Advertisement

ನೀರಿಗಾಗಿ ಬಾವಿಗಿಳಿದ ವಡ್ರಾಳ ಜನತೆ

10:27 AM Jan 05, 2019 | Team Udayavani |

ಚಿಕ್ಕೋಡಿ: ಜನವರಿ ಆರಂಭವಾದರೆ ಸಾಕು ಚಿಕ್ಕೋಡಿ ತಾಲೂಕಿನ ಪೂರ್ವ ಭಾಗ ಮತ್ತು ದಕ್ಷಿಣ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ರಾಜ್ಯ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸಹ ಮತ್ತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಚಿಕ್ಕೋಡಿ ತಾಲೂಕು ಬರ ಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾದರೂ ಸಹ ಇಲ್ಲಿನ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕೊರಗು ಅಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.

Advertisement

ಹೌದು‰. ತಾಲೂಕಿನ ವಡ್ರಾಳ ಗ್ರಾಮದ ಜನತಾ ಪ್ಲಾಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಅಲ್ಲಿಯ ನಿವಾಸಿಗಳು 2 ರಿಂದ 3 ಕಿಮೀ ದೂರಕ್ಕೆ ಕ್ರಮಿಸಿ ಬಾವಿಯಿಂದ ನೀರು ತರುವ ಪ್ರಸಂಗ ಬಂದೊದಗಿದೆ. ಕಳೆದ ಹದಿನೈದು ದಿನಗಳಿಂದ ಈ ನೀರಿನ ಸಮಸ್ಯೆ ಎದುರಾದರೂ ಸಹ ಸ್ಥಳೀಯ ಗ್ರಾಪಂ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಕಂದಾಯ ಇಲಾಖೆ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಅಲ್ಲಿಯ ನಿವಾಸಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ವಡ್ರಾಳ ಗ್ರಾಮದ ಜನತಾ ಪ್ಲಾಟ್ದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿದ್ದು, ಇದೀಗ ಅಲ್ಲಿಯ ಜನರು ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಈಗಾಗಲೇ ಕುಡಿಯುವ ನೀರಿನ ಯೋಜನೆಯೊಂದು ಪ್ರಾರಂಭಿಸಲಾಗಿತ್ತು. ಆದರೆ, ಅದು ಸ್ಥಗಿತಗೊಂಡಿದೆ. ಮಹಿಳೆಯರು ಮತ್ತು ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಜೀವದ ಹಂಗು ತೊರೆದು ಬಾವಿಯಲ್ಲಿ ಇಳಿದು ಒಂದು ಬಿಂದಿಗೆ ನೀರು ಮೇಲೆ ತರುವ ಪ್ರಸಂಗ ಬಂದೊದಗಿದೆ.

ವಡ್ರಾಳ ಗ್ರಾಮದ ಜನತಾ ಪ್ಲಾಟ್‌ನಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೆ ಬಂದಿದೆ. ಆದರೆ ಇಲ್ಲಿನ ಗ್ರಾಪಂ, ಗ್ರಾಮೀಣ ಕುಡಿಯುವ ನೀರು ಮತ್ತು ಕ್ಷೇತ್ರದ ಶಾಸಕರು ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ, ನೂರಾರು ಬಾರಿ ಮನವಿ ಮಾಡಿದರೂ ಸಹ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ಥಳೀಯ ಮುಖಂಡರೊಬ್ಬರು ಪ್ರತಿ ದಿನ ನೀರು ಒದಗಿಸಲಾಗುತ್ತದೆಂದು ಪ್ರತಿ ಕುಟುಂಬಕ್ಕೆ ತಲಾ 50 ರೂ. ದಂತೆ ಹಣ ವಸೂಲಿ ಮಾಡಿದ್ದಾರೆ. ಈಗ ಕೇಳಿದರೆ ನೀರು ಇಲ್ಲ ಹಣವನ್ನು ಸಹ ನೀಡುತ್ತಿಲ್ಲ, ಹೀಗಾಗಿ ಜನ ಜಾನುವಾರುಗಳಿಗೆ ಬಾವಿಯಿಂದ ನೀರು ತಂದು ಹಾಕುವಲ್ಲಿ ಇಡೀ ದಿನವೇ ಕಳೆದು ಹೋಗುತ್ತದೆ ಎಂದು ಸ್ಥಳೀಯ ಮಹಿಳೆ ಶಿವಲೀಲಾ ಪಾಟೀಲ ಕಳವಳ ವ್ಯಕ್ತಪಡಿಸಿದರು.

ವಿಫಲವಾದ ಯೋಜನೆ: ರಾಯಬಾಗ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ 12 ಹಳ್ಳಿಗಳಿಗೆ ಅನುಕೂಲವಾಗಲು ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆಯಿಂದ ಸಮರ್ಪಕ ನೀರು ಬರದಿರುವ ಕಾರಣದಿಂದ ವಡ್ರಾಳ ಗ್ರಾಮದ ಜನತಾ ಪ್ಲಾಟ್ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೂಡಲೇ ಅಧಿಕಾರಿಗಳು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕ ಅನುಷ್ಠಾನ ಮಾಡಿ ಎಲ್ಲ ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ವಡ್ರಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ವಡ್ರಾಳ ಗ್ರಾಮದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ನಿಜ. ಆದ್ದರಿಂದ ತಾವು ಗ್ರಾಮದ ಜನತಾ ಪ್ಲಾಟ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಅವಶ್ಯವಿದ್ದರೆ ವಾರದೊಳಗೆ ಒಂದು ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ.
ಕೆ.ಎಸ್‌.ಪಾಟೀಲ,
ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಪಂ, ಚಿಕ್ಕೋಡಿ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next