Advertisement

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

11:42 AM Sep 21, 2024 | Team Udayavani |

ಊರಿನ ಮಳೆಯ ಸೊಬಗೆ ಚೆಂದ. ನಾವು ಎಲ್ಲೇ ಇದ್ದರೂ, ಎಷ್ಟೇ ದೂರವಿದ್ದರೂ ಮಳೆಗಾಲದಲ್ಲಿ ಊರಿನ ನೆನಪಾಗದೇ ಇರದು. ಧೋ ಎಂದು ಎಡಬಿಡದೆ ಹರಿಯುವ ಮಳೆಗೆ ಊರಿನ ಹೊಳೆಗಳು, ನದಿಗಳು ಮೈದುಂಬಿ ಹರಿಯುವುದನ್ನು, ಹಸುರಿನ ಪ್ರದೇಶಗಳೆಲ್ಲ ಹೊಸ ಉತ್ಸಾಹವನ್ನು ಮೈಗೂಡಿಸಿಕೊಂಡು ನಲಿಯುವುದನ್ನು ನೋಡುವುದೇ ಕಣ್ಣಿಗೆ ದೃಶ್ಯ ವೈಭವ.

Advertisement

ಹೀಗೆ ಮಳೆಗಾಲದ ಅತೀಯಾದ ಮಳೆಯಿಂದ ತುಂಬಿ ಧುಮಿಕ್ಕಿ ಹರಿಯುತ್ತಿದ್ದ ನದಿಗಳನ್ನು ಕಣ್ಣು ತುಂಬಿಸಿಕೊಳ್ಳುವ ಆಸೆಯೊಂದಿಗೆ ಊರಿಗೆ ತೆರಳಿದ್ದೆ, ಮನೆಗೆ ಅರ್ಧ ಕಿಲೋ ಮೀಟರ್‌ ದೂರದಲ್ಲಿರುವ ಸೌಪರ್ಣಿಕಾ ನದಿ ದಂಡೆಯಲ್ಲಿ ಸಂಜೆಯ ಹೊತ್ತಿನಲ್ಲಿ ಏಕಾಂತದಲ್ಲಿ ಕುಳಿತಿರಲು ನೆನಪಿನಂಗಳದಲ್ಲಿ ಹಾದು ಹೋದ ನೆನಪುಗಳು ನೂರೊಂದು. ಅವುಗಳಲ್ಲಿ ಅಕ್ಷರಗಳಾಗಿ ದಾಖಲಾಗಿರುವ ನೆನಪುಗಳು ಕೆಲವೊಂದು.

ಸದಾ ಹಚ್ಚ ಹಸುರುಗಳಿಂದ ಕಂಗೊಳಿಸುತ್ತಿರುವ ಕರ್ನಾಟಕ ಕರಾವಳಿಯ ನದಿ ತೀರಗಳು ಪ್ರಕೃತಿ ಪ್ರಿಯರ ಕಣ್ಮನಗಳಿಗೆ ಮುದ ನೀಡುವಂತಹ ನಯನ ಮನೋಹರ ರಮ್ಯ ತಾಣಗಳು. ಇಂತಹ ಪ್ರಕೃತಿ ರಮಣೀಯ ಹಲವು ನದಿಗಳಲ್ಲಿ ಸೌಪರ್ಣಿಕಾ ನದಿ ತೀರವೂ ಒಂದು. ಈ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಕುಟುಂಬಗಳಿಗೆ ಇದು ಜೀವ ನದಿ, ದೇವ ನದಿ. ಇಲ್ಲಿ ವಿಶಾಲವಾಗಿ ಹರಡಿರುವ ಮರಳ ರಾಶಿಯಲ್ಲಿ ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಬೀಸಿ ಬರುವ ತಣ್ಣನೆಯ ತಂಗಾಳಿಗೆ ಮೈಯೊಡ್ಡಿ ಕುಳಿತಾಗ ಮನಸ್ಸಲ್ಲಿ ಮೂಡಿ ಬರುವ ನಿರಾಳತೆ ಮನಸ್ಸಿನ ತುಮುಲಗಳನ್ನು ಮಾಯವಾಗಿಸಿ, ಜೀವನೋಲ್ಲಾಸವನ್ನು ಹೆಚ್ಚಿಸಿ, ನಾಳೆಯ ಬದುಕಿಗೆ ಹೊಸ ಭರವಸೆಯನ್ನು ಮೂಡಿಸುತ್ತದೆ.

ಈ ಕಾರಣಕ್ಕಾಗಿಯೇ ಸಂಜೆಯಾಗುತ್ತಲೇ ವಿಹಾರಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಹೀಗೆ ಹಗಲಿನಲ್ಲಿ ತುಂಬಾ ಸುಂದರವಾಗಿ ಕಾಣುವ ಈ ಪ್ರದೇಶಗಳು ಸಂಜೆಯ ನೇಸರನ ಬೆಳಕು ಮರೆಯಾಗಿ ಕತ್ತಲೆಯ ರಾತ್ರಿಗೆ ಜಾರಿದಂತೆ ಇಲ್ಲಿಯ ಚಟುವಟಿಕೆಗಳು ಕೂಡಾ ಬದಲಾಗುತ್ತಾ ಸಾಗುತ್ತದೆ. ಕತ್ತಲೆಯ ರಾತ್ರಿಯ ನಿಗೂಢ ಚಟುವಟಿಕೆಗಳ ಕಮಟು ವಾಸನೆ ಜನರ ಅರಿವಿಗೆ ಬರುವುದು ಮರುದಿನ ಬೆಳಗ್ಗೆ ತೀರದಂಚಿನಲ್ಲಿ ಹಸುರಾಗಿ ಬೆಳೆದಿರುವ ನದಿ ಮದರಂಗಿ, ಮುಟ್ಟಿದರೆ ನಾಚಿ ಮುದುಡಿ ಕೊಳ್ಳುವ ನಾಚಿಕೆ ಗಿಡಗಳು ಮತ್ತು ಕಾಂಡ್ಲಾ ಮರಗಳ ಪೊದೆಗಳ ಮಧ್ಯೆ ನಿಸರ್ಗ ಕ್ರಿಯೆಗಾಗಿ ಕೂರಲು ಯಾರಿಗೂ ಕಾಣಿಸದ ಒಂದು ಸುರಕ್ಷಿತ ಜಾಗವೊಂದರ ಹುಡುಕಾಟದಲ್ಲಿರುವ ಸಮಯದಲ್ಲಿ ಮಾತ್ರ.

Advertisement

ಇಡೀ ಲೋಕವೇ ಮಲಗಿರುವಾಗ ಸರಿ ಸುಮಾರು ಮಧ್ಯರಾತ್ರಿಯ ಅನಂತರ ಇಲ್ಲಿ ನಡೆಯುವ ವಾಮಾಚಾರ ಕ್ರಿಯೆಗಳು, ಬಾಳೆ ಎಲೆಗಳಲ್ಲಿ ಬಡಿಸಿಟ್ಟು ಬಿಟ್ಟು ಹೋಗಿರುವ ಕುಂಬಳಕಾಯಿಗಳ ತುಂಡುಗಳು, ಅದರ ಮೇಲೆ ನೆಲದಲ್ಲೆಲ್ಲ ಚೆಲ್ಲಲ್ಪಟ್ಟಿರುವ ಹಳದಿ ಮತ್ತು ಕೆಂಪು ಕುಂಕುಮದ ಹುಡಿಗಳು, ಒಡೆದ ತೆಂಗಿನ ಕಾಯಿ ಚೂರುಗಳು, ಅರ್ಧ ಸುಟ್ಟು ಬಿದ್ದಿರುವ ತೆಂಗಿನ ಸೋಗೆಯ ಒಣ ಗರಿಗಳ ಸೂಟೆಗಳು, ಎಣ್ಣೆಯಿಂದ ತೊಯ್ದ ಬಟ್ಟೆಯ ಅರೆ ಸುಟ್ಟ ಕೋಲು ದೊಂದಿಗಳು, ಕೆಲವೊಮ್ಮೆ ಕತ್ತಲೆಯ ನವರಂಗಿ ಆಟ ಮುಗಿಸಿ ಅಲ್ಲೇ ಬಿಟ್ಟು ಹೋಗಿರುವ ಒಳ ಉಡುಪುಗಳು ರಾತ್ರಿಯ ಚಟುವಟಿಕೆಗಳ ಭಯಾನಕತೆಯನ್ನು ಸಾಂಕೇತಿಸುತ್ತದೆ.

ಅಕ್ರಮ ಸಂಬಂಧಗಳಿಂದ ಹುಟ್ಟಿದ ಮಗುವನ್ನು ರಾತ್ರಿ ಹೊತ್ತು ವಾಹನಗಳಿಂದ ತಂದು ಯಾರಿಗೂ ತಿಳಿಯದಂತೆ ಬಟ್ಟೆ ಸುತ್ತಿ ಮರಳ ರಾಶಿಯಲ್ಲಿ ಬಿಟ್ಟು ಪರಾರಿಯಾಗುವ ಜನರು ಒಂದೆಡೆಯಾದರೆ, ಇನ್ನೊಂದೆಡೆ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಾ ಸದಾ ಅರೆ ನಿದ್ರೆಯಲ್ಲಿ ಕಾಲ ಕಳೆಯುವ ನದಿ ಪಕ್ಕದ ಮನೆಗಳ ದಂಪತಿಗಳು. ಮಕ್ಕಳಿಲ್ಲದೆ ಕೊರಗುವ ಈ ದಂಪತಿಗಳು ಆ ಹೆಣ್ಣು ಕೂಸು ಕಂದಮ್ಮಗಳ ಆಕ್ರಂದನ ಕೇಳಿ ಓಡಿ ಬಂದು ಇದೆಲ್ಲ ನಾವು ನಂಬುವ ದೈವ-ದೇವರುಗಳ ಅನುಗ್ರಹ, ಪವಾಡವೆಂಬ ನಂಬಿಕೆಯಿಂದ ಭಾವ ತನ್ಮಯತೆಯಲ್ಲಿ ಮಗುವನ್ನು ಮನೆಗೆ ಹೊತ್ತೂಯ್ದು ಅ ಮಕ್ಕಳಿಗೆ ಮಾಯಾ, ವಿಷ್ಮಯ, ಸೌಪರ್ಣಿಕಾ, ನೇತ್ರಾವತಿ ಮುಂತಾದ ಹೆಸರುಗಳನ್ನಿಟ್ಟು ಅಕ್ಕರೆಯಿಂದ ಲಾಲನೆ-ಪಾಲನೆ ಮಾಡಿ ಸಾಕಿ ಸಲಹುತ್ತಾರೆ.

ಅದ್ಯಾರಿಗೋ ಹುಟ್ಟಿ ಪರಿಸ್ಥಿತಿಯ ಅನಿವಾರ್ಯತೆಯಿಂದ ಪರಿತ್ಯಜಿಸಲ್ಪಟ್ಟು ನರಿ-ನಾಯಿಗಳ ಹೊಟ್ಟೆಗೆ ಆಹಾರವಾಗಿ ನದಿ ತೀರದ ಮರಳಿನಲ್ಲಿ ಮಣ್ಣಾಗಿ, ತಮ್ಮ ಮಾನವ ಜನ್ಮವನ್ನು ಅಂತ್ಯಗೊಳಿಸಬೇಕಾಗಿದ್ದ ಅಮಾಯಕ ಬಡ ಜೀವಗಳು ದೇವರ ದಯೆಯಿಂದಲೋ ಏನೋ ಅದ್ಯಾರದೋ ಆಸರೆಯ ಬೆಚ್ಚನೆಯ ಮಡಿಲಲ್ಲಿ ಅಕ್ಕರೆ, ಪ್ರೀತಿ-ವಾತ್ಸಲ್ಯಗಳೊಂದಿಗೆ ಬೆಳೆದು ದೊಡ್ಡವರಾಗುತ್ತಾರೆ.

ರಾತ್ರಿಯಾಗುತ್ತಲೇ ಮಂದಿರ ದೈವಸ್ಥಾನಗಳ ಕಾಣಿಕೆ ಡಬ್ಬಿ, ಬೆಳ್ಳಿಯ ಪೂಜಾ ಸಾಮಾಗ್ರಿ, ನದಿ ಮಧ್ಯೆ ತೇಲಾಡುತ್ತಾ ವಿಶ್ರಾಂತಿಯಲ್ಲಿರುವ ಬೋಟ್‌ಗಳನ್ನೇರಿ ಮೀನಿನ ಬಲೆಯ ಕಂಚಿನ ರಿಂಗ್‌, ಸೀಸದ ಮಣಿಗಳನ್ನು ಕದ್ದು ಹೊಟ್ಟೆ ಹೊರೆಯುವ ಮೈಗಳ್ಳರು ನಡೆಸುವ ಚಿಲ್ಲರೆ ಕಳ್ಳತನಗಳು, ಹಗಲಲ್ಲಿ ಸಮಾಜ ಸೇವಕರಂತೆ ಕಾಣಿಸಿಕೊಂಡು ರಾತ್ರಿಯಾಗುತ್ತಿದ್ದಂತೆ ಚಪಲ ಚನ್ನಿಗರಾಗಿ ನಮ್ಮ ನಡಿಗೆ ಕಿಟಿಕಿ ಕಡೆಗೆ ಎಂದು ಸಂಕಲ್ಪ ತೊಟ್ಟವರಂತೆ ಕಂಡವರ ಮನೆಯ ಬೆಡ್‌ರೂಮ್‌, ಸ್ನಾನದ ಮನೆಯ ಕಿಟಿಕಿಗಳಲ್ಲಿ ಇಣುಕುವ ನಿಶಾಚರ ಜೀವಿಗಳ ವಿಕೃತ ನಡೆಗಳು, ಪೊಲೀಸ್‌ ಠಾಣೆಯಲ್ಲಿ ತನ್ನ ಆತ್ಮೀಯತೆ, ವೈಯಕ್ತಿಕ ವರ್ಚಸ್ಸು, ಪ್ರಭಾವವನ್ನು ಹೆಚ್ಚಿಸಿ ಕೊಳ್ಳಲು ಕ್ಲಾಸ್‌ ಬಂಕ್‌ ಮಾಡಿ ತಮ್ಮ ಸಹಪಾಠಿಗಳೊಂದಿಗೆ ವಿಹಾರಾರ್ಥವಾಗಿ ಬರುವ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಜೋಡಿ ಪ್ರೇಮಿಗಳನ್ನು ಪೊಲೀಸರ ಕೈಗೆ ಹಿಡಿಸಿ ಕೊಟ್ಟು ಇದನ್ನೇ ಜೀವನದ ಅತೀದೊಡ್ಡ ಸಾಧನೆಯೆಂದು ಭ್ರಮಿಸಿ ಸಂಭ್ರಮಿಸುವವರು ಮಾಡುವ ಘನಂಧಾರಿ ಕಾರ್ಯಗಳು, ಹೆತ್ತವರನ್ನು ಕರೆಸುತ್ತೇವೆ ಎಂದು ಕಾಲೇಜು ವಿದ್ಯಾರ್ಥಿಗಳನ್ನು ಜೋಡಿ ಪ್ರೇಮಿಗಳನ್ನು ಪೀಡಿಸಿ ಬ್ಲಾಕ್‌ಮೇಲ್‌ ಮಾಡುತ್ತಾ ನಡೆಸುವ ನ್ಯಾಯ ಸಮ್ಮತವಲ್ಲದ ವಸೂಲಿ ಬಾಜಿತನಗಳು, ನಗುಮೊಗದ ಸಕ್ಕರೆಯ ಮಾತುಗಳನ್ನಾಡಿ ಉದ್ಯೋಗದ ಬೇಟೆಯಲ್ಲಿರುವ ಬಡವರ ಮನೆಯ ಅಮಾಯಕ ಹೆಣ್ಮಕ್ಕಳನ್ನು ಉದ್ಯೋಗದ ಆಮಿಷ ತೋರಿಸಿ, ನಂಬಿಸಿ ಕಿರಾತಕರು ನಡೆಸುವ ತಲೆ ಹಿಡುಕ ಕಾರ್ಯಗಳು, ವಾಹನದಲ್ಲಿ ಶರವೇಗದಲ್ಲಿ ರಭಸದಿಂದ ಬಂದು ತಲವಾರು ಝಳಪಿಸುತ್ತಾ ಮೆರೆಯುವ ಅಟ್ಟಹಾಸ, ಹೊಡೆದಾಟ ಬಡಿದಾಟಗಳು, ತಲೆಗೇರಿಸಿಕೊಂಡ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳು, ಗಾಂಜಾ, ಡ್ರಗ್ಸ್‌ ಅಮಲಿನಲ್ಲಿ ನಡೆಯುವ ಕೊಲೆ ಸುಲಿಗೆಗಳು, ಮಕ್ಕಳನ್ನು ಕಳಕೊಂಡ ಹೆತ್ತವರ ಮೌನ ರೋದನಗಳು, ಉಳ್ಳವರು ಇಲ್ಲದವರ ಮೇಲೆ ನಡೆಸುವ ದರ್ಪ ದೌರ್ಜನ್ಯಗಳು, ಅನ್ಯಾಯಕ್ಕೊಳಗಾಗಿ ಅಸಹಾಯಕತೆಯಿಂದ ಕೈಚೆಲ್ಲಿ ಕಣ್ಣೀರಿಡುವ ಕುಟುಂಬಗಳು. ಹೀಗೆ ಇಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳಿಗೆ ಮೂಕ ಸಾಕ್ಷಿಯಾಗಿ, ರಹಸ್ಯಗಳನ್ನೆಲ್ಲ ತನ್ನ ಒಡಲೊಳಗೆ ಬಚ್ಚಿಟ್ಟು ಕೊಂಡು ಅಸಹನೀಯ ಮೌನದೊಂದಿಗೆ ತಾನು ಸೇರಬೇಕಾದ ಗಮ್ಯದೆಡೆಗೆ ಗುಪ್ತಗಾಮಿನಿಯಾಗಿ ಅಂದಿನಂತೆ ಇಂದಿಗೂ, ಎಂದೆಂದಿಗೂ ಹರಿಯುತ್ತಿರುತ್ತಾಳೆ ಸೌಪರ್ಣಿಕಾ ನದಿ.

*ಸುರೇಶ್‌ ಬೋಳೂರು, ದುಬೈ

 

 

Advertisement

Udayavani is now on Telegram. Click here to join our channel and stay updated with the latest news.

Next