ಗಜೇಂದ್ರಗಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಕೋಟೆ ನಾಡಿನ ಜನತೆಗೆ ವರುಣನ ಸಿಂಚನದಿಂದ ತಂಪಿನ ವಾತಾವರಣ ನಿರ್ಮಾಣವಾಗುವುದರ ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಕಳೆದ ಮೂರ್‍ನಾಲ್ಕು ತಿಂಗಳಿಂದ ಬಿಸಿಲಿನ ನರ್ತನದಿಂದಾಗಿ ಪಟ್ಟಣದ ಜನರು ಹೈರಾಣಾಗಿದ್ದರು. ಆದರೆ ಕಳೆದೊಂದು
ವಾರದಿಂದ ಮಳೆ ಬರುವ ಸಂಭವವಿದ್ದರೂ ಸಹ ಮಳೆರಾಯ ಮಾತ್ರ ಧರೆಗೆ ಇಳಿಯದೇ, ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿತ್ತು. ಬುಧವಾರ ಗುಡುಗು, ಸಿಡಿಲಿನೊಂಡಿಗೆ ಸುರಿದ ಮಳೆ ದಣಿದ ದೇಹಕ್ಕೆ ಮೇಘರಾಜನ ಸಿಂಚನ
ಮುದ ನೀಡುವುದಲ್ಲದೇ, ಜನತೆ ಮಳೆಯಲ್ಲಿ ಮಿಂದೆದ್ದರು.
ಕುಣಿದು ಕುಪ್ಪಳಿಸಿದ ಚಿಣ್ಣರು: ಬುಧವಾರ ವಾರ್ಷಿಕ ಪರೀಕ್ಷೆ ಫಲಿತಾಂಶ ತಿಳಿದುಕೊಂಡು, ರಜೆಯ ಮೂಡ್‌ನಲ್ಲಿದ ಚಿಣ್ಣರಿಗೆ ಮಳೆರಾಯ ಆಗಮಿಸಿರುವುದು ಮತ್ತಷ್ಟು ಉಲ್ಲಾಸಕ್ಕೆ ಕಾರಣವಾಯಿತು. ಹೀಗಾಗಿ ನಾಲಬಂದ ಬಡಾವಣೆಯ ಮಕ್ಕಳು ಮಳೆಯಲ್ಲಿ ಕಣಿದು ಕುಪ್ಪಳಿಸಿದರು. ಜನರು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಚರಂಡಿಗಳೆಲ್ಲ ಮಳೆ ನೀರಿನಿಂದ ತುಂಬಿ ಹರಿದವು.