Advertisement

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

11:57 AM Apr 28, 2024 | Team Udayavani |

ಬೆಳಗಾವಿ: ರಾಜ್ಯದಲ್ಲಿ ಕುಟುಂಬ ರಾಜಕಾರಣದಿಂದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಪುನರಾಯ್ಕೆ ಬಯಸಿರುವ ಅಣ್ಣಾಸಾಹೇಬ ಜೊಲ್ಲೆ ಕಣದಲ್ಲಿದ್ದರೆ, ಕಾಂಗ್ರೆಸ್‌ ಪಕ್ಷ ಈಗಷ್ಟೇ ರಾಜಕೀಯಕ್ಕೆ ಕಾಲಿಟ್ಟಿರುವ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಮಣೆ ಹಾಕಿದೆ.

Advertisement

ಕಣದಲ್ಲಿ 18 ಜನ ಅಭ್ಯರ್ಥಿಗಳಿದ್ದಾರೆ. 2019ರಲ್ಲಿ ಎಂಟು ಕ್ಷೇತ್ರಗಳ ಪೈಕಿ ಬಿಜೆಪಿಯ ಆರು, ಕಾಂಗ್ರೆಸ್‌ನ ಇಬ್ಬರು ಶಾಸಕರಿದ್ದರು. 2023ರಲ್ಲಿ ಕಾಂಗ್ರೆಸ್‌ನ ಐದು, ಬಿಜೆಪಿ ಮೂವರು ಶಾಸಕರಿದ್ದಾರೆ. ಒಂದು ಕಾಲದಲ್ಲಿ ಬಿ.ಶಂಕರಾನಂದರ ಮೂಲಕ ಕಾಂಗ್ರೆಸ್‌ ಕಪಿಮುಷ್ಟಿಯಲ್ಲಿದ್ದ ಈ ಕ್ಷೇತ್ರ ಅನಂತರ ಯಾರಿಗೂ ಭದ್ರವಾದ ನೆಲೆ ಕೊಟ್ಟಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಈ ಕೋಟೆಯ ವಶಕ್ಕೆ ಆಗಾಗ ಪೈಪೋಟಿ ನಡೆದೇ ಇದೆ.

ಸಕ್ಕರೆ ಕಾರ್ಖಾನೆ ಹಾಗೂ ಡಿಸಿಸಿ ಬ್ಯಾಂಕ್‌ ರಾಜಕಾರಣದ ಜತೆಗೆ ಈ ಬಾರಿ ಜಾತಿ ಸಮೀಕರಣವೂ ಮಹತ್ವ ಪಡೆದುಕೊಂಡಿದೆ. ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಲ್ಲೂ ಒಳ ಹೊಡೆತದ ಆತಂಕ ಇದೆ. ಅದರಲ್ಲೂ ಬಿಜೆಪಿಯಲ್ಲಿ ಇದರ ಪ್ರಮಾಣ ಹೆಚ್ಚು. ಬಿಜೆಪಿಯ ಪ್ರಮುಖ ನಾಯಕರು ಅಭ್ಯರ್ಥಿಯಿಂದ ಅಂತರ ಕಾಯ್ದುಕೊಂಡಿರುವುದು, ಪ್ರಚಾರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು ಈ ಅನುಮಾನಗಳಿಗೆ ಕಾರಣವಾಗಿದೆ.

ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಪೈಪೋಟಿ ಎನ್ನುವುದಕ್ಕಿಂತಲೂ ಜಾರಕಿಹೊಳಿ ಹಾಗೂ ಜೊಲ್ಲೆ ಪ್ರಭಾವಿ ಕುಟುಂಬಗಳ ನಡುವಿನ ಕದನ ಎನ್ನಬಹುದು. ಈಗಾಗಲೇ ನಾಲ್ವರು ಶಾಸಕರನ್ನು ಹೊಂದಿರುವ ಜಾರಕಿಹೊಳಿ ಕುಟುಂಬ ಈಗ ಪ್ರಿಯಾಂಕಾ ಮೂಲಕ ಹೊಸ ಕುಡಿಯನ್ನು ರಾಜಕೀಯಕ್ಕೆ ಪರಿಚಯಿಸಿದೆ. ಪ್ರಿಯಾಂಕಾ ಗೆದ್ದರೆ ಅದೊಂದು ದಾಖಲೆಯಾಗಲಿದೆ. ಮಗಳನ್ನು ಸಂಸದೆಯನ್ನಾಗಿ ಮಾಡುವ ಸತೀಶ ಪ್ರಯತ್ನಕ್ಕೆR ಬಿಜೆಪಿ ಶಾಸಕರಾದ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಬೆಂಬಲವೂ ಇದೆ. ಆದರೆ ಚಿಕ್ಕೋಡಿ ಭಾಗದಲ್ಲಿ ಪ್ರಭಾವಿ ನಾಯಕರಾದ ಲಕ್ಷ್ಮಣ ಸವದಿ ಮತ್ತು ಪ್ರಕಾಶ ಹುಕ್ಕೇರಿ ಗುಂಪು ಜಾರಕಿಹೊಳಿ ಪ್ರಯತ್ನಕ್ಕೆ ಎಷ್ಟರಮಟ್ಟಿಗೆ ಸಹಕಾರ ನೀಡುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ. ಇದೇ ಅಂಶದ ಮೇಲೆ ಚಿಕ್ಕೋಡಿ ಚುನಾವಣೆ ಎಲ್ಲರ ಗಮನ ಸೆಳೆದಿದೆ.

ಒಳ ಹೊಡೆತದ ಭೀತಿ: ಕ್ಷೇತ್ರದ ವಾತಾವರಣ ಗಮನಿಸಿದರೆ ಇಬ್ಬರೂ ಅಭ್ಯರ್ಥಿಗಳಿಗೂ ಚುನಾವಣೆ ಸರಳವಾಗಿಲ್ಲ. ಎರಡೂ ಪಕ್ಷಗಳಲ್ಲಿ ಆಂತರಿಕ ಅಸಮಾಧಾನ ಸಾಕಷ್ಟಿದೆ. ಕ್ಷೇತ್ರದ ಜನರಲ್ಲಿ ಇಬ್ಬರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಇದ್ದರೂ ಮುಖಂಡರ ಮನಸ್ತಾಪ ಅಭ್ಯರ್ಥಿಗಳ ಮುನ್ನಡೆಗೆ ಅಡ್ಡಿಯಾಗಿದೆ. ಟಿಕೆಟ್‌ ಹ‌ಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳಲ್ಲಿ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಟಿಕೆಟ್‌ ವಂಚಿತರು ತಮ್ಮ ನೋವನ್ನು ಒಳಗೇ ನುಂಗಿಕೊಂಡರು. ಇದು ಚುನಾವಣೆ ಸಂದರ್ಭ ಎಷ್ಟರಮಟ್ಟಿಗೆ ಹೊರಬರುತ್ತದೆ ಎಂಬುದರ ಮೇಲೆ ಆಯಾ ಪಕ್ಷದ ಅಭ್ಯರ್ಥಿಯ ಹಣೆಬರಹ ನಿರ್ಧಾರವಾಗಲಿದೆ.

Advertisement

ಬಿಜೆಪಿ ಟಿಕೆಟ್‌ ಮೇಲೆ ಬಹಳ ಆಸೆ ಇಟ್ಟುಕೊಂಡಿದ್ದ ಮಾಜಿ ಸಂಸದ ರಮೇಶ ಕತ್ತಿ ಅವರಿಂದ ಬಂಡಾಯದ ಸೂಚನೆ ಸಹ ಬಂದಿತ್ತು. ಕಾಂಗ್ರೆಸ್‌ಗೆ ಸೇರುವ ಮಾತುಗಳು ಕೇಳಿಬಂದಿದ್ದು. ಬಂಡಾಯ ಶಮನವಾಗಿದೆ. ಕತ್ತಿ ಅಸಮಾಧಾನ ಚುನಾವಣೆ ಯಲ್ಲಿ ಬಿಜೆಪಿಗೆ ಸಮಸ್ಯೆ ಉಂಟು ಮಾಡಿದರೂ ಅಚ್ಚರಿ ಇಲ್ಲ.

ಇನ್ನು ಕಾಂಗ್ರೆಸ್‌ನಲ್ಲಿ ಸಹ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್‌ ನೀಡಬಾರದು ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಸತೀಶ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಈ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿವೃತ್ತ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಿಕರ ಕಾಂಗ್ರೆಸ್‌ಗೆ ಸಮಸ್ಯೆ ಉಂಟು ಮಾಡಬಹುದು ಎಂಬ ಆತಂಕವಿದೆ.

ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಪ್ರಧಾನಿ ಮೋದಿ ಅವರನ್ನೇ ನೆಚ್ಚಿಕೊಂಡಿದ್ದಾರೆ. ತಮ್ಮ ಸಾಧನೆ ಹೊರತಾಗಿ ಮೋದಿ ಅಲೆಯನ್ನೇ ಹೇಳಿಕೊಳ್ಳುವ ಅನಿವಾರ್ಯತೆ ಇದೆ. ಆದರೆ ಕಾಂಗ್ರೆಸ್‌ ಪ್ರಚಾರದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬಂದಿಲ್ಲ. ಎಲ್ಲ ನಾಯಕರು ಪ್ರಚಾರಕ್ಕೆ ಇಳಿದಿರುವುದು ಜಾರಕಿಹೊಳಿ ಕುಟುಂಬದ ಮುಖದಲ್ಲಿ ಹೊಸ ವಿಶ್ವಾಸ ಮೂಡಿಸಿದೆ.

ಪ್ರಮುಖ ಸಮಸ್ಯೆಗಳೇನು?: ಚಿಕ್ಕೋಡಿ ಜಿಲ್ಲಾ ರಚನೆ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲೆಯಾಗಲು ಎಲ್ಲ ಆರ್ಹತೆ ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂಬ ಆರೋಪ ವ್ಯಾಪಕವಾಗಿದೆ. ಇದೇ ಕಾರಣದಿಂದ ಸಾಕಷ್ಟು ಹೋರಾಟಗಳು ನಡೆದಿದ್ದರೂ ಅವು ಫಲಕಾರಿಯಾಗಿಲ್ಲ. ಇದು ಎರಡೂ ರಾಜಕೀಯ ಪಕ್ಷಗಳಿಗೆ ಬಹು ದೊಡ್ಡ ಸವಾಲಾಗಿ ಕಾಣುತ್ತಿದೆ. ಸವಳು-ಜವಳು ಈ ಭಾಗದ ಎರಡನೇ ದೊಡ್ಡ ಸಮಸ್ಯೆ. ಅತಿಯಾದ ನೀರಿನ ಬಳಕೆಯಿಂದ ಲಕ್ಷಾಂತರ ಹೆಕ್ಟೇರ್‌ ಪ್ರದೇಶ ಸವಳು-ಜವಳು ಸುಳಿಗೆ ಸಿಲುಕಿದೆ. ಇದರ ನಿವಾರಣೆಗೆ ಸಾವಿರಾರು ಕೋಟಿ ರೂ. ಅಗತ್ಯವಿದ್ದು ಸರಕಾರಗಳಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ನೋವು ರೈತರಲ್ಲಿದೆ.

ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕವಾಗಿದ್ದಾರೆ. ಜತೆಗೆ ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯ ಫಲಿತಾಂಶ ಅದಲು-ಬದಲು ಮಾಡುವ ಶಕ್ತಿ ಹೊಂದಿದ್ದಾರೆ.

 ಸಾಮರ್ಥ್ಯ:

ಪಕ್ಷದ ಉನ್ನತ ನಾಯಕರ ಜತೆ ಉತ್ತಮ ಸಂಪರ್ಕ

ಕ್ಷೇತ್ರದಲ್ಲಿ ತಮ್ಮ ಪತ್ನಿ ಸೇರಿ ಮೂವರು ಶಾಸಕರ ಬಲ

ಕೇಂದ್ರದ ಜನಪರ ಕಾರ್ಯಕ್ರಮ, ಪ್ರಧಾನಿ ಮೋದಿ ಅಲೆ

ಸಾಮರ್ಥ್ಯ:

ಜಾರಕಿಹೊಳಿ ಕುಟುಂಬದ ಕುಡಿ ಎಂಬ ಬಲ

ಕ್ಷೇತ್ರದಲ್ಲಿ ಐವರು

ಶಾಸಕರ ಶಕ್ತಿ

ಐದು ಗ್ಯಾರಂಟಿ ಯೋಜನೆಗಳ ಬಲ

ಪ್ರಧಾನಿ ಮೋದಿ ಜನಪರ ಅಲೆ, ಅಭಿವೃದ್ಧಿ ಕಾರ್ಯಗಳು ಜನರಿಗೆ ಹಿಡಿಸಿವೆ. ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬೆಂಬಲ ನೀಡಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ 8,000 ಕೋಟಿ ರೂ.ತಂದಿರುವುದು ಲಾಭವಾಗಲಿದೆ.-ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಅಭ್ಯರ್ಥಿ

ಕ್ಷೇತ್ರದಲ್ಲಿ ಒಳ್ಳೆಯ

ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಹ ಬದಲಾವಣೆ ಬಯಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಸರಕಾ  ರದ ಗ್ಯಾರಂಟಿ ಯೋಜನೆಗಳು ಮತ್ತು ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ನೆರವಿಗೆ ಬರಲಿವೆ.-ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ್‌ ಅಭ್ಯರ್ಥಿ  

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next