಪಸ್ಸಾಗಿದ್ದೂ ಇದೆ. ಅಲ್ಲದೇ ಶಾಲೆಯಲ್ಲಿ ಸೀನಿಯರ್‌ಗಳು ರಂಜನೀಯವಾಗಿ ಹೇಳುತ್ತಿದ್ದ ದೆವ್ವದ ಕಥೆಗಳನ್ನು ಕೇಳಿ ಹೆದ ರದ ಮಕ್ಕಳಿಲ್ಲ. ದೆವ್ವ ಮನೆಗೆ ಬರಬಾರದು ಎಂದು ಬಾಗಿಲಿನ ಮೇಲೆ “ನಾಳೆ ಬಾ’ ಎಂದು ಬರೆಯುತ್ತಿದ್ದೆವು.
ಒಂದು ವೇಳೆ ದೆವ್ವ ಬಂದರೂ ಅದು ಈ ಸಾಲು ಓದಿ ವಾಪಸ್ಸು ಹೊರಟು ಹೋಗುತ್ತದೆ ಅನ್ನುವ ನಂಬಿಕೆ ನಮ್ಮದು. ಒಮ್ಮೆ ಗೆಳತಿಯರೊಂದಿಗೆ ಕಾಡುದಾರಿಯಲ್ಲಿ ಶಾಲೆಗೆ ಹೋಗುತ್ತಿ ದ್ದಾಗ, ದೊಡ್ಡ ಮರದ ಪೊಟರೆಯ ಒಳಗೆ ಒಂದು ಕಲ್ಲನ್ನಿಟ್ಟು ಅರಿಶಿನ ಕುಂಕುಮ ಬಳಿದು, “ನಾ ಇಂದೇ ಬರ್ತೆ’ ಎಂದು ಮಸಿಯಲ್ಲಿ ಬರೆದಿದ್ದನ್ನು ನೋಡಿದೆವು. ಅಲ್ಲಿ ಒಂದಷ್ಟು ಬೇಡದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದನ್ನೆಲ್ಲ ನೋಡಿ, “ಇದು ದೆವ್ವದ್ದೇ ಕೆಲಸ’ ಅಂತ ಹೆದರಿ, ಒಂದೇ ಉಸಿರಿಗೆ ಶಾಲೆ ಸೇರಿದ್ದೆವು.
ಶಾಲೆಯಲ್ಲಿ ಕೆಲವೇ ನಿಮಿಷಗಳಲ್ಲಿ ಈ ವಿಷಯ ಹಬ್ಬಿ, ಎಲ್ಲರ ಕಣ್ಣಲ್ಲೂ ಭಯ ಹುಟ್ಟಿತ್ತು. ಅಷ್ಟರಲ್ಲಿ, ಸೀನಿಯರ್ ಹುಡು ಗರು ನಮ್ಮ ಕಡೆ ನೋಡಿ ಕೇಕೆ ಹಾಕಿ ನಗುತ್ತಿ ರುವುದನ್ನು ನೋಡಿ, ಇವರದ್ದೇ ಕಿತಾಪತಿ ಎಂದು ತಿಳಿಯಿತು. ಈ ಘಟನೆಯ ಪರಿಣಾಮ ಹೇಗಿತ್ತೆಂದರೆ, ಒಬ್ಬಳೇ ಆ ಮರದ ಹತ್ತಿರ ಹೋಗಲು ಭಯ ಆಗುತ್ತಿತ್ತು. ಈಗಲೂ ಆ ದಾರಿಯಲ್ಲಿ ಸಾಗುವಾಗ, ಬಾಲ್ಯದಲ್ಲಿ ನನ್ನನ್ನು ಆವರಿಸಿಕೊಂಡಿದ್ದ ಭಯದ ಸಂದರ್ಭ ನೆನಪಾಗುತ್ತದೆ.
* ರೇಖಾ ಭಟ್ ಹೊನಗದ್ದೆ