Advertisement

ಗುರಿಯತ್ತ ಯಶಸ್ವಿ ಹೆಜ್ಜೆ ಹಾಕಿದ ಆತ್ಮತೃಪ್ತಿ

05:03 PM Dec 25, 2019 | |

ಚಿಕ್ಕಮಗಳೂರು: ಸಚಿವನಾಗಿ ನೂರು ದಿನದಲ್ಲಿ ಮಾಡಿದ ಕೆಲಸಗಳು ಸಾಧನೆಯಲ್ಲದಿದ್ದರೂ ಗುರಿಯತ್ತ ಯಶಸ್ವಿ ಹೆಜ್ಜೆ ಹಾಕಿದ ಆತ್ಮ ತೃಪ್ತಿ ಇದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಮತ್ತು ಸಕ್ಕರೆ ಖಾತೆ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸಚಿವರಾಗಿ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಕಲ್ಪ ಕಿರುಹೊತ್ತಿಗೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಚಿವನಾಗಿ ಅಧಿಕಾರ ವಹಿಸಿಕೊಂಡ 10
ದಿನಗಳಲ್ಲೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ರೂಪಿಸಲಾಗಿದೆ. ನೂರು ದಿನದಲ್ಲಿ ಮಾಡಿದ ಕೆಲಸಗಳು ಸಾಧನೆಯಲ್ಲ. ಯೋಜನೆಗಳು ಅನುಷ್ಠಾನಗೊಂಡಾಗ ಅದು ಸಾಧನೆಯಾಗುತ್ತದೆ. ಆದರೆ, ಆ ಗುರಿಯತ್ತ ಯಶಸ್ವಿ ಹೆಜ್ಜೆ ಹಾಕಿದ್ದೇನೆ ಎಂದರು.

ಅತಿವೃಷ್ಟಿ ಪ್ರದೇಶಗಳ ರಸ್ತೆ, ಸೇತುವೆ ನಿರ್ಮಾಣಕ್ಕೆ 82ಕೋಟಿ, ತುರ್ತು ಪರಿಹಾರಕ್ಕೆ 5ಕೋಟಿ, ಮನೆಗಳ ನಿರ್ಮಾಣಕ್ಕೆ 25ಕೋಟಿ, ಬೆಳೆನಷ್ಟ ಪರಿಹಾರಕ್ಕೆ 44 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. 180 ಹಳ್ಳಿಗಳ ಕೆರೆ ತುಂಬಿಸುವ ಅಂದಾಜು 1,350 ಕೋಟಿ ಮೊತ್ತದ ಗೊಂದಿಹಳ್ಳ ಯೋಜನೆಗೆ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮದ ಸಭೆಯಲ್ಲಿ ಅನುಮೋದನೆ ಪಡೆದಿದ್ದು, ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕರಗಡ ಯೋಜನೆ: ಕರಗಡ ಮೊದಲ ಮತ್ತು ಎರಡನೇ ಹಂತದ ಯೋಜನೆ ತಯಾರಿಸಿದ್ದು, ಶೀಘ್ರ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ಬೈರಾಪುರ ಪಿಕಪ್‌ಗೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ 150 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲು ಮಂಜೂರಾತಿ ಸಿಕ್ಕಿದೆ. ಗ್ರಾಮೀಣ ರಸ್ತೆ, ಸರ್ಕಾರಿ ಕಟ್ಟಡಗಳ ಅಭಿವೃದ್ಧಿಗೆ 79.90 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ 7 ತಾಲೂಕುಗಳ 227 ಗ್ರಾಪಂಗಳ 1018 ಗ್ರಾಮಗಳಿಗೆ 59.32 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಪಿಎಂಎಸ್‌ವೈನಲ್ಲಿ 19.80 ಕೋಟಿ ನಿಗದಿಸಲಾಗಿದೆ. 102.50 ಕೋಟಿ ವೆಚ್ಚದ ಅಮೃತ್‌ ಯೋಜನೆ ನಡೆಯುತ್ತಿದೆ. 77 ಲಕ್ಷ ವೆಚ್ಚದಲ್ಲಿ 2020ರ ಮಾರ್ಚ್‌ನಲ್ಲಿ ಜಿಲ್ಲಾ ಉತ್ಸವ, ಜನಪದ ಜಾತ್ರೆ ಆಯೋಜಿಸಲಾಗುವುದು ಎಂದರು.

Advertisement

ಸ್ಥಳೀಯ ಮೂಲಸೌಲಭ್ಯಕ್ಕೆ 21 ಕೋಟಿ ಬಿಡುಗಡೆಯಾಗಿದೆ. 25 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿದೆ. ಮಾಗಡಿ ಕೆರೆ ಏರಿ ಅಭಿವೃದ್ಧಿಯನ್ನು 4.95 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ 67 ಕೋಟಿ ಬಿಡುಗಡೆ ಮಾಡಿದ್ದು, ಚಿಕ್ಕಮಗಳೂರು, ಕಡೂರಿನಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಾಣಕ್ಕೆ ತಲಾ 4.95 ಮತ್ತು 4 ಕೋಟಿ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಮಿನಿ ವಿಧಾನಸೌಧದ ಮುಂದುವರಿದ ಕಾಮಗಾರಿಗೆ 5 ಕೋಟಿ ಬಿಡುಗಡೆಯಾಗಿದೆ. ರಾಜ್ಯ ಹೆದ್ದಾರಿಗಳ ದುರಸ್ತಿ, ನಿರ್ವಹಣೆಗೆ 31.12 ಕೋಟಿ, ಜಲಶಕ್ತಿ ಅಭಿಯಾನದಡಿ ಕಡೂರು ತಾಲೂಕಿಗೆ 77 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಮಳೆನೀರು ಸಂಗ್ರಹಕ್ಕೆ 105 ಕೋಟಿಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಜಲಾಮƒತ ಯೋಜನೆಗೆ 389.77 ಲಕ್ಷ, ಪರಿಶಿಷ್ಟ ಜಾತಿ ಕಾಲೊನಿಗಳ ಅಭಿವೃದ್ಧಿಗೆ 6 ಕೋಟಿ ಬಿಡುಗಡೆಯಾಗಿದೆ ಎಂದರು.

ಐಡಿಎಸ್‌ಜಿ ಕಾಲೇಜು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 770 ಲಕ್ಷ, ಸ್ನಾತಕೋತ್ತರ ವಿಭಾಗದ ಕೊಠಡಿ ನಿರ್ಮಾಣಕ್ಕೆ 85 ಲಕ್ಷ ಬಿಡುಗಡೆಯಾಗಿದೆ. ಸಖರಾಯಪಟ್ಟಣದಲ್ಲಿ 3.50 ಕೋಟಿ ವೆಚ್ಚದಲ್ಲಿ ಐಟಿಐ ಕಾಮಗಾರಿ ನಡೆಯುತ್ತಿದೆ. ಜಿಲ್ಲೆಯ ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ 1 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಪಿ.ಕುಮಾರ ಸ್ವಾಮಿ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತ ಅನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next