Advertisement

ಎಸ್ಸೆಸ್ಸೆಲ್ಸಿ: ಪರೀಕ್ಷಾ ಪಾವಿತ್ರ್ಯತೆ ಕಾಪಾಡಿ

01:19 PM Jun 08, 2020 | Team Udayavani |

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದರ ಜೊತೆಗೆ ಕೋವಿಡ್ ಸೋಂಕು ಹರಡದಂತೆ ಅಗತ್ಯ ಮನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಮಲೆನಾಡು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಆಯೋಜಿಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಹಾಗೂ ಶಾಲಾ ಶಿಕ್ಷಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೂ.25 ರಿಂದ ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ 13,224 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಜಾಗರೂಕರಾಗಿ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ತಿಳಿಸಿದರು.

ಕೋವಿಡ್ ಸೋಂಕು ದೇಶದೆಲ್ಲೆಡೆ ಹರಡುತ್ತಿರುವ ಹಿನ್ನೆಲೆ ಪರೀಕ್ಷಾ ಕೊಠಡಿಯಲ್ಲಿ ಹಾಗೂ ಪರೀಕ್ಷಾ ಕೇಂದ್ರದ ಹೊರಗಡೆ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಗುಂಪು-ಗುಂಪಾಗಿ ಸೇರದಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರವೇ ಆದೇಶಿಸಿದ್ದು, ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ಬಸ್‌ ಹೋಗಲು ರಸ್ತೆ ವ್ಯವಸ್ಥೆ ಇಲ್ಲದ ಭಾಗಗಳಲ್ಲಿ ಖಾಸಗಿ ವಾಹನ, ಜೀಪ್‌, ವ್ಯಾನ್‌ ಮುಂತಾದವುಗಳ ಮೂಲಕ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವಂತೆ ಹೇಳಿದರು.

ಸೋಂಕು ನಿವಾರಣೆಗೆ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸೋಂಕು ನಿಯಂತ್ರಿತ ಔಷಧ ಸಿಂಪಡನೆ ಮಾಡಬೇಕು. ಸ್ಯಾನಿಟೈಸರ್‌ ಹಾಗೂ ಉತ್ತಮ ಮಾಸ್ಕ್ಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಗೆ ಶೌಚಾಯಗಳನ್ನು ಸ್ವಚ್ಚವಾಗಿಡಬೇಕು. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ಕಂಡು ಬಂದಲ್ಲಿ ಆ ಪರೀಕ್ಷಾ ಕೇಂದ್ರವನ್ನೇ ರದ್ದುಗೊಳಿಸಲಾಗುವುದು. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕೆಂದು ತಿಳಿಸಿದರು.

ದೂರದ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದಲ್ಲಿ ಕೆಲವೊಂದು ವಿದ್ಯಾರ್ಥಿ ನಿಲಯಗಳನ್ನು ಗುರುತಿಸಲಾಗಿದ್ದು, ಅಲ್ಲಿ 300 ರಿಂದ 400 ವಿದ್ಯಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲೂ ಸಮಸ್ಯೆಗಳು ಉದ್ಭವವಾಗದಂತೆ ಎಚ್ಚರ ವಹಿಸಬೇಕು ಎಂದರು.

Advertisement

ಪ್ರೌಢಶಾಲಾ ಸಹಶಿಕ್ಷಕರಿಗೆ ನೀಡುವ 400ರೂ. ಮಾಸಿಕ ಭತ್ಯೆಯನ್ನು ಪ್ರೌಢಶಾಲಾ ಮುಖ್ಯಶಿಕ್ಷಕರಿಗೂ ನೀಡುವಂತೆ ಪ್ರೌಢಶಾಲಾ ಮುಖ್ಯಶಿಕ್ಷಕ ಸಂಘದಿಂದ ವಿಧಾನ ಪರಿಷತ್‌ ಶಾಸಕರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕ ಸಿ.ನಂಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ ವೀರೇಶ್‌, ಶಿಕ್ಷಣಾಧಿಕಾರಿ ಜಯಣ್ಣ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ಚಂದ್ರನಾಯ್ಕ, ಜಿಲ್ಲೆಯ ಎಲ್ಲಾ ತಾಲೂಕುಗಳ ಬಿಇಒ ಸೇರಿದಂತೆ 58 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಸಹಶಿಕ್ಷಕರು ಉಪಸ್ಥಿತರಿದ್ದರು.

ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಅನೇಕ ಬಾರಿ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಆದರೆ ರಾಜ್ಯದಲ್ಲಿ ದಿನೇ ದಿನೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸದ್ಯಕ್ಕೆ ಶಾಲೆಗಳ ಪುನರಾರಂಭ ಆಗುವುದಿಲ್ಲ. ಶಾಲೆಗಳು ಪ್ರಾರಂಭವಾದರೆ ಪೋಷಕರೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಆರೋಗ್ಯ ಇಲಾಖೆಯ ಮುಂದಿನ ಆದೇಶದ ಮೇರೆಗೆ ಶಾಲೆಗಳು ಪ್ರಾರಂಭಿಸುವ ಬಗ್ಗೆ ತಿಳಿಸಲಾಗುವುದು.
ಎಸ್‌.ಎಲ್‌. ಭೋಜೇಗೌಡ,
ಮೇಲ್ಮನೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next