ಚಿಕ್ಕಮಗಳೂರು: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿದ ಪರಿಣಾಮ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯೊಂದಿಗೆ ಹಸಿರು ವಲಯ ಸ್ಥಾನ ಗಿಟ್ಟಿಸಿಕೊಂಡಿದೆ.
ದೇಶದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೋವಿಡ್ ಸೋಂಕಿನ ಕುರಿತು ಜನರಲ್ಲಿ ಅರಿವು ಮೂಡಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಮೊದಲ ಹಂತದ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಮೊದಲ ಹಂತದ ಲಾಕ್‌ಡೌನ್‌ನನ್ನು ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮ ಕೋವಿಡ್ ಸೋಂಕು ಜಿಲ್ಲೆಯೊಳಗೆ ನುಸುಳದಂತೆ ನೋಡಿಕೊಳ್ಳಲು ಸಾಧ್ಯವಾಗಿದ್ದು, ಎರಡನೇ ಹಂತದ ಲಾಕ್‌ಡೌನ್ ಏ.14 ರಿಂದ ಮೇ 3ರ ಕಟ್ಟುನಿಟ್ಟಾಗಿ ನಿಭಾಯಿಸಿ ಜಿಲ್ಲೆ ಹಸಿರು ವಲಯದ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 17ರವರೆಗೆ ಲಾಕ್‌ಡೌನ್ ವಿಸ್ತರಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೂರನೇ ಹಂತದ ಲಾಕ್ ಡೌನ್‌ಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಲಾಕ್‌ಡೌನ್ ಅವಧಿಯಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಪ್ರಕರಣ ಕಂಡು ಬರದ ಹಿನ್ನೆಲೆಯಲ್ಲಿ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದು, ಎರಡನೇ ಹಂತದ ಲಾಕ್ ಡೌನ್‌ಗೆ ಒಂದಿಷ್ಟು ಸಡಲಿಕೆಯನ್ನು ಸರ್ಕಾರ ಘೋಷಿಸಿತು.
ಎರಡನೇ ಹಂತದ ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಇದ್ದ ನಿರ್ಬಂಧವನ್ನು ಸಡಿಲಗೊಳಿಸಿ ರೈತರು ಕೃಷಿ ಚಟುವಟಿಕೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮೇ17ರವರೆಗೂ ವಿಧಿಸಿರುವ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೃಷಿ ಚಟುವಟಿಕೆಗೆ ಎಂದಿನಂತೆ ನಡೆಯಲಿದೆ. ಮುಂಜಾಗ್ರತಾ ಕ್ರಮ ಕೈಗೊಂಡು ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಮುಂದುವರಿಯಲಿದೆ.
ಜನರ ದಿನಬಳಕೆ ವಸ್ತುಗಳ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಿದ್ದು, ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿರಲಿವೆ. ಕೈಗಾರಿಕೆ, ಉದ್ಯಮ, ಕೃಷಿ ಯಂತ್ರೋಪಕರಣ ಅಂಗಡಿಗಳು, ರಸಗೊಬ್ಬರ ರಾಸಾಯನಿಕ ಔಷಧ ಮಳಿಗೆ, ಬ್ಯಾಂಕ್, ಪೆಟ್ರೋಲ್ ಬಂಕ್, ಔಷಧ ಮಳಿಗೆ, ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಜಿಲ್ಲೆಯೊಳಗೆ ಬಸ್ ಸೇವೆ, ಬಟ್ಟೆ ಅಂಗಡಿ, ಹೋಟೆಲ್ ಉದ್ಯಮ ಪಾರ್ಸಲ್ ಸೇವೆಗೆ ಸೀಮಿತಗೊಳಿಸಿ ಮದ್ಯದಂಗಡಿ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಮುಂಜಾಗ್ರತಾ ಕ್ರಮ ಕೈಗೊಂಡು ಕೆಲಸ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಆಟೋ ಸಂಚಾರ ಇದೆ. ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಟ್ಯಾಕ್ಸಿ, ಚಿತ್ರಮಂದಿರ, ಹೋಮ್ ಸ್ಟೇ, ಮಾಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಸಲೂನ್ ಶಾಪ್, ಶಾಪಿಂಗ್ ಮಾಲ್ ಸೇರಿದಂತೆ ಭಾರೀ ಜನ ಜನಸಂದಣಿ ಕ್ಷೇತ್ರಗಳಿಗೆ ನಿರ್ಬಂ ಧಿಸಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ವಾಹನ ಜಿಲ್ಲೆಯೊಳಗೆ ಪ್ರವೇಶಿಸದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಮುಂದಾಗಲಿದ್ದು, ಜಿಲ್ಲೆಯ ಗಡಿಪ್ರದೇಶದಲ್ಲಿ ಪೊಲೀಸ್ ಇಲಾಖೆ ಇನಷ್ಟು ಬಿಗಿ ಕ್ರಮಗಳಿಗೆ ಮುಂದಾಗಲಿದೆ.
ಮೂರನೇ ಹಂತದ ಲಾಕ್‌ಡೌನ್ ಅವ ಧಿಯಲ್ಲಿ ಕೆಲವು ಸೇವೆಗಳು ದೊರೆಯಲಿದ್ದು, ಪ್ರತಿ ದಿನ ಬೆಳಗ್ಗೆ 7 ರಿಂದ ಸಂಜೆ 7ಗಂಟೆವರೆಗೂ ವ್ಯಾಪಾರ, ವಹಿವಾಟುಗಳಿಗೆ ಅವಕಾಶ
ನೀಡಲಾಗಿದೆ. ಅದರೊಂದಿಗೆ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.