Advertisement

ಚುಮು ಚುಮು ಚಳಿಗೆ ಬಿಸ್ಸಿ ಬಿಸಿ ಸಾರು

12:30 AM Jan 02, 2019 | |

ಬಿಸಿ ಬಿಸಿ ಪದಾರ್ಥಗಳನ್ನು ತಿನ್ನಬೇಕು ನಿಸುತ್ತದೆ. ಊಟದ ಸಮಯದಲ್ಲಂತೂ ಸಾರು ಬಿಸಿಯಾಗಿರಬೇಕು, ದಿನಕ್ಕೊಂದು ವರೈಟಿ ಇರಬೇಕು ಅನಿಸಿಬಿಡುತ್ತದೆ. ಚಳಿಗಾಲದಲ್ಲಿ  ದೇಹದ ಉಷ್ಣಾಂಶ ಕಾಪಾಡುವ ಹಾಗೂ ಶೀತಭಾದೆಗಳಿಂದ ದೇಹವನ್ನು ರಕ್ಷಿಸುವ, ಮೆಣಸು, ಜೀರಿಗೆ, ಬೆಳ್ಳುಳ್ಳಿಯಿಂದ ಮಾಡಬಹುದಾದ ಕೆಲವು ಸಾರುಗಳ ರೆಸಿಪಿ ಇಲ್ಲಿದೆ.      

Advertisement

1.    ಜೀರಿಗೆ ಮೆಣಸಿನ ಸಾರು    
ಬೇಕಾಗುವ ಸಾಮಗ್ರಿ: ತೊಗರಿ ಬೇಳೆ- 1/4 ಕಪ್‌, ಟೊಮೇಟೊ- 2, ಲಿಂಬು- 1, ಕೊತ್ತಂಬರಿಸೊಪ್ಪು-ಸ್ವಲ್ಪ, ಕರಿಬೇವು-10 ಎಸಳು,  ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು, ಜೀರಿಗೆ ಮೆಣಸು- 1ಚಮಚ, ಜೀರಿಗೆ- 1 ಚಮಚ, ತುಪ್ಪ-1ಚಮಚ, ಸಾಸಿವೆ- 1 ಚಮಚ, ಅರಿಶಿಣ, ಇಂಗು.

ಮಾಡುವ ವಿಧಾನ: ತೊಗರಿ ಬೇಳೆಯನ್ನು ತೊಳೆದು, ಅದರ ಜೊತೆ ಕತ್ತರಿಸಿದ ಟೊಮೆಟೊ ಹಾಕಿ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಮೆಣಸು ಮತ್ತು ಜೀರಿಗೆಯನ್ನು ಎಣ್ಣೆ ಹಾಕದೆ ಹಾಗೇ ಕೆಂಪಗೆ ಹುರಿದು, ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ಕುಕ್ಕರಿನಲ್ಲಿ ಬೆಂದ ಬೇಳೆ ಮತ್ತು ಟೊಮೇಟೊವನ್ನು  ಸೌಟಿನಿಂದ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ. ಸಾರು ಕುದಿಯುವಾಗ ಜೀರಿಗೆ-ಮೆಣಸಿನ ಪುಡಿ ಹಾಕಿ. ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಹಾಕಿ, ಸ್ವಲ್ಪ ಕುದಿಸಿ. ತುಪ್ಪ, ಇಂಗು, ಸಾಸಿವೆ, ಅರಿಶಿಣ ಹಾಕಿ ಒಗ್ಗರಣೆ ಕೊಡಿ. ಕೊನೆಯಲ್ಲಿ  ಲಿಂಬೆ ರಸ ಹಾಕಿ.

2.    ಹುರುಳಿ ಕಾಳು ಸಾರು
ಬೇಕಾಗುವ ಸಾಮಗ್ರಿ:
ಹುರುಳಿ ಕಾಳು- 1 ಕಪ್‌, ಜೀರಿಗೆ- 1/2 ಚಮಚ, ಸಾಸಿವೆ- 1/2 ಚಮಚ, ಅರಿಶಿಣ-ಸ್ವಲ್ಪ, ಬೆಳ್ಳುಳ್ಳಿ-6, ಕರಿಬೇವು-10 ಎಸಳು, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹುಣಸೆ ರಸ- ರುಚಿಗೆ ತಕ್ಕಷ್ಟು, ಅಚ್ಚ ಖಾರದ ಪುಡಿ- ರುಚಿಗೆ ತಕ್ಕಷ್ಟು, ಸಾರಿನ ಪುಡಿ- 1 ಚಮಚ,  ಎಣ್ಣೆ,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ.

ಮಾಡುವ ವಿಧಾನ: ಹುರುಳಿ ಕಾಳನ್ನು ಕುಕ್ಕರ್‌ನಲ್ಲಿ ಬೇಯಲು ಇಡಿ. ಕಾಳು ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವುದದರಿಂದ, 5 -6 ಸೀಟಿ ಕೂಗಿಸಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಸ್ವಲ್ಪ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ, ಫ್ರೈ ಮಾಡಿ. ನಂತರ, ಕರಿಬೇವು, ಅಚ್ಚ ಖಾರದ ಪುಡಿ ಮತ್ತು ಸಾರಿನ ಪುಡಿ ಹಾಕಿ. ಆ ಮಿಶ್ರಣಕ್ಕೆ ಮೊದಲೇ ಬೇಯಿಸಿದ ಹುರುಳಿ ಕಾಳಿನ ನೀರನ್ನು ಮಾತ್ರ ಹಾಕಿ. (ಹುರುಳಿ ಕಾಳು ಮತ್ತು ನೀರನ್ನು ಬೇರೆ ಮಾಡಿ) ಹುರುಳಿ ಕಾಳಿನ ಗಟ್ಟಿ ಸಾರು ಬೇಕಿದ್ದರೆ, ಬೆಂದ ಹುರುಳಿ ಕಾಳನ್ನು ಮಿಕ್ಸಿಯಲ್ಲಿ ರುಬ್ಬಿ ಹಾಕಬಹುದು. ನಂತರ, ಹುಣಸೆ ರಸ, ಉಪ್ಪು, ಬೆಲ್ಲ ಎಲ್ಲ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಂದೆರಡು ನಿಮಿಷ ಕುದಿಸಿದರೆ ಹುರುಳಿ ಕಾಳಿನ ಸಾರು ರೆಡಿ.

Advertisement

3.    ಹುಣಸೆ ಸಾರು
ಬೇಕಾಗುವ ಸಾಮಗ್ರಿ:
ಲಿಂಬೆ ಗಾತ್ರದ ಹುಣಸೆ ಹಣ್ಣು, ಸಮ ಪ್ರಮಾಣದ ಬೆಲ್ಲ, ಅಚ್ಚ ಖಾರದ ಪುಡಿ,  1 ಚಮಚ ತುಪ್ಪ, 1 ಚಮಚ ಜೀರಿಗೆ, 1/2 ಚಮಚ ಸಾಸಿವೆ, 5-6 ಎಸಳು ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಚಿಟಿಕೆ ಇಂಗು, ಎಣ್ಣೆ. 

ಮಾಡುವ ವಿಧಾನ:
ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜೀರಿಗೆ, ಇಂಗನ್ನು ಹಾಕಿ, ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ. ನಂತರ ಅಚ್ಚ ಖಾರದ ಪುಡಿ, ಅರ್ಧ ಕಪ್‌ ನೀರು ಹಾಕಿ ಕುದಿಯಲು ಇಡಿ. ಕುದಿಯಲು ಶುರುವಾದಾಗ ಹುಣಸೆ ರಸ ಹಾಗೂ ಬೆಲ್ಲ ಹಾಕಿ.ನಂತರ ಕೊತ್ತಂಬರಿ ಸೊಪ್ಪು ಹಾಕಿ, ಎರಡು ನಿಮಿಷ ಕುದಿಸಿ. ಈ ಹುಣಸೆ ಸಾರನ್ನು ಸೂಪ್‌ನಂತೆಯೂ ಸವಿಯಬಹುದು.

4.    ತೊಗರಿ ಬೇಳೆ ಸಾರು    
ಬೇಕಾಗುವ ಸಾಮಗ್ರಿ:
ತೊಗರಿ ಬೇಳೆ- 1/2 ಕಪ್‌, ಟೊಮೇಟೊ-2, ಎಣ್ಣೆ -1 ಚಮಚ, ಅರಿಶಿಣ- ಚಿಟಿಕೆ, ಸಾರಿನ ಪುಡಿ- 1 ಚಮಚ, ಉಪ್ಪು, ಬೆಲ್ಲ-ರುಚಿಗೆ ತಕ್ಕಷ್ಟು, ಹುಣಸೆ ರಸ -2 ಚಮಚ, ಕರಿಬೇವು-6 ಎಸಳು, ಕೊತ್ತಂಬರಿಸೊಪ್ಪು-ಸ್ವಲ್ಪ, ಲಿಂಬೆ ಹಣ್ಣು- ½, ತುಪ್ಪ- 1 ಚಮಚ, ಜೀರಿಗೆ- 1/2 ಚಮಚ, ಸಾಸಿವೆ- 1/2ಚಮಚ, ಇಂಗು- ಚಿಟಿಕೆ.

ಮಾಡುವ ವಿಧಾನ: ಮೊದಲು ತೊಗರಿ ಬೇಳೆ ಮತ್ತು ಟೊಮೇಟೊವನ್ನು ಬೇಯಿಸಿ. ಬೆಂದ ನಂತರ, ಟೊಮೇಟೊವನ್ನು, ಬೇಳೆ ಜೊತೆಗೆ ಸೇರಿಸಿ ಚೆನ್ನಾಗಿ ಕಿವುಚಿ, ಮಿಶ್ರಣ ಮಾಡಿ. ಈಗ ಅದನ್ನು ಮೀಡಿಯಂ ಉರಿಯಲ್ಲಿ ಸ್ಟೌ ಮೇಲೆ ಇಡಿ. ನಂತರ ಹುಣಸೆ ರಸ, ಬೆಲ್ಲ, ಉಪ್ಪು, ಕರಿಬೇವು, ಸಾರಿನ ಪುಡಿ ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ಕುದ್ದ ನಂತರ ಕೊತ್ತಂಬರಿ ಸೊಪ್ಪು ಹಾಕಿ, ಒಲೆಯಿಂದ  ಇಳಿಸಿ. ಸಾರಿನ ರುಚಿ ಹೆಚ್ಚಿಸಲು ಲಿಂಬೆ ರಸ ಸೇರಿಸಿ. ಇಂಗಿನ ಸಾಸಿವೆ ಕೊಡಿ. 

-ಪ್ರೇಮಾ ಲಿಂಗದಕೋಣ

Advertisement

Udayavani is now on Telegram. Click here to join our channel and stay updated with the latest news.

Next