Advertisement

ಶಾಲೆಯಲ್ಲೇ ಬಾಲೆ ಮೇಲೆ ಲೈಂಗಿಕ ಕಿರುಕುಳ

11:28 AM Feb 21, 2017 | |

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ ಮೂರು ವರ್ಷದ ಬಾಲಕಿ ಮೇಲೆ ನರ್ಸರಿ ಶಾಲೆಯ ಸೂಪರ್‌ವೈಸರ್‌ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಶಾಲೆಯ ಸೂಪರ್‌ವೈಸರ್‌ ಮಂಜುನಾಥ್‌ ಅಲಿಯಾಸ್‌ ಮಂಜು (28) ಎಂಬಾತನನ್ನು ಪೊಲೀಸರು ಬಂಧಿಸಿ, ಪೋಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಪೋಷರು ಶಾಲೆಯ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸಿದ್ದು, ಶಾಲೆಯ ಪ್ರಾಂಶುಪಾಲೆ ವೀಣಾ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಏನಿದು ಘಟನೆ?: ನಗರದ ಮಾರತಹಳ್ಳಿ ನಿವಾಸಿಗಳಾದ ಸಾಫ್ಟ್ವೇರ್‌ ಉದ್ಯೋಗಿಯೊಬ್ಬರು ತಮ್ಮ ಮೂರು ವರ್ಷದ ಪುತ್ರಿಯನ್ನು ಕರಿಯಮ್ಮನ ಅಗ್ರಹಾರದಲ್ಲಿರುವ “ಕಿಡ್ಜಿ’ ನರ್ಸರಿ ಶಾಲೆಯಲ್ಲಿ ಎಲ್‌ಕೆಜಿಗೆ ಸೇರಿಸಿದ್ದರು. ಇದೇ ಶಾಲೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಆರೋಪಿ ಸೂಪರ್‌ವೈಸರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಫೆ.17 ರಂದು ಬಾಲಕಿ ಎಂದಿನಂತೆ ಶಾಲೆಗೆ ಹೋಗಿ ಮಧ್ಯಾಹ್ನ ಮನೆಗೆ ತೆರಳಿದ್ದಳು.

ಮನೆಗೆ ಬಂದ ಬಾಲಕಿ ತುಂಬಾ ಅಳುತ್ತಿದ್ದಳು. ಮಗಳು ಅಳುತ್ತಿದ್ದ ಬಗ್ಗೆ ಪೋಷಕರು ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕಿಯು,  ಮಂಜು ಎಂಬಾತ ತನ್ನ ಮೇಲೆ ನಡೆಸಿದ್ದ ಕೃತ್ಯವನ್ನು ವಿವರಿಸಿದ್ದಳು. ಅಲ್ಲದೆ ತನಗೆ ಯಾತನೆಯಾಗುತ್ತಿದೆ ಎಂದೂ ವಿವರಿಸಿದ್ದಳು. ಕೂಡಲೇ ಪೋಷಕರು ಶಾಲೆ ಬಳಿ ಹೋಗಿ ಶಾಲೆಯ ಪ್ರಾಂಶುಪಾಲೆಯೂ ಆಗಿರುವ ನಿರ್ದೇಶಕಿ ಡಾ.ವೀಣಾ ಅವರ ಬಳಿ ಕಾಮುಕನ ಕೃತ್ಯದ ಬಗ್ಗೆ ಹೇಳಿದ್ದಾರೆ. 

ಪ್ರಾಂಶುಪಾಲೆಯ ನಿರ್ಲಕ್ಷ್ಯ: ಸಂತ್ರಸ್ತ ಬಾಲಕಿಯ ಪೋಷಕರು ಮಾತು ಕೇಳದ ವೀಣಾ ಆರೋಪಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಬಾಲಕಿ ಅಲ್ಲಿಯೇ ಇದ್ದ ಆರೋಪಿ ಮಂಜುನಾಥ್‌ನನ್ನು ಗುರುತಿಸಿದ್ದಾಳೆ. ಅಲ್ಲದೆ, ಶಿಕ್ಷಕರು ತಮ್ಮ ಮೊಬೈಲ್‌ನಲ್ಲಿರುವ ಫೋಟೋ ತೋರಿಸಿದರೂ ಅಲ್ಲಿಯೂ ಆರೋಪಿಯನ್ನು ಗುರುತಿಸಿದ್ದಾಳೆ. ಇಷ್ಟಾದರೂ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಆರೋಪಿ ವಿರುದ್ಧ ದೂರು ನೀಡಲು ನಿರ್ಲಕ್ಷ್ಯ ತೋರಿದರು.

ಶಾಲೆಯ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲಿಸುವಂತೆ ಕೇಳಿದರೂ ಅದಕ್ಕೂ ಸ್ಪಂದಿಸಿಲ್ಲ. ಆರೋಪಿ ಮಂಜುನಾಥ್‌ನೆ ಶಾಲೆಯ ಸಿಸಿಟಿವಿ ನಿರ್ವಹಣೆ ಮಾಡುತ್ತಿದ್ದ ಎಂಬುದು ತಿಳಿದಿದೆ. ಬಳಿಕ ಬಾಲಕಿ ಪೋಷಕರು ತಮ್ಮ ಮಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯದು ಚಿಕಿತ್ಸೆ ಕೊಡಿಸಿ ಆಸ್ಪತ್ರೆಯ ಮೂಲಕ ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಬಳಿಕ ಬಾಲಕಿಯನ್ನು ಪೊಲೀಸರು ಪ್ರಶ್ನಿಸಿದ್ದು, ಸುಮಾರು ಐದಾರು ಬಾರಿ ಆರೋಪಿ ಕೃತ್ಯವೆಸಗಿದ್ದ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಮಂಜುನಾಥ್‌ನನ್ನು ಬಂಧಿಸಿ ಪೋಕೊ ಪ್ರಕರಣ ದಾಖಲಿಸಿದ್ದಾರೆ.

ಶಾಲೆಗೆ ಬೀಗ ಹಾಕಿ ಪ್ರತಿಭಟನೆ: ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ಘಟನೆ ಖಂಡಿಸಿ ಸೋಮವಾರ ಸಂಜೆ ಶಾಲೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶಾಲೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯ ಬಗ್ಗೆ ಪ್ರಾಂಶುಪಾಲೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ ಡಾ.ವೀಣಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದರು.

ಇನ್ನೂ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ಅನಿರ್ದಿಷ್ಟಾವಧಿ ರಜೆ ಘೋಷಿಸಿದೆ. ಸೋಮವಾರ ಸಂಜೆ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಾಂಶುಪಾಲೆ ವೀಣಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದ್ದಾರೆ.  

ನಿಯಮ ಪಾಲಿಸುತ್ತಿವೆಯೇ ಚೈಲ್ಡ್‌ ಕೇರ್‌ ಸೆಂಟರ್‌ಗಳು? 
ನಗರದಾದ್ಯಂತ ಚೈಲ್ಡ್‌ ಡೇ ಕೇರ್‌ ಸೆಂಟರ್‌ಗಳು, ಮಾಂಟೆ ಸರಿಸ್‌, ಪ್ರೀ ಸ್ಕೂಲ್ಸ್‌, ಕಿಡ್ಸ್‌ ಕ್ಯಾಂಪ್ಸ್‌ ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಶಿಶು ಆರೈಕೆ ಕೇಂದ್ರಗಳಿವೆ. ಇವು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಬಹುಪಾಲು ಶಿಶು ಆರೈಕೆ ಕೇಂದ್ರಗಳು ಮಕ್ಕಳು ಮತ್ತು ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೂಕ್ತ ಭದ್ರತೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ. ನಿಯಮ ಪಾಲಿಸದ ಈ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳುವುದು ಶಿಕ್ಷಣ ಇಲಾಖೆ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ ಬಿಬಿಎಂಪಿ ಈ ವಿಚಾರದಲ್ಲಿ ತಟಸ್ಥವಾಗಿದೆ.

ಆದರೆ, ಈ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಗೆ ಬರುತ್ತವೆ ಎಂಬ ಕಾರಣಕ್ಕೆ ಜನ ವಸತಿ ಪ್ರದೇಶಗಳಲ್ಲಿರುವ ಶಿಶು ಆರೈಕೆ ಕೇಂದ್ರಗಳನ್ನು ವಾಣಿಜ್ಯ ಪ್ರದೇಶಗಳಿಗೆ ಸ್ಥಳಾಂತರಿಸಲು ಇತ್ತೀಚೆಗೆ ಬಿಬಿಎಂಪಿ ನೋಟಿಸ್‌ ನೀಡಿತ್ತು. ಬೆಂಗಳೂರೊಂದರಲ್ಲೇ ಶಿಶು ಆರೈಕೆ ಕೇಂದ್ರದಲ್ಲಿ ಸುಮಾರು 3.5 ಲಕ್ಷ ಮಕ್ಕಳು ದಾಖಲಾಗಿದ್ದು, ಇಲ್ಲಿ ಏಳು ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಇಂಥ ಘಟನೆ ಮೊದಲೇನಲ್ಲ 
1. ಇತ್ತೀಚೆಗೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ “ಡೇ ಕೇರ್‌’ನಲ್ಲಿ ಮೂರುವರೆ ವರ್ಷದ ಬಾಲಕಿ ಮೇಲೆ ಡೇ ಕೇರ್‌ ಮಾಲೀಕರ ಪುತ್ರನಿಂದ ಲೈಂಗಿಕ ಕಿರುಕುಳ. 
2. 2014ರ ಜುಲೈನಲ್ಲಿ ಕೆ.ಆರ್‌. ಪುರ ಸಮೀಪವಿರುವ ವಿಬ್‌ ಗಯಾರ್‌ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ.
3. ಜಾಲಹಳ್ಳಿಯ ಆರ್ಕಿಡ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ.

ಮಂಜುನಾಥ್‌ ನಮ್ಮ ಶಾಲೆಯಲ್ಲಿ 8 ವರ್ಷಗಳಿಂದ ಕೆಲಸಕ್ಕಿದ್ದ. ಆತನ ಪೂರ್ವಪರ ವಿಚಾರಿಸಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಆರು ವರ್ಷಗಳ ಕಾಲ ಬೇರೆ ಶಾಲೆಯಲ್ಲಿ ಕೂಡ ಕೆಲಸ ಮಾಡಿದ್ದಾನೆ. ಪೊಲೀಸರ ತನಿಖೆಗೆ ಶಾಲೆ ಆಡಳಿತ ಮಂಡಳಿ ಸಹಕರಿಸಿದೆ.  ಶಾಲೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯನ್ನು ಪೊಲೀಸರಿಗೆ ನೀಡಲಾಗಿದೆ. ನಿಜವಾಗೂ ಬಂಧಿತ ವ್ಯಕ್ತಿ ಕೃತ್ಯವೆಸಗಿದ್ದರೆ, ಆತನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಇಂತಹ ಕೃತ್ಯವನ್ನು ಖಂಡಿಸುತ್ತೇವೆ. ಆದರೆ ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.
-ಡಾ.ವೀಣಾ, ಪ್ರಾಂಶುಪಾಲೆ

Advertisement

Udayavani is now on Telegram. Click here to join our channel and stay updated with the latest news.

Next