Advertisement

ಜಿಲ್ಲೆಯ 4 ಕಡೆ ಶಿಶುಪಾಲನ ಕೇಂದ್ರ ; ಮಕ್ಕಳ ಪಾಲನೆಗೆ ಪೂರಕ ವಾತಾವರಣ

08:43 AM Oct 18, 2022 | Team Udayavani |

ಉಡುಪಿ: ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ ಶಿಶುಪಾಲನ ಕೇಂದ್ರಗಳಲ್ಲಿ ನಾಲ್ಕು ಉಡುಪಿ ಜಿಲ್ಲೆಗೆ ಮಂಜೂರುಗೊಂಡಿದೆ. ಇವುಗಳಲ್ಲಿ ಕೆಲವು ಕಾರ್ಯಾರಂಭಗೊಂಡಿದ್ದು, ಇನ್ನು ಕೆಲವು ಕಾರ್ಯಚಟುವಟಿಕೆ ಮಾಡಬೇಕಿದೆ.

Advertisement

ಡೇ ಕೇರ್‌ ಮಾದರಿಯ ಶಿಶುಪಾಲನ ಕೇಂದ್ರಗಳು ಸಣ್ಣ ಮಾದರಿಯ ಅಂಗನವಾಡಿಯ ಸ್ವರೂಪ ಪಡೆಯುವ ಜತೆಗೆ ಮಕ್ಕಳ ಪಾಲನೆಗೆ ಪೂರಕ ವಾತಾವರಣ ರೂಪಿಸಲಾಗುತ್ತಿದೆ.

6 ತಿಂಗಳಿನಿಂದ 6 ವರ್ಷ ತುಂಬಿದ ಮಕ್ಕಳು ಈ ಶಿಶುಪಾಲನ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಮಣಿಪಾಲದ ರಜತಾದ್ರಿ, ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಕುಂದಾಪುರ, ಕಾರ್ಕಳಕ್ಕೆ ಮಂಜೂರುಗೊಂಡಿದೆ.

ಕಾರ್ಕಳದಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿದೆ. ಉಡುಪಿ ಹಾಗೂ ಮಣಿಪಾಲದಲ್ಲಿ ಇತ್ತೀಚೆಗಷ್ಟೇ ಉದ್ಘಾ ಟನೆಗೊಂಡಿದ್ದು, ಕಾರ್ಯಚಟುವಟಿಕೆ ನಡೆಯುತ್ತಿದೆ. ಕುಂದಾಪುರದಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ.

ಯೋಜನೆ ಉದ್ದೇಶ

Advertisement

ದುಡಿಯುವ ವರ್ಗದ ಮಹಿಳೆಯರಿಗೆ ಅನುಕೂಲ ವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಮಕ್ಕಳ ಆರೈಕೆಗೆಂದೇ ಕೆಲವು ಮಂದಿ ಮಹಿಳೆಯರು ಕೆಲಸ ಬಿಟ್ಟು ಮನೆಯಲ್ಲಿ ಆರೈಕೆ ಮಾಡುತ್ತಿದ್ದಾರೆ. ಅಲ್ಲದೆ ಖಾಸಗಿ ಡೇ ಕೇರ್‌ಗಳಲ್ಲಿಯೂ ದುಬಾರಿ ಹಣ ಪಡೆಯುವ ಕಾರಣ ಮಹಿಳೆಯರಿಗೆ ಕೆಲಸ ಬಿಡುವುದು ಅನಿವಾರ್ಯವಾಗುತ್ತಿದೆ. ಇದನ್ನು ತಪ್ಪಿಸಲು ಸರಕಾರ ಈ ಚಿಂತನೆ ನಡೆಸಿದೆ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಮಕ್ಕಳನ್ನು ಶಿಶುಪಾಲನ ಕೇಂದ್ರದಲ್ಲಿ ಬಿಡಬಹುದು. ಇದಕ್ಕಾಗಿ ಪಾಲನ ಕೇಂದ್ರದಲ್ಲಿ ನುರಿತ ಸಿಬಂದಿಯಿದ್ದು ಸೂಕ್ತ ಆರೈಕೆ ಮಾಡುತ್ತಾರೆ.

ಸೂಕ್ತ ನಿರ್ವಹಣೆ

ಜಿಲ್ಲೆಯ 4 ಶಿಶುಪಾಲ ಕೇಂದ್ರದ ನಿರ್ವಹಣೆಗೆ 6 ತಿಂಗಳಿಗೆ 10.26 ಲ.ರೂ. ಹಣ ಬಿಡುಗಡೆಗೊಂಡಿದೆ. ಇದು ಸಿಬಂದಿ ವೇತನ, ಆಹಾರ ಸಹಿತ ಇತರ ಸಾಮಗ್ರಿ ಖರೀದಿ, ಆರೋಗ್ಯ ಸಂಬಂಧಿತ ವಸ್ತುಗಳ ಖರೀದಿಗೆ ಬಳಕೆ ಮಾಡಲಾಗುತ್ತದೆ. ಇಲ್ಲಿಗೆ ಕಡ್ಡಾಯ ಹಾಜರಾತಿ ಎಂಬುವುದಿಲ್ಲ. ತುರ್ತು ಸಂದರ್ಭಗಳಲ್ಲಿಯೂ ಮಕ್ಕಳನ್ನು ಇಲ್ಲಿ ಬಿಟ್ಟುಹೋಗಲು ಬೇಕಿರುವ ವ್ಯವಸ್ಥೆ ಕಲ್ಪಿಸಬಹುದಾಗಿದೆ.

ಹೇಗಿದೆ ಆರೈಕೆ ಕೇಂದ್ರ?

ಮಕ್ಕಳಿಗೆ ಯೋಗ್ಯವಾಗುವ ರೀತಿಯಲ್ಲಿ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಪೌಷ್ಟಿಕಾಂಶಯುಕ್ತ ಆಹಾರಗಳು, ಕೇಂದ್ರದ ನಾಲ್ಕೂ ಗೋಡೆಗಳಲ್ಲಿ ಪೈಂಟಿಂಗ್‌, ವಿವಿಧ ಪ್ರಕಾರದ ಆಟಿಕೆಗಳು, ಮಹಿಳೆಯರಿಗೆ ಬೆಡ್‌ ವ್ಯವಸ್ಥೆ, ಮಕ್ಕಳಿಗೆ ತೊಟ್ಟಿಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪೂರಕ ವ್ಯವಸ್ಥೆ: ಬಜೆಟ್‌ನಲ್ಲಿ ಘೋಷಣೆಯಾದಂತೆ ಉಡುಪಿ ಜಿಲ್ಲೆಗೆ ಶಿಶುಪಾಲನ ಕೇಂದ್ರ ಮಂಜೂರುಗೊಂಡಿದೆ. ಈಗಾಗಲೇ ಕೆಲವು ಮಕ್ಕಳು ಇದರ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಬೇಕಿರುವಂತಹ ಎಲ್ಲ ರೀತಿಯ ಪೂರಕ ವ್ಯವಸ್ಥೆಗಳನ್ನು ಪಾಲನ ಕೇಂದ್ರದಲ್ಲಿ ಕಲ್ಪಿಸಲಾಗಿದೆ. –ವೀಣಾ ವಿವೇಕಾನಂದ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next