ಮಂಗಳೂರು: ಹೆರಿಗೆ ಸಮಯದಲ್ಲಿ ಮಗುವಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಲೇಡಿಗೋಷನ್ ಆಸ್ಪತ್ರೆ ವಿರುದ್ಧ ಆರೋಗ್ಯ ಸಚಿವರು, ದ.ಕ. ಜಿಲ್ಲಾಧಿಕಾರಿಗೆ ಪೋಷಕರು ದೂರು ನೀಡಿದ್ದಾರೆ.
ತಾಯಿಯ ಸಹೋದರ ನೀಡಿರುವ ದೂರಿನಲ್ಲಿ, “ನನ್ನ ತಂಗಿ 9 ತಿಂಗಳ ಗರ್ಭಿಣಿಯಾಗಿದ್ದು, ಆ.17ರಂದು ರಾತ್ರಿ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ.18ರಂದು ಬೆಳಗ್ಗೆ 10.30ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ.
ಮಗು ಸಹಜವಾಗಿದೆ ಎಂದು ವೈದ್ಯರು ತಿಳಿಸಿದರು. ಮೂರು ದಿನ ಕಳೆದರೂ ಮಗುವನ್ನು ನಮಗೆ ತೋರಿಸಿಲ್ಲ. ಮಂಗಳವಾರ ಸಂಜೆ ಏಕಾಏಕಿ ಮಗುವಿಗೆ ಒಂದು ಕಣ್ಣಿಲ್ಲ ಎಂದು ತಿಳಿಸಿದ್ದು, ನಮಗೆ ಆಘಾತವಾಗಿದೆ. ಈ ಬಗ್ಗೆ ವೈದ್ಯರು ಹಾಗೂ ಮೇಲಧಿಕಾರಿಗಳು ಸೂಕ್ತ ಕಾರಣ ನೀಡಿಲ್ಲ. ನಾವು ವೈದ್ಯಕೀಯ ವರದಿಗಳನ್ನು ಕೇಳಿ ದರೂ ಕೊಡದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಮಗುವಿಗೆ ಎದೆ ಹಾಲು ಉಣಿಸಲು ಮೂರು ದಿನ ಕಳೆದರೂ ಅವಕಾಶ ನಿರಾಕರಿಸಲಾಗಿದೆ. ಹೀಗಾಗಿ ತಾಯಿ ಮತ್ತು ಮಗುವಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪಾಣೆಮಂಗಳೂರಿನ ನಿವಾಸಿ ಯಾಗಿರುವ ಮಗುವಿನ ತಾಯಿ ಪರವಾಗಿ ತುಳುನಾಡ ರಕ್ಷಣ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕ ಡಾ| ದುಗಾ ಪ್ರಸಾದ್ ಎಂ.ಆರ್., “ಸಂತ್ರಸ್ತೆ ಆ.18ರಂದು ಮುಂಜಾನೆ ಹೆರಿಗೆಗಾಗಿ ಬಂದಿದ್ದು, ಬೆಳಗ್ಗೆ 9.58ಕ್ಕೆ ಹೆರಿಗೆ ಆಗಿತ್ತು. ಆಗ ಮಗು ಅತ್ತಿದೆ. ಆದರೆ ಉಸಿರಾಟಕ್ಕೆ ತೊಂದರೆ ಇತ್ತು. ತಜ್ಞ ವೈದ್ಯರ ಸಲಹೆ ಮೇರೆಗೆ ಎನ್‌ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಮಗುವಿಗೆ ಕೃತಕ ಉಸಿರಾಟ ಒದಗಿಸಲು ಸಿಪ್ಯಾಪ್ ವ್ಯವಸ್ಥೆ ಮಾಡಲಾಗಿತ್ತು.
ಉಸಿರಾಟದಲ್ಲಿ ಸುಧಾರಣೆ ಕಂಡು ಬಂದ ಬಳಿಕ ಮಕ್ಕಳ ತಜ್ಞರು ಉಳಿದ ನ್ಯೂನತೆ ಕಂಡು ಹಿಡಿಯುವ ವೇಳೆ ಕಣ್ಣಿನ ಭಾಗ ಒಳಗೆ ಹೋಗಿರುವಂತೆ ಕಂಡು ಬಂತು. ಮಕ್ಕಳ ಕಣ್ಣಿನ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದ ಬಳಿಕ ಈ ಬಗ್ಗೆ ಮಗುವಿನ ಪೋಷಕರಿಗೆ ತಿಳಿಸಲಾಗುತ್ತದೆ. ಮಕ್ಕಳ ಕಣ್ಣಿನ ತಜ್ಞರು ಕಣ್ಣಿನ ಅಲ್ಟ್ರಾಸೌಂಡ್ ತಪಾಸಣೆ ನಡೆಸಿದಾಗ ಕಣ್ಣು ಗುಡ್ಡೆ ಜನನದ ವೇಳೆಯೇ ಇಲ್ಲದಿರುವುದು ಕಂಡು ಬಂದಿದೆ. ಅದನ್ನು ಪೋಷಕರಿಗೆ ತಿಳಿಸಿದಾಗ ಅವರು ಆತಂಕಕ್ಕೊಳಗಾಗಿದ್ದಾರೆ.
ಈ ವಿಷಯ ತಿಳಿಸಲು ವಿಳಂಬ ಮಾಡಲಾಗಿದೆ ಎಂದು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಈ ಪ್ರಕರಣದ ಎಲ್ಲ ದಾಖಲೆಗಳು, ಸಿಸಿಟಿವಿ ಫೂಟೇಜ್‌ಗಳೂ ಆಸ್ಪತ್ರೆಯಲ್ಲಿವೆ. ಆಸ್ಪತ್ರೆಯಿಂದ ಯಾವುದೇ ಲೋಪವಾಗಿಲ್ಲ’ ಎಂದು ತಿಳಿಸಿದ್ದಾರೆ.