ಬೆಂಗಳೂರು: ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಮಗುವಿನ ಆರೈಕೆ ಕೊಠಡಿಗಳು ಬರಲಿವೆ. ಪ್ರಸ್ತುತ ಬಹುತೇಕ ಬಸ್ ನಿಲ್ದಾಣಗಳಲ್ಲಿ ಸಮರ್ಪಕ ವಿಶ್ರಾಂತಿ ಕೊಠಡಿಗಳೂ ಇಲ್ಲ. ಇದ್ದರೂ ಮಗುವಿನ ಆರೈಕೆಗಾಗಿ ಪ್ರತ್ಯೇಕ ಕೊಠಡಿಗಳಿಲ್ಲ.
ಆದ್ದರಿಂದ ಸರ್ಕಾರ ತಾಲ್ಲೂಕುಮಟ್ಟದಿಂದ ಹಿಡಿದು ಎಲ್ಲ ನಿಲ್ದಾಣಗಳಲ್ಲಿ ಈ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. 2019-20ನೇ ಸಾಲಿಗೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ 3,544 ವಿವಿಧ ಮಾದರಿಯ ಬಸ್‌ಗಳನ್ನು ಸೇರ್ಪಡೆಗೊಳಿಸಲು ಹಾಗೂ ಹೊಸದಾಗಿ 44 ಬಸ್ ನಿಲ್ದಾಣ ಮತ್ತು 10 ಹೊಸ ಬಸ್ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ರಸ್ತೆ ಸುರಕ್ಷತೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಾವಣಗೆರೆ, ಹೊಸಕೋಟೆ, ಮತ್ತು ಮದ್ದೂರು ನಗರಗಳಲ್ಲಿ ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಉಚಿತ ಬಸ್ ಪಾಸ್ ಇಲ್ಲ: ರಾಜ್ಯದ ವಿದ್ಯಾರ್ಥಿಗಳಿಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲೂ ಉಚಿತ ಬಸ್ ಪಾಸ್ ಭಾಗ್ಯ ಇಲ್ಲವಾಗಿದೆ. ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಿದ್ದ ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ಘೋಷಿಸಿದ್ದರು.
ನಂತರ ಶೈಕ್ಷಣಿಕ ವರ್ಷ ಮುಗಿದರೂ ಬಸ್ ಪಾಸ್ ಬರಲಿಲ್ಲ. ಈಗ 2019-20ರ ಬಜೆಟ್‌ನಲ್ಲೂ ಈ ಬಗ್ಗೆ ಪ್ರಸ್ತಾಪ ಆಗಿಲ್ಲ. ಹಾಗಾಗಿ, ಈಗಾಗಲೇ ಇರುವ ರಿಯಾಯ್ತಿ ಪಾಸಿಗೆ ವಿದ್ಯಾರ್ಥಿಗಳು ತೃಪ್ತಿಪಟ್ಟುಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಭಾಗ್ಯ ಮುಂದುವರಿಯಲಿದೆ.
ಸಿಗದ ವಿನಾಯ್ತಿ; ನಿಗಮಗಳಿಗೆ ನಿರಾಸೆ: ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳ ನೆರವಿಗೂ ಸರ್ಕಾರ ಧಾವಿಸಿಲ್ಲ. ರಸ್ತೆ ತೆರಿಗೆ ಮತ್ತು ಡೀಸೆಲ್ ಮೇಲಿನ ಸುಂಕದಿಂದ ವಿನಾಯ್ತಿ ನೀಡುವಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ಮನವಿ ಮಾಡಿದ್ದವು. ಇದರಿಂದ 500 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಹಾಗಾಗಿ, ನಿಗಮಗಳಿಗೆ ಇದು ನಿರಾಸೆ ಮೂಡಿಸಿದೆ.