Advertisement

ಅರ್ಧಂಬರ್ಧ ರಸ್ತೆ ಕಾಮಗಾರಿಗೆ ಆಕ್ರೋಶ

03:22 PM Mar 16, 2020 | |

ಚಿಕ್ಕಮಗಳೂರು: ಆರು ಕಿ.ಮೀ ರಸ್ತೆ ಕಾಮಗಾರಿಗೆ 6.73 ಕೋಟಿ ರೂ. ಬಿಡುಗಡೆಯಾಗಿದ್ದರೂ ಕಳೆದೊಂದು ವರ್ಷದಲ್ಲಿ ಕೇವಲ ಮೂರು ಕಿ.ಮೀ ರಸ್ತೆ ಡಾಂಬರೀಕರಣ ನಡೆಸಿ ಉಳಿದ ರಸ್ತೆಗೆ ಜೆಲ್ಲಿ ಹಾಕಿ ಕೈಬಿಟ್ಟಿದ್ದಾರೆ ಎಂದು ಮೂಡಿಗೆರೆ ತಾಲೂಕಿನ ಹೊರನಾಡು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿನಿಂದ ಶೃಂಗೇರಿ ಸಂಪರ್ಕ ಮಾರ್ಗದ ಹೊರನಾಡಿನಿಂದ ಬಲಿಗೆ ಕವೆ ಗ್ರಾಮದ ವರೆಗಿನ ಆರು ಕಿ.ಮೀ. ರಸ್ತೆ ಕಾಮಗಾರಿಗೆ 6 ಕೋಟಿ 73 ಲಕ್ಷ ರೂ. ಬಿಡುಗಡೆಯಾಗಿದ್ದು, 2019ರ ಮಾರ್ಚ್‌ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ.

2020ರ ಮಾರ್ಚ್‌ ತಿಂಗಳು ಬಂದರೂ ಮೂರು ಕಿ.ಮೀ ರಸ್ತೆ ಡಾಂಬರೀಕರಣ ಮಾತ್ರ ಮಾಡಲಾಗಿದ್ದು, ಉಳಿದ ಮೂರು ಕಿ.ಮೀ ಜಲ್ಲಿ ಕಲ್ಲು ಹಾಕಿ ಬಿಡಲಾಗಿದೆ. ಇನ್ನೂ ಮೂರು ಕಿ.ಮೀ ರಸ್ತೆ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು ಡಾಂಬರ್‌ ಕಿತ್ತು ಬರುತ್ತಿದೆ ಎಂದು ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ಕಡಿದಾದ ತಿರುವುಗಳಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜೆಲ್ಲಿ ಹಾಕಿ ಡಾಂಬರೀಕರಣ ನಡೆಸದಿರುವುದರಿಂದ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಈ ಸಂಬಂಧ ಶಾಸಕರು, ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಈ ಮಾರ್ಗದ ಏಳೆಂಟು ಕುಗ್ರಾಮಗಳು ಇದೇ ರಸ್ತೆ ಮಾರ್ಗವನ್ನು ಆಶ್ರಯಿಸಿವೇ. ರಸ್ತೆ ನಿರ್ಮಾಣಕ್ಕೆ ಕೈಹಾಕಿದ ಸರ್ಕಾರ ಅರ್ಧಂಬರ್ಧ ಕೆಲಸ ಮಾಡಿ ಕೈಬಿಟ್ಟಿದೆ. ಈ ರಸ್ತೆಯಲ್ಲಿ ಬೀಳ್ಳೋರು-ಏಳ್ಳೋರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದೊಂದು ವರ್ಷದಿಂದ ಜಲ್ಲಿ ಕಲ್ಲು ರಸ್ತೆಯ ಮೇಲೆ ಸರ್ಕಸ್‌ ಮಾಡಿ ವಾಹನಗಳನ್ನು ಓಡಿಸಿರುವ ಜನರು ಹೈರಾಣಾಗಿ ಹೋಗಿದ್ದು ಕಂಟ್ರಾಕ್ಟರ್‌ ರಸ್ತೆಗೆ ಜಲ್ಲಿ ಹಾಕಿ 15 ದಿನ ಬರ್ತೀನಿ ಅಂತ ಹೋದವರು ಇದುವರೆಗೂ ಬಂದಿಲ್ಲ ಎಂದು ಆರೋಪಿಸಿದ್ದಾರೆ.

Advertisement

ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದರಿಂದ ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಬಸ್‌ ಸಂಚಾರವನ್ನು ನಿಲ್ಲಿಸಲಾಗಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಆಟೋದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಜಲ್ಲಿ ರಸ್ತೆಯಲ್ಲಿ ಬ್ಯಾಲೆನ್ಸ್‌ ಸಿಗದೇ ಎದ್ದುಬಿದ್ದು ಹೋಗುವಂತಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಈಗ ರಜೆ ಸಿಕ್ಕಿದೆ. ಆದರೆ ಕಳೆದ ಕೆಲ ದಿನಗಳ ಹಿಂದೇ ಪೋಷಕರು ತಮ್ಮ ದ್ವಿಚಕ್ರವಾಹನದಲ್ಲಿ ಶಾಲೆಗೆ ಬಿಡುವಂತ ಪರಿಸ್ಥಿತಿ ಎದುರಾಗಿತ್ತು.

ಸ್ಥಳೀಯ ಶಾಸಕರು ಅ ಧಿಕಾರಿಗಳು ತಕ್ಷಣ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥ ವಿಜಯ ಪ್ರಸಾದ್‌ ಮನವಿ ಮಾಡಿದ್ದಾರೆ.

ಹೊರನಾಡು ರಸ್ತೆ ಕಾಮಗಾರಿ ನಿಲ್ಲಿಸಿರುವ ಕುರಿತು ದೂರುಗಳು ಬಂದಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಡನೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಎಂ.ಪಿ. ಕುಮಾರಸ್ವಾಮಿ,
ಶಾಸಕರು ಮೂಡಿಗೆರೆ ಕ್ಷೇತ್ರ

ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಇದ್ದ ಬಸ್‌ ನಿಂತಿವೆ. ಸ್ಥಳೀಯರು ಮತ್ತು ಶಾಲಾ ವಿದ್ಯಾರ್ಥಿಗಳು ಆಟೋ, ಜೀಪ್‌ಗ್ಳಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗ ಬಳಸಿ ಶೃಂಗೇರಿಗೆ 32 ಕಿ.ಮೀ ದೂರವಿದ್ದು ಬೇರೆ ದಾರಿ ಬಳಸಿ ಹೋಗುವುದಾದದರೇ 80 ಕಿ.ಮೀ. ಸಾಗಬೇಕಾಗುತ್ತದೇ. ಅ ಧಿಕಾರಿಗಳ ಗಮನಕ್ಕೆ ತಂದರು ಪ್ತಯೋಜನವಾಗುತ್ತಿಲ್ಲ, ಕೆಲ ಅಧಿ ಕಾರಿಗಳನ್ನು ಪ್ರಶ್ನಿಸದರೇ ಉಡಾಫೆ ಉತ್ತರ ನೀಡುತ್ತಾರೆ. ಇನ್ನೇರೆಡು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಅಷ್ಟರೊಳಗೆ ರಸ್ತೆ ಕಾಮಗಾರಿ ಮುಗಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಿ.
ಶರತ್‌, ಸ್ಥಳೀಯ

ರಸ್ತೆ ಕಾಮಗಾರಿ ಅರ್ಧಕ್ಕೆ ಬಿಟ್ಟಿರುವುದರಿಂದ ಹೊರನಾಡು ಶೃಂಗೇರಿ ಕ್ಷೇತ್ರಗಳಿಗೆ ತೆರಳುವ ಪ್ರವಾಸಿಗರಿಗೂ ತೊಂದರೆಯಾಗಿದೆ. ಸ್ಥಳೀಯರು ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next