ಚಿಕ್ಕಮಗಳೂರು: ಲಾಕ್‌ಡೌನ್‌ನಿಂದಾಗಿ ತುರ್ತು ವೈದ್ಯಕೀಯ ಸಂದರ್ಭದಲ್ಲಿ ನೆರೆಯ ಜಿಲ್ಲೆಗೆ ರೋಗಿಗಳನ್ನು ಕರೆದೊಯ್ಯಲು ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಅಂತರ್ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿ ಸಲು ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸಿ.ಟಿ.ರವಿ ಹೇಳಿದರು.
ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಸರ್ವ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುರ್ತು ವೈದ್ಯಕೀಯ ಸಂದರ್ಭದಲ್ಲಿ ನೆರೆಯ ಜಿಲ್ಲೆಗಳಿಗೆ ತೆರಳಲು ಸಮಸ್ಯೆ ಎದುರಾಗುತ್ತಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದಾಗ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಕೆ.ಪಿ.ಅಂಶುಮಂತ್ ವಿಷಯ ಪ್ರಸ್ತಾಪಿಸಿ, ಮಲೆನಾಡಿನ ಭಾಗದ ಜನರು ತುರ್ತು ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ಶಿವಮೊಗ್ಗ, ಮಂಗಳೂರು, ಮಣಿಪಾಲ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುತ್ತಾರೆ. ಆದರೆ, ಲಾಕ್ ಡೌನ್ ಇರುವುದರಿಂದ ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಹೊಗದಂತೆ ಪೊಲೀಸ್ ಸಿಬ್ಬಂಧಿ ತಡೆಯೊಡ್ಡುತ್ತಿದ್ದಾರೆ. ಮತ್ತು ಆ ಜಿಲ್ಲೆಗಳ ಪೊಲೀಸರೂ ಅಡ್ಡಿಪಡಿಸುತ್ತಿದ್ದಾರೆ. ನೆರೆಯ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದರಿಂದ ಸಮಸ್ಯೆ ಪರಿಹಾರವಾಗಲಿದೆ.
ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಕರ್ಫ್ಯೂ ಪಾಸ್ ಬೇಕಾಬಿಟ್ಟಿ ಹಂಚಿರುವುದರಿಂದ ವಾಹನ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ನಕಲಿ ಪಾಸ್ ದಂಧೆ ನಡೆಯುತ್ತಿದೆ ಎಂದರು. ಸಚಿವ ಸಿ.ಟಿ.ರವಿ ಮಾತನಾಡಿ, ಹಾಲು ವಿತರಣೆಗೆ ಯಾವುದೇ ಪೂರ್ವ ಸಿದ್ಧತೆ ಇಲ್ಲದ ಕಾರಣ ಒಂದಿಷ್ಟು ಲೋಪ ಆಗಿದೆ. ಮುಂದೆ ಸರಿಪಡಿಸಲಾಗುವುದು ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಮಾತನಾಡಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ಜಿಲ್ಲೆಗೆ ಬೇಕಾಗುವ ವೆಂಟಿ ಲೇಟರ್ ಶೀಘ್ರವೇ ವ್ಯವಸ್ಥೆ ಮಾಡಬೇಕು. ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಮಾತನಾಡಿ, ಜಿಲ್ಲೆಯಲ್ಲಿ ಅಗತ್ಯವಿರುವ 14,740 ಮಂದಿಗೆ ಮಾತ್ರ ಪಾಸ್‌ಗಳನ್ನು ವಿತರಿಸಲಾಗಿದೆ. ಪಾಸ್ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು. ಎಸ್ಪಿ ಹರೀಶ್ ಪಾಂಡೆ ಮಾತನಾಡಿ, ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಹೊಲಗಳಿಗೆ ಹೋಗಲು ಬರಲು ಬೆಳಗ್ಗೆ 6-9 ಹಾಗೂ ಸಂಜೆ 4-9ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಪಹಣಿಯನ್ನು ರೈತರ ಪಾಸ್ ಎಂದೇ ಪರಿಗಣಿಸಲಾಗುತ್ತಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಕ್ಷಣ ಪಾಸ್ ಗಳನ್ನು ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಕಡೂರು ಶಾಸಕ ಬೆಳ್ಳಿಪ್ರಕಾಶ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ರೈತ ಮುಖಂಡ ಪುಟ್ಟಸ್ವಾಮಿಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯ್‌ಕುಮಾರ್ ಇತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಕಂಡು ಬರದ ಹಿನ್ನೆಲೆಯಲ್ಲಿ ಏ.20ರ ನಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಲಿಕೆಯಾಗುವ ನಿರೀಕ್ಷೆ ಇದೆ. ಸದ್ಯ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ವಿ ಧಿಸಲಾಗಿದೆ. ಸರ್ವ ಪಕ್ಷಗಳ ಸಲಹೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.
ಸಿ.ಟಿ.ರವಿ, ಸಚಿವರು