ಚಿಕ್ಕಮಗಳೂರು: ಕನ್ನಡಿಗರು ಮಾತೃ ಭಾಷೆಯನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ತಿಳಿಸಿದರು.
ನಗರದ ಜಯನಗರ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಮತ್ತು ಲೀಲಮ್ಮ ಲೋಕಪ್ಪಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿರುವ ಅತ್ಯಂತ ಶ್ರೀಮಂತ ಭಾಷೆ. ಅನೇಕ ಕಲಾವಿದರು, ಸಾಹಿತಿಗಳು, ಕವಿಗಳು ಉಳಿಸಿ ಬೆಳೆಸಿದ್ದಾರೆ. ಕನ್ನಡವೇ ನಮ್ಮ ಉಸಿರು, ಅದು ನಾಶವಾದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಆಗ ನಾವು ನಮ್ಮತನ ಕಳೆದುಕೊಂಡು ಜಗತ್ತಿನೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಪರಿಸ್ಥಿತಿ ಕೈ ಮೀರುವ ಮುನ್ನ ನಾಡಿನ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಮುಂದಾಗಬೇಕು ಎಂದರು. ಧರ್ಮ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ, ಸಂಸ್ಕೃತಿ ಎಂದರೆ ಭಾಷೆ. ಅದು ಉಳಿದರೆ ಸಾಹಿತ್ಯ ಸಂಸ್ಕೃತಿ ಉಳಿಯುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅಳವಡಿಸಿಕೊಂಡರೆ ಉತ್ತಮ ಮನ್ಯುಷರಾಗಬಹುದು ಎಂದು ಹೇಳಿದರು. ಐಡಿಎಸ್‌ಜಿ ಕಾಲೇಜಿನ ಪ್ರಾಧ್ಯಾಪಕ ಡಾ| ಎಚ್.ಎಂ.ಮಹೇಶ್ ಸಂಸ್ಕಾರ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.
ಉದ್ಯಮಿ ವೈ.ಕೆ.ರಾಜಾನಾಯ್ಕ, ನ್ಯಾಯವಾದಿ ವಿಶ್ವನಾಥ್, ವಿದ್ಯಾರ್ಥಿ ನಿಲಯದ ಪಾಲಕ ಪ್ರಶಾಂತ್ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ನಿಲಯದ ಹಿರಿಯ ಪಾಲಕ ಕುಮಾರಸ್ವಾಮಿ ವಂದಿಸಿದರು.