ಮೊನ್ನೆ ಅಂಗನವಾಡಿಯ ಪಕ್ಕದ ರಸ್ತೆಯಿಂದ ಕಾಲೇಜಿಗೆ ಹೋಗುತ್ತಿರುವಾಗ ಒಬ್ಬಳು ತಾಯಿ ತನ್ನ ಮಗುವನ್ನು ಅಂಗನವಾಡಿಗೆ ಬಿಟ್ಟು ಹೋಗಲು ಬಂದಿದ್ದರು. ನೋಡು ನೋಡುತ್ತ ಇದ್ದಂತೆ ನನ್ನ ಮನಸ್ಸು ಬಾಲ್ಯದ ಕಡೆಗೆ ಕೊಂಡೊಯ್ಯಿತು. ನಾನು ಅಮ್ಮನ ಕೈಹಿಡಿದು ಅಂಗನವಾಡಿಗೆ ಹೋಗುತ್ತಿದ್ದೆ. ಶಾಲೆ ಬಂತು ಅಂತ ಹೇಳುವಾಗ ಕಣ್ಣಲ್ಲಿ ಜಲಧಾರೆ ಪ್ರಾರಂಭವಾಗುತ್ತಿತ್ತು. ಅಮ್ಮ ನನ್ನನ್ನು ಶಾಲೆಯಲ್ಲಿ ಬಿಟ್ಟು ಹೋಗುವಾಗ ನಾನು ಮನೆಗೆ ಬರುತ್ತೇನೆ ಎಂದು ಹಠಮಾಡುವುದು, ಕೂಗುವುದು ಸರ್ವೇಸಾಮಾನ್ಯವಾಗಿತ್ತು. ಮತ್ತೆ ಗೆಳೆಯ-ಗೆಳತಿಯರ ಜೊತೆ ಸೇರಿದಾಗ ಮನೆ ನೆನಪು ಮರೆತೇ ಹೋಗುತ್ತಿತ್ತು. ಇನ್ನೂ ಒಂದನೆಯ ತರಗತಿ ಸೇರುವಾಗಲಂತೂ ಖುಷಿಯೋ ಖುಷಿ. ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಹೋಗುವ ಆ ಸಂಭ್ರಮ ವರ್ಣನಾತೀತ. ಟೀಚರ್ ಪಾಠ ಮಾಡುವುದನ್ನು ಮನೆಗೆ ಬಂದು ಗೋಡೆಯ ಮೇಲೆ ಬರೆಯುವುದು, ನಾನೇ ಶಾಲನ್ನು ಸೀರೆಯಂತೆ ಕಟ್ಟಿಕೊಂಡು ಗಿಡಗಳಿಗೆ ಪಾಠ ಮಾಡುವುದು, ಹೊಡೆಯುವುದು ಮಾಡುತ್ತಿದ್ದೆ. ಈಗ ಎಣಿಸಿದಾಗ ನಗು ಬರುತ್ತದೆ. ಗೆಳೆಯರ ಜೊತೆ ಸೇರಿ ಕಣ್ಣಾಮುಚ್ಚಾಲೆ ಆಡಿದ್ದು, ಇನ್ನು ಚಿಕ್ಕಪುಟ್ಟ ವಿಷಯಕ್ಕೆ ಕೋಪ ಮಾಡಿಕೊಂಡು ಮುಖ ಮುಖ ನೋಡದೆ ಮುಖ ತಿರುಗಿಸಿ ತೋರುಬೆರಳು ತೋರಿಸಿ ರಾಜಿ ಮಾಡಿಕೊಂಡದ್ದು, ಬೇಸಿಗೆ ರಜೆಯಲ್ಲಿ ಮರಕೋತಿ ಆಟವಾಡಿದ್ದು , ಮರಹತ್ತಿ ಪೇರಳೆ, ಚಿಕ್ಕು, ಮಾವು ಕದ್ದು ತಿಂದದ್ದು ಎಲ್ಲವೂ. ಮತ್ತೆ “ಹೊಟ್ಟೆನೋವು’ ಎಂದು ಹೇಳಿದರೆ ಅಮ್ಮ ಬೈಯ್ಯುವುದು ಸಾಮಾನ್ಯವಾಗಿತ್ತು. ರಜೆ ಎರಡು ತಿಂಗಳಿದ್ದರೂ ನನಗೆ ಕೊಟ್ಟ ಮನೆಗೆಲಸವನ್ನು ಶಾಲೆ ಆರಂಭವಾಗುವ ಎರಡು ದಿನ ಮುಂಚೆ ನಾನು ಬರೆಯುತ್ತಿದ್ದೆ. ಇನ್ನು ಟೀಚರ್ ಸೆರಗು ಹಿಡಿದು ಎಳೆದದ್ದು ಎಲ್ಲ ಮಿಂಚಿನಂತೆ ಕಣ್ಣಮುಂದೆ ಬಂದು ಹೋಯಿತು. ಬಾಲ್ಯ ಎನ್ನುವುದು ಜೀವನದಲ್ಲಿ ಒಂದೇ ಬಾರಿ ಬರುವುದು. ಇನ್ನು ಮುಂದೆ ಇಂತಹ ಅಮೂಲ್ಯ ಕ್ಷಣಗಳು ಬರಲು ಸಾಧ್ಯವೇ ಇಲ್ಲ.
ಶಿಲ್ಪಾ ದ್ವಿತೀಯ ಬಿಎ ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ