ಧಾರವಾಡ: ಬಾಲ್ಯದ ತಮ್ಮ ನೆನಪಿನ ಅನುಭವಗಳಿಂದ ಮಕ್ಕಳಿಗೆ ಅರಣ್ಯದ ಬಗ್ಗೆ ಮಾಹಿತಿ ನೀಡುವ “ಸಹ್ಯಾದ್ರಿಯಲ್ಲಿ ಬಾಲ್ಯ’ ಎಂಬ ಕಾರ್ಯಕ್ರಮ ನಗರದ ಬಾಲಬಳಗ ಶಾಲೆಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಮೂಲಕ ಮಕ್ಕಳಿಗೆ ಅರಣ್ಯದ ಬಗ್ಗೆ ಮಾಹಿತಿ ನೀಡಿದರು.
ಸಿ.ಆರ್. ಪ್ರದೀಪ ಮಾತನಾಡಿ, ಮಕ್ಕಳಿಗೆ ಬೆಟ್ಟದಿಂದ ಏನೆನು ಸಿಗುತ್ತದೆ ಎಂಬುದು ಗೊತ್ತು. ಆದರೆ, ಅವರಿಗೆ ಅದನ್ನು ಉಳಿಸುವ ಬಗೆ ತಿಳಿಸಬೇಕು. ಬೆಟ್ಟದಲ್ಲಿ ವಾಸವಾಗಿರುವ ಪಕ್ಷಿಗಳು ಉಳಿಯಲು ನಿಮ್ಮ ಮನೆ ಮುಂದೆ ಅವುಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಪಾಂಡುರಂಗ ಹೆಗಡೆ ಮಾತನಾಡಿ, ಬಾಲ್ಯದಲ್ಲೇ ಗೆಳೆಯರೊಂದಿಗೆ ಓಡಾಡಿದ್ದರಿಂದಲೇ ನಮ್ಮ ಪ್ರದೇಶದ ಕಾಡುಗಳ ಸಂಪೂರ್ಣ ಪರಿಚಯವಾಗಿದೆ. ನಮ್ಮ ಊರಿನ ಸುತ್ತ ವಿವಿಧ ಬಗೆಯ ಮಾವಿನ ತಳಿಗಳಿವೆ. ಅವುಗಳನ್ನು ಕೀಳಲು ಬೆಳ್ಳಂಬೆಳಗ್ಗೆ ಚಿಮಣಿ ದೀಪ ಹಿಡಿದು ಹೊರಡುತ್ತಿದ್ದೆವು. ಅವುಗಳನ್ನು ತಂದ ನಂತರ ಗೆಳೆಯರೆಲ್ಲ ಜಿದ್ದು ಕಟ್ಟಿ ಹಣ್ಣುಗಳನ್ನು ತಿನ್ನುತ್ತಿದ್ದೆವು.
ಇದಲ್ಲದೇ ಬಿದಿರಿನ ಕಾಡಿನಲ್ಲಿ ಹೊಕ್ಕು ಅಲ್ಲಿನ ಎಳೆ ಬಿದಿರು ತರುತ್ತಿದ್ದೆವು. ಆದರೆ ಅದೆಲ್ಲ ಈಗ ನೆನಪು ಮಾತ್ರ. ಇದೀಗ ನೀವು ಸಹ ನಿಮ್ಮ ಬಾಲ್ಯ ವ್ಯರ್ಥ ಮಾಡದೆ ಈಗಿನಿಂದಲೇ ಕಾಡುಗಳನ್ನು ಉಳಿಸಿ, ಬೆಳೆಸುವ ಮೂಲಕ ಅವುಗಳ ಸಂಪೂರ್ಣ ಪರಿಚಯ ತಿಳಿಯಬೇಕು ಎಂದರು. ಜನಾರ್ಧನ ಜಿ.ಎಲ್., ರವೀಂದ್ರ ಪ್ರಕಾಶ, ಮುರುಳೀಧರ ಮಾತನಾಡಿದರು. ಡಾ| ಸಂಜೀವ ಕುಲಕರ್ಣಿ, ವಿನೋದ, ಶ್ಯಾಮ ಇತರರಿದ್ದರು.