ಬೀದರ: ಬಾಲ್ಯ ವಿವಾಹ ತಡೆಗಟ್ಟುವುದರ ಜೊತೆಗೆ ಬಾಲ್ಯ ವಿವಾಹಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು ಎಲ್ಲ ಅಧಿಕಾರಿಗಳ ಜವಾಬ್ದಾರಿ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ವಿದ್ಯಾನಿಕೇತನ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾನೂನು ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚಾಗಿದೆ. 18 ವರ್ಷದೊಳಗಿನ ಎಲ್ಲರೂ ಮಕ್ಕಳೇ. ಅವರನ್ನು ನಾಗರಿಕರಾಗಿ ದೇಶದ ಸಂಪತ್ತಿಗಾಗಿ ಎಲ್ಲರು ನೋಡಬೇಕಾಗಿದೆ ಎಂದರು.
ತಾಪಂ ಇಒ ಧನರಾಜ ಬೋರಾಳೆ ಮಾತನಾಡಿ, ಬಾಲ್ಯವಿವಾಹ ತಡೆ ಕಾಯ್ದೆ ಮೊದಲಿನಿಂದಲೂ ಜಾರಿಯಲ್ಲಿದ್ದರೂ ವಿವಾಹಗಳು ನಡೆಯುತ್ತಲೇ ಇದ್ದವು. ಮತ್ತೆ 2006ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ ಕಠಿಣವಾಗಿ ಜಾರಿಗೆ ತರಲಾಯಿತು. ಬಾಲ್ಯ ವಿವಾಹ ಕುರಿತ ಅರಿವು ಮೂಡಿಸುವುದು ಮಾತ್ರವಲ್ಲದೆ ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಬಾಲ್ಯ ವಿವಾಹ ಕಡಿಮೆಯಾಗಬಹುದು. ಹಿರಿಯರು ಹರಕೆ ಹೊತ್ತುಕೊಂಡು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ಸರಿಯಲ್ಲ. ಇದು ಕಾನೂನು ಅಪರಾಧ ಆಗುತ್ತದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ್ ಮಾತನಾಡಿ, ಬಾಲ್ಯ ವಿವಾಹ ಸುಸ್ಥಿರ ಸಮಾಜಕ್ಕೆ ಮಾರಕವಾದದು. ಅಲ್ಲದೇ ಹೆಣ್ಣು ಮಕ್ಕಳ ದೈಹಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಹೆಣ್ಣುಮಕ್ಕಳು ದೈಹಿಕವಾಗಿ ಅಷ್ಟೊಂದು ಪ್ರಬಲವಾಗಿ ಬೆಳೆಯದ ಕಾರಣ ಮದುವೆ ಮಾಡಿದರೆ ಅವರ ಆಯುಷ್ಯ ಕಡಿಮೆಯಾಗುವ ಸಂಭವವಿರುತ್ತದೆ. ಆದ್ದರಿಂದ ಬಾಲ್ಯವಿವಾಹವನ್ನು ತಡೆಗಟ್ಟುವುದು ಕೂಡ ಸಾಮಾಜಿಕ ನ್ಯಾಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ನಿರೂಪಿಸಿದರು. ಸಂಸ್ಥೆಯ ಅಮೃತ್ ವಂದಿಸಿದರು. ಪ್ರಮುಖರಾದ ವೆಂಕಟೇಶ ಟಿ., ಎಂ.ಕೆ.ಟಿ ಮೆರಿಲ್, ಸೂರ್ಯಕಾಂತ ಮದಾನೆ ಸೇರಿದಂತೆ ಅಧಿಕಾರಿಗಳು ಮತ್ತು ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿದ್ದರು.