ವರದಿ : ಮಹಾದೇವ ಪೂಜೇರಿ
ಚಿಕ್ಕೋಡಿ: ಕಳೆದ 2019ರ ಭೀಕರ ಪ್ರವಾಹ ಮತ್ತು ಕೊರೊನಾದ ಎರಡು ಲಾಕಡೌನ್ ನೋವು ಮಾಸುವ ಮುನ್ನವೇ ಮತ್ತೆ ಪ್ರಸಕ್ತ ವರ್ಷದಲ್ಲಿ ಪ್ರವಾಹದಿಂದ ಮನೀ..ಬೆಳಿ ಹಾಳಾಗಿ ಹೋಯಿತು. ಪ್ರವಾಹದಿಂದ ನಮ್ಮ ಮಗ್ಗಲು ಮುರಿದು ಹೋಗಿದೆ. ಕೃಷ್ಣಾ ನದಿ ಭೀಕರ ಪ್ರವಾಹದಲ್ಲಿ ನಮ್ಮ ಬದುಕು ಕೊಚ್ಚಿ ಹೋಗಿದೆ. ಈಗ ಪ್ರವಾಹ ಕಡಿಮೆಯಾದ ಮೇಲೆ ಗ್ರಾಮಸ್ಥರ ನೋವಿನ ನುಡಿಗಳಿವು.
ಹೌದು…ಕೃಷ್ಣಾ ನದಿ ಒಡಲಿನ ಚಿಕ್ಕೋಡಿ ತಾಲೂಕಿನ ಯಡೂರ, ಚೆಂದೂರ, ಮಾಂಜರಿ, ಅಂಕಲಿ ಗ್ರಾಮಗಳು ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿವೆ. ಕಳೆದ ಒಂದು ವಾರದ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಕೊಯ್ನಾ ಹಾಗೂ ವಿವಿಧ ಜಲಾಶಯಗಳಿಂದ ಹರಿದು ಬಂದಿರುವ ಅಪಾರ ಪ್ರಮಾಣದ ನೀರಿನಿಂದ ಕೃಷ್ಣಾ ನದಿಯು ತೀರದ ಗ್ರಾಮಗಳಿಗೆ ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಿರಾಶ್ರಿತರು ಮರಳಿ ಸ್ವಗ್ರಾಮಗಳಿಗೆ ತೆರಳಿ ಪ್ರವಾಹದಿಂದ ಉಂಟಾದ ಹಾನಿ ಕಂಡು ಅತೀ ನೋವಿನಿಂದ ಹೇಳಿದ ಮಾತುಗಳು ಹೃದಯಕ್ಕೆ ತಟ್ಟಿದಂತಿದ್ದವು.
ಪ್ರತಿ ವರ್ಷ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಆಗುತ್ತದೆ. ನದಿಗಳು ಅಪಾಯ ಮಟ್ಟ ಮೀರಿ ಹರಿದು ನಂತರ ಕಡಿಮೆ ಆಗುತ್ತದೆ ಅಂತ ಅನಕೊಂಡಿದ್ದೇವು. ಆದರೆ ನಮ್ಮ ಬದುಕಿಗೆ ದೇವರು ತುಂಬಾ ಮೋಸ ಮಾಡಿದ್ದಾನೆ. ಕಳೆದ 2005 ಮತ್ತು 2006, 2019 ಮತ್ತು ಈ ವರ್ಷದ ಪ್ರವಾಹಕ್ಕೆ ನಮ್ಮ ಬದುಕು ಮೂರಾಬಟ್ಟೆಯಾಗಿ ಹೋಯಿತು. ಎರಡು ವರ್ಷದ ಹಿಂದೆ ಆದ ಹಾನಿ ಇಂದಿನವರೆಗೂ ಮೆರೆಯಲಿಕ್ಕೆ ಆಗಿಲ್ಲ. ಆದರೆ ಈ ರೀತಿ ಪ್ರವಾಹ ಬಂದು ನಮ್ಮ ಹೊಟ್ಟೆ ಮೇಲೆ ಕಲ್ಲು ಹಾಕುತ್ತಿದ್ದರೆ ನಾವು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ ಎಂದು ಪ್ರವಾಹ ಸಂತ್ರಸ್ತ ಡಿ.ಕೆ.ಉಪ್ಪಾರ ಬಹಳ ನೋವಿನಿಂದ ಪ್ರಶ್ನಿಸಿದರು.
ಕೃಷ್ಣಾ ನದಿ ದಡದ ಗ್ರಾಮಗಳು ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಗೊಂಡಿವೆ. ಕೆಲ ಮನೆಗಳು ಧರೆಗೆ ಉರುಳಿದರೆ ಕೆಲವು ಮನೆಗಳಿಗೆ ಹಾನಿಯಾಗಿದೆ. ಮನೆಗಳಲ್ಲಿ ನೀರು ಹೋಗಿ ಮನೆ ತುಂಭಾ ಕೆಸರು, ರಾಡಿ ಆವರಿಸಿಕೊಂಡಿದೆ. ಮನೆಗಳಲ್ಲಿರುವ ದಿನಸಿ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ. ಕಾಳು ಕಡಿಗಳು ಮೊಳಕೆ ಒಡೆದಿವೆ. ಬಟ್ಟೆ, ಬರೆಗಳು ಗಬ್ಬು ವಾಸನೆಯಿಂದ ಕೂಡಿವೆ. ಗ್ರಾಮದ ರಸ್ತೆಗಳೆಲ್ಲ ಹಾಳಾಗಿವೆ, ಗಟಾರ ಕಿತ್ತು ಹೋಗಿವೆ. ಗ್ರಾಮದಲ್ಲೆಲ್ಲ ಗಬ್ಬು ವಾಸನೆ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಸಂತ್ರಸ್ತರು ಮನೆಗೆ ಮರಳಿ ಮನೆಗಳನ್ನು ಸ್ವತ್ಛ ಮಾಡುವಲ್ಲಿ ನಿರತರಾಗಿದ್ದಾರೆ. ಮತ್ತೂಮ್ಮೆ ಹೊಸ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಹೃದಯ ಕಲಕುವಂತಿವೆ.