ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ತಾಲೂಕಿನ ತಿರುಗುಣ ಗ್ರಾಮದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ನಿರ್ಮಿಸಿದ್ದ ಢಾಮಾರು ರಸ್ತೆ ಕಿತ್ತು ಬಂದಿರುವುದರಿಂದ ಟಾರ್ ಕಂಡು ಜನರು ಆಕ್ರೋಶಗೊಂಡಿದ್ದಾರೆ.
ಮುಂಜಾನೆ ಮಳೆಯ ನಡುವೆ ಟಾರ್ ಕಿತ್ತು ಹೋಗಿದ್ದು ಕಂಡು ಒಂದು ಕೋಟಿ ವೆಚ್ಚದ ಕಳಪೆ ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ಗೊಂಡಿದ್ದಾರೆ.
ರಸ್ತೆ ನಿರ್ಮಾಣಕ್ಕಾಗಿ ರೈತರು ತಮ್ಮ ಸ್ವಂತ ಜಮೀನುಗಳನ್ನು ಬಿಟ್ಟುಕೊಟ್ಟಿದ್ದು,ಇದೀಗ ಎರಡೇ ತಿಂಗಳಲ್ಲಿ ಕಳಪೆ ರಸ್ತೆ ಕಂಡು ಗುತ್ತಿಗೆದಾರ ಹುಲಿಯಪ್ಪಗೌಡ ಎಂಬವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತೊಂದೆಡೆ ಕಡೂರು ತಾಲೂಕಿನ ನಿಡುವಳ್ಳಿ ಗ್ರಾಮದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಸುಮಾರು ಹತ್ತಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ದಿಢೀರ್ ಮಳೆಯಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಯಗಿವೆ.
ಆ ಪ್ರದೇಶದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಮಳೆ ನೀರು ನುಗ್ಗಿದ್ದು, ಮಳೆಯಿಂದ ರಾತ್ರಿಯಿಡೀ ಜನರ ಪರದಾಡುವಂತಾಗಿತ್ತು. ಆ ಬಳಿಕ ಸೂಕ್ತ ಚರಂಡಿ ವ್ಯವಸ್ಥೆಗಾಗಿ ಅಧಿಕಾರಿಗಳ ಸೂಚನೆ ಮೇರೆಗೆ ಮುಖ್ಯರಸ್ತೆಯನ್ನೇ ಅಗೆದು ಹಾಕಲಾಗಿದೆ ಎಂಬ ಮಾಹಿತಿ ಇದೆ.